ಹೆಚ್ಚು ಮಾತನಾಡುವ ಕಲೆ ಹೆಣ್ಣುಮಕ್ಕಳಿಗೆ ಬಂದ ವರವೋ ಶಾಪವೋ ತಿಳಿದಿಲ್ಲ.
ಇದನ್ನ ಎಷ್ಟು ತಮಾಷೆ ಮಾಡಿದರೂ ಕೂಡ ನನ್ನ ನೆನಪಿಗೆ ಬರುವುದು ಪುರಾಣದಲ್ಲಿ ಸತಿ ಸಾವಿತ್ರಿ ಕೂಡ ಮಾತಿನ ಬಲದಿಂದಲೇ ಅಲ್ವಾ ಅವಳ ಗಂಡನ ಜೀವ ಯಮನ ಕೈ ನಿಂದ ಮರಳಿ ಪಡೆದಿದ್ದು? ಅಲ್ಲದೆ ಮಾತು ಅಕ್ಷರಗಳ ಒಡತಿಯೂ ಸರಸ್ವತಿ ಅಂದರೆ ಹೆಣ್ಣೇ ಅಲ್ವಾ?
ಹೆಣ್ಣಿಗೆ ನಾಲಿಗೆ ಸ್ವಲ್ಪ ಉದ್ದ ಎಂದು ತಮಾಷೆ ಮಾಡಿದಾಗಲೆಲ್ಲ ನನಗೆ ನೆನಪಾಗುವುದು ಮಹಾಕಾಳಿ. ರಕ್ತಬೀಜಾಸುರನನ್ನು ಸದೆಬಡಿಯಲು ಯಾರಿಂದಲೂ ಸಾಧ್ಯವಾಗದಾಗ, ನೆತ್ತರ ಹನಿ ಬಿದ್ದಲ್ಲೆಲ್ಲ ಆತ ಮತ್ತೆ ಮತ್ತೆ ಹುಟ್ಟಿದಾಗ ಉದ್ದನೆಯ ನಾಲಗೆ ಚಾಚಿ ಅವನ ಸಂಹಾರ ಮಾಡಿದ ರೀತಿ.. ಹಾಗಾದರೆ ಮಹಾಕಾಳಿಗೂ ನಾಲಗೆ ಉದ್ದ ಅಂತೀರಾ?
ಹೀಗಾಗಿ ರಕ್ತ ಮತ್ತು ಹೆಣ್ಣಿಗೆ ಅವಿನಾಭಾವ ಸಂಬಂಧ ಇದೆ ಅಂದರೆ ತಪ್ಪಿಲ್ಲ ಬಿಡಿ, ಹೆಣ್ಣು ಅಬಲೆ ಎಂದು ಗೇಲಿ ಮಾಡುವಾಗ ಪ್ರತಿ ತಿಂಗಳಿಗೆ ಮೂರು ದಿನ ನೆತ್ತರ ಹರಿಸಿ ಕೂಡ ಜೀವಂತವಾಗಿರುವ ಶಕ್ತಿ ಹೆಣ್ಣಿಗೆ ಇದೆ ಎನ್ನುವುದನ್ನು ಮರಿಯಬಾರದು.
ಒಂದು ಕಾಲದಲ್ಲಿ ಮಹಾಕಾಳಿಯ ಆರ್ಭಟಕ್ಕೆ ನಲುಗಿದ ಭೂಮಂಡಲ, ಅವಳ ಸಿಟ್ಟನ್ನು ಕಡಿಮೆ ಮಾಡಲು ಮಹಾದೇವನೇ ಎದೆಯೊಡ್ಡಿದ ಪ್ರಸಂಗ ಕೇಳಿದಾಗಲೆಲ್ಲ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂದು ಎನಿಸುವುದುಂಟು. ಆದರೆ ಈಗ ಎಲ್ಲಿ ಮಾಯವಾಯಿತು ಆ ರೋಷ ಶಕ್ತಿ ಎಲ್ಲವೂ? ಪ್ರಪಂಚದ ಗೇಲಿ, ತಮಾಷೆ ಅವಳಿಗೆ ಅಭ್ಯಾಸ ಆಗಿ ಹೋಯಿತಾ? ಹೆಣ್ಣು ಅಬಲೆ, ರಕ್ಷಕರ ಅಗತ್ಯ ಅವಳಿಗಿದೆ ಎಂಬುದು ಅವಳ ನಂಬಿಕೆಯಾಯ್ತಾ?
ಸುತ್ತಲ ಜಗತ್ತಿನ ಕಂಗಳ ನೋಟ ಅವಳನ್ನು ಅಬಲೆಯಾಗಿಸಿತೆ? ತೋಳ ಮೇಲೆ ಅರಿಯದೆ ಇಣುಕಿ ನೋಡುವ ಬಟ್ಟೆಯ ಭಾಗ, ಜಾರಿದ ಶಾಲು ಯಾವುದೇ ಕೆಟ್ಟ ಕರೆಯ ಉದ್ದೇಶವನ್ನೇ ಹೊಂದಿರದಾಗಲೂ ಕೂಡಾ.
ದಿನೇ ದಿನೇ ಹುಟ್ಟಿಕೊಳ್ಳುವ ಕಾಮದ ಕಾರಣ ಹೆಣ್ಣಿನ ಬಟ್ಟೆ, ವಯಸ್ಸು, ನಗು ಎಂದು ಪದೇ ಪದೇ ಅಣಕಿಸಿದಾಗ, ಕೈಯಲ್ಲಿ ಕೊಳಕು ಬಟ್ಟೆಯೊಂದನ್ನು ಮಡಚಿ ತನ್ನದೇನೋ ತಪ್ಪು ಎಂಬಂತೆ ಆಕೆ ಮರೆಮಾಚಿ ನಡೆವಾಗ, ನಾವು ಭಾಗವಾಗಿರುವ ಸಮಾಜದ ನಡುವೆ ಆಕೆ ಬೆತ್ತಲಾದಾಗ…. ಅಲ್ಲಿ ಬೇಸತ್ತು ಅಬಲೆ ಆದಳು ಹೆಣ್ಣು …
ಹಾಗಾದರೆ ಆ ಶಕ್ತಿಯ, ಆ ಚಾಣಕ್ಯತನದ ಕೊಲೆಗಟುಕರು ನಾವೇ ಅಲ್ವಾ?
ಸಬಲಳಾಗಿದ್ದ ಅವಳನ್ನು ಜಗತ್ತಿನ ಕೊಂಕು, ಕಟ್ಟುಪಾಡಿಗೆ ಸೆರೆಯಾಗಿಸಿ ಅಬಲೆ ಎಂಬ ಪಟ್ಟಕಟ್ಟಿದ, ಶಕ್ತಿಯನ್ನು ಕೊಂದು ಹೆಣ್ಣಿಗೆ ರಕ್ಷಣೆ ಬೇಕು ಎಂದು ಜಗಕೆ ಸುಳ್ಳು ಮಾಹಿತಿ ನೀಡಿ, ಶೂಲ ಹಿಡಿದ ಕೈಗೆ ಶೀಲದ ದಿಗ್ಬಂಧನ ಹಾಕಿ, ರುಂಡ ಮಾಲೆಯ ಜಗದಲಿ ನೇಣು ಪಾಶವ ಬಿಗಿದು, ರುಧಿರ ಸಮುದ್ರ ಹರಿಸಿ ರುಂಡ ಚೆಂಡಾಡಿದ ಅವಳನ್ನ ರಕ್ತ ಹರಿದಾಗಲೆಲ್ಲ ಅಶುದ್ಧ ಎಂದು ಕರೆದಾಗ, ಸಮಾಜದ ಭಾಗವಾಗಿ ಸುಮ್ಮನಿರುವ ನಾನು….. ನೀವು…… ಅಲ್ಲವೇ ಶಕ್ತಿಯ ಕತ್ತು ಹಿಸುಕಿದ ಕೊಲೆಗಟುಕರು?
ತೇಜಸ್ವಿನಿ