Advertisement
ಮಹಿಷಮರ್ದಿನಿಯಾದ ದುರ್ಗಾದೇವಿ ಒಂಬತ್ತು ರಾತ್ರಿಗಳಲ್ಲಿ ಚಂಡ-ಮುಂಡ, ಧೂಮ್ರ ಲೋಚನ, ರಕ್ತಬೀಜ, ಶುಂಭ ನಿಶುಂಭ ಮುಂತಾದ ರಾಕ್ಷಸರನ್ನು ಕೊಂದು ಲೋಕಕ್ಕೆ ನೆಮ್ಮದಿಯಿತ್ತ ಮಹಾಮಾತೆ. ದುರ್ಗಾದೇವಿಯ ದುಷ್ಟ ಸಂಹಾರ ರೂಪವಾದ ಮಹಾಕಾರ್ಯಕ್ಕೆ ನಡೆಸುವ ಕೃತಜ್ಞತಾ ರ್ಪಣೆಯೇ ಈ ನವರಾತ್ರಿ ಹಬ್ಬ. ಅಮಾವಾಸ್ಯಾ ಸಂಬಂಧ ರಹಿತವಾದ ಆಶ್ವಯುಜ ಶುಕ್ಲ ಪಾಡ್ಯ ತಿಥಿಯಿಂದ ಒಂಬತ್ತು ತಿಥಿಗಳಲ್ಲಿ ಒಂಬತ್ತು ರೂಪದಲ್ಲಿ ಶಕ್ತಿದೇವತೆಯಾದ ದುರ್ಗೆಯ ಆರಾಧನೆ ನಡೆಯುತ್ತದೆ. ಆದ್ದರಿಂದ ತಿಥಿಯು ಹ್ರಸ್ವವಾಗಿ ಉಪರಿಯಾಗಿ ಬಂದಾಗ ಒಂದೇ ದಿನ ಎರಡು ದಿನದ ದುರ್ಗಾಪೂಜೆ ಮಾಡುವ ಪ್ರಸಂಗವೂ ಇದೆ. ತಿಥಿಯು ಅಧಿಕವಾದಾಗ ಹತ್ತು ದಿನಗಳ ನವರಾತ್ರಿ ಪೂಜೆಯಾಗುವುದು. ಹಗಲಿನಲ್ಲಿ ಉಪವಾಸವಿದ್ದು ರಾತ್ರಿ ಪೂಜೆಯ ಅನಂತರ ಭೋಜನ ಮಾಡುವ ಕ್ರಮಕ್ಕೆ ನಕ್ತವ್ರತವೆಂದು ಹೆಸರು. ಮಧ್ಯಾಹ್ನವೇ ದುರ್ಗಾಪೂಜೆಯನ್ನು ಮಾಡಿ ಭೋಜನ ಮಾಡುವ ಕ್ರಮವೂ ಇದೆ. ಶಕ್ತರಾದವರು ನವರಾತ್ರಿಯ ಒಂಬತ್ತೂ ದಿನಗಳಲ್ಲಿ ಉಪವಾಸವಿದ್ದು ವಿಜಯ ದಶಮೀ ದಿನವೇ ಭೋಜನವನ್ನು ಮಾಡಿ ವ್ರತವನ್ನು ಸಮಾಪ್ತಿಗೊಳಿಸಬಹುದು. ಇದು ಅತೀ ಪುಣ್ಯ ಫಲಪ್ರದ. ಒಟ್ಟಿನಲ್ಲಿ ನವರಾತ್ರಿಯ ದುರ್ಗಾ ಪೂಜೆಯಲ್ಲಿ ಉಪವಾಸವೂ ಒಂದು ಪ್ರಧಾನ ಅಂಗವಾಗಿದೆ. ದುರ್ಗಾ, ಆರ್ಮಾ, ಭಗವತೀ, ಕುಮಾರೀ, ಅಂಬಿಕಾ, ಮಹಿಷಮರ್ದಿನೀ, ಚಂಡಿಕಾ, ಸರಸ್ವತೀ, ವಾಗೀಶ್ವರೀ ಎಂಬ ಹೆಸರಿನಲ್ಲಿ ನವದುರ್ಗೆಯರನ್ನು ಕಲೊ³àಕ್ತ ವಿಧಾನದಿಂದ ಪೂಜಿ ಸುವುದು ನವರಾತ್ರಿಯ ಪೂಜಾವಿಧಿಯಾಗಿದೆ.
ಸರಸ್ವತೀ ಪೂಜೆ – ಪುಸ್ತಕ ಪೂಜೆ: ನವರಾತ್ರಿಯ ಮಧ್ಯದಲ್ಲಿ ಬರುವ ಮೂಲಾ ನಕ್ಷತ್ರದಂದು ಸರಸ್ವತೀ ಪೂಜೆಯ ಆರಂಭ. ಶ್ರವಣ ನಕ್ಷತ್ರದಂದು ವಿಸರ್ಜನೆ. “ಮೂಲೇ ನಾವಾಹಯೇದ್ ದೇವೀಂ ಶ್ರವಣೇನ ವಿಸರ್ಜಯೇತ್|’ ಎಂದು ಶಾಸ್ತ್ರ ವಚನ. ಮಧ್ಯಾಹ್ನ ವ್ಯಾಪಿ ಮೂಲಾ ನಕ್ಷತ್ರದ ದಿನದಂದು ಮನೆಯ ದೇವರ ಸಮೀಪದಲ್ಲಿ ಮಣೆ ಅಥವಾ ವ್ಯಾಸಪೀಠದಲ್ಲಿ ವೇದ, ಭಗವದ್ಗೀತೆ, ರಾಮಾಯಣಾದಿ ಪುಸ್ತಕಗಳನ್ನು ಸೇರಿಸಿ ಇಡಬೇಕು. ಪ್ರಾಚೀನ ತಾಡವಾಲೆ ಗ್ರಂಥಗಳು ಮನೆಯಲ್ಲಿದ್ದರೆ ಅದನ್ನು ಶುದ್ಧಗೊಳಿಸಿ ಪೀಠದಲ್ಲಿ ಡಬೇಕು. ಶಾರದೆಗೆ ಪ್ರಿಯವಾದ ವೀಣೆ, ಅಕ್ಷರ ಮಾಲೆಗಳನ್ನೂ ಪೂಜೆಗೆ ಇಡಬಹುದು. ಇವುಗಳಲ್ಲಿ ಶಾರದೆಯನ್ನು ಆವಾಹಿಸಿ ಪುಷ್ಪ ಮಾಲೆಗಳಿಂದ ಅಲಂಕರಿಸಿ ಪಂಚಕಜ್ಜಾಯವನ್ನು ನಿವೇದಿಸಿ ಸರಸ್ವತೀ ದೇವಿಗೆ ಆರತಿಯನ್ನು ಬೆಳಗಬೇಕು. ಮಧ್ಯಾಹ್ನ ವ್ಯಾಪಿ ಶ್ರವಣ ನಕ್ಷತ್ರವಿರುವ ದಿನ ಶಾರದಾ ಪೂಜೆ ಮಾಡಿ ಶಾರದಾ ವಿಸರ್ಜನೆ ಮಾಡಬೇಕು. ಸಾಮಾನ್ಯವಾಗಿ ಸಪ್ತಮೀ ತಿಥಿಯಿಂದ ದಶಮೀ ತಿಥಿಯ ತನಕ ಈ ಶಾರದಾ ಪೂಜೆ ಇರುತ್ತದೆ. ಪುಸ್ತಕ ಪೂಜೆ ಆರಂಭವಾಗಿ ಶಾರದಾ ವಿಸರ್ಜ ನೆಯ ತನಕ ಅಧ್ಯಯನ ಮಾಡುವಂತಿಲ್ಲ. ಶಾರದಾ ವಿಸರ್ಜನೆಯಾದ ಬಳಿಕ ಅದೇ ದಿನ ಸರಸ್ವತೀಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಅಧ್ಯಯನವನ್ನು ಪ್ರಾರಂಭಿಸಬೇಕು. ಈ ದಿನ ಸ್ವಲ್ಪವಾದರೂ ಓದುವ, ಬರೆಯುವ ಪದ್ಧತಿ ಇರುವುದು.
Related Articles
Advertisement
ವಿಜಯದಶಮೀ: ಶುಂಭ-ನಿಶುಂಭಾದಿ ಅಸು ರರ ಸಂಹಾರದಿಂದ ಸಂತೋಷಗೊಂಡ ದೇವತೆಗಳು ವಿಜಯೋತ್ಸವವನ್ನು ಆಚರಿಸಿದ ದಿನವೇ ವಿಜಯ ದಶಮೀ. ಅಜ್ಞಾತವಾಸವನ್ನು ಮುಗಿಸಿದ ಪಾಂಡವರು ಶಮೀ ವೃಕ್ಷದಲ್ಲಿದ್ದ ತಮ್ಮ ಆಯು ಧಗಳನ್ನು ತೆಗೆದು ಪೂಜಿಸಿದ ದಿನವೂ ಇದೇ ಆಗಿದೆ. ಆದ್ದರಿಂದ ಇದು ವಿಜಯದ ಶಮೀ. ಇಂದು ಶಮೀ ವೃಕ್ಷಕ್ಕೆ ನೀರೆರೆದು ಪೂಜಿಸುವುದೂ ಉಚಿತವಾಗಿದೆ. ಗ್ರಾಮಸ್ಥರೆಲ್ಲ ಒಟ್ಟಿಗೆ ಮೆರವಣಿಗೆಯಲ್ಲಿ ತೆರಳಿ ಶಮೀಪೂಜೆ ಮಾಡುವ ಪದ್ಧತಿ ಇದೆ. ಶಮೀಪೂಜೆ ಮಾಡಿದ ಬಳಿಕ ಸೀಮೋಲ್ಲಂಘನ ಮಾಡಿ ಗ್ರಾಮದ ಗಡಿ ದಾಟುವ ಕ್ರಮವೂ ಇದೆ. ರಾಜರು ಈ ದಿನ ದಂಡಯಾತ್ರೆ ಪ್ರಾರಂಭಿಸಿದಲ್ಲಿ ವಿಜಯ ಪ್ರಾಪ್ತಿಯೆಂದು ಶಾಸ್ತ್ರ ವಚನಗಳಿವೆ.
ದುರ್ಗಾದೇವಿಯು ಸಂಹರಿಸಿದ ಅಸುರೀ ಶಕ್ತಿಗಳ ಹೆಸರುಗಳು ತುಂಬಾ ಸಾಂಕೇತಿಕ. ನಮ್ಮಲ್ಲಿರುವ ಪಾಶವೀ ಪ್ರವೃತ್ತಿಗಳೇ ಮಹಿಷಾಸುರ, ನಿರಪರಾಧಿಗಳ ಮೇಲೆ ಗುಂಡು ಹಾರಿಸುವುದು. ಸಾರ್ವಜನಿಕರ ಸೊತ್ತು ಲೂಟಿ ಮಾಡುವುದು. ಹಿಂಸಾತ್ಮಕ ನಡವಳಿಕೆಗಳೇ ಮಹಿಷಾಸುರನ ಸಂಕೇತ. ಕಾಮ- ಕ್ರೋಧಗಳೇ ಮಧುಕೈತಂಭರು, ಮದ-ಮತ್ಸರಗಳೇ ಚಂಡ-ಮುಂಡರು, ನಿಗ್ರಹಿಸಿದಷ್ಟು ಹೆಚ್ಚಾಗುವ ಆಸೆಗಳೇ ರಕ್ತಬೀಜಾಸುರ, ಈ ಅಸುರಶಕ್ತಿಗಳೆಲ್ಲ ನಮ್ಮೊಳಗೇ ಇವೆ. ಇವರ ಸಂಹಾರಕ್ಕಾಗಿ ತಾಯಿ ದುರ್ಗೆ ನಮ್ಮ ಅಂತರಂಗದೊಳಗೆ ಇಳಿದು ಬರಬೇಕು. ಅದಕ್ಕಾಗಿಯೇ ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆ. ಜಗತ್ತಿನಲ್ಲಿ ಸಮಷ್ಟಿಯ ಒಳಿತಿಗಾಗಿ ಕೆಡುಕಿನ ಸಂಹಾರವಾಗಲಿ. ಧರ್ಮದ ಮಾರ್ಗದಲ್ಲಿ ಜಗದ ಪರಿಪಾಲನೆಯಾಗಲಿ ಎಂದು ಜಗನ್ಮಾತೆಯಲ್ಲಿ ಸಲ್ಲಿಸುವ ಪ್ರಾರ್ಥನೆ.
ಲೋಕಾಃ ಸಮಸ್ತಾಃ ಸುಖೀನೋ ಭವಂತು.
ಡಾ| ಡಿ. ಶಿವಪ್ರಸಾದ ತಂತ್ರಿ
(ಲೇಖಕರು: ಜೋತಿಷಿ ಪ್ರಾಧ್ಯಾಪಕರು, ಸಂಸ್ಕೃತ ಮಹಾವಿದ್ಯಾಲಯ, ಉಡುಪಿ)