ಶೈಲಪುತ್ರೀ-ದುರ್ಗಾ ದೇವಿಯ ಮೊದಲ ರೂಪವನ್ನು ಶೈಲಪುತ್ರೀ ಎಂದು ಪೂಜಿಸುತ್ತಾರೆ.
ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತ ಶೇಖರಾಮ್ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ ||
“ಪರ್ವತರಾಜ ಹಿಮವಂತನ ಮಗಳಾಗಿ ಜನಿಸಿದ ಶೈಲಪುತ್ರಿಯು ವೃಷಭಾರೂಢಳಾಗಿ(ಎತ್ತು), ಅರ್ಧ ಚಂದ್ರನನ್ನು ತಲೆಯಲ್ಲಿ ಧರಿಸಿದ್ದಾಳೆ. ತ್ರಿಶೂಲ ಆಯುಧವನ್ನು ಹಿಡಿದಿದ್ದಾಳೆ. ಯಶಸ್ಸನ್ನು, ನಮ್ಮ ಕಾಮನೆಗಳನ್ನು ಪೂರೈಸುವ ಶೈಲಪುತ್ರಿಗೆ ನಾನು ವಂದಿಸುತ್ತೇನೆ.”
ದಕ್ಷನ ಮಗಳಾದ ಸತಿದೇವಿಯು ಯಜ್ಞದ ಅಗ್ನಿಯಲ್ಲಿ ಭಸ್ಮಳಾದಳು. ಅನಂತರ ಆದ್ಯಾಶಕ್ತಿಯು ಹಿಮವಂತನ ಪುತ್ರಿಯಾಗಿ ಅವತರಿಸಿದಳು. ಆದ್ದರಿಂದಲೇ ದೇವಿಯನ್ನು ಶೈಲಪುತ್ರೀ, ಪಾರ್ವತೀ, ಹೈಮಾವತೀ, ಮುಂತಾದ ಹೆಸರುಗಳಿಂದ ಕರೆಯುವುದು.
ಅವಳ ಶಕ್ತಿ ಅಪರಿಮಿತವಾದುದು. ಈಕೆಯ ಕೃಪೆ ಪಡೆಯಲೆಂದು ನವರಾತ್ರಿಯ ಮೊದಲನೇ ದಿವಸವಾದ ಪಾಡ್ಯದಂದು ಸಾಧಕರು ದುರ್ಗಾ ಮಾತೆಯ ಪ್ರಥಮ ರೂಪವಾದ ಶೈಲಪುತ್ರಿಯನ್ನು ಆರಾಧಿಸುತ್ತಾರೆ.
ಯೋಗಿಗಳು, ತಂತ್ರಸಾಧಕರು ಅಂದು ತಮ್ಮ ಮನಸ್ಸನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸಲು ಪ್ರಯತ್ನಿಸುತ್ತಾರೆ.