Advertisement

ನವರಾತ್ರಿ ಸಂಭ್ರಮ : ಕರಾವಳಿಯ ದೇವಾಲಯಗಳಲ್ಲಿ ಭಕ್ತ ಸಮೂಹ

11:42 PM Oct 18, 2020 | mahesh |

ಮಂಗಳೂರು/ಉಡುಪಿ: ಕರಾವಳಿ ಯಲ್ಲಿ ನವರಾತ್ರಿ ಸಂಭ್ರಮ ಮನೆಮಾಡಿದ್ದು, ರವಿವಾರ ವಿವಿಧ ದೇವಿ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಮಂಗಳೂರು ಸಹಿತ, ಪೊಳಲಿ, ಕಟೀಲು, ಉಡುಪಿ ಜಿಲ್ಲೆಯ ಕೊಲ್ಲೂರು ದೇಗುಲದಲ್ಲಿ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

Advertisement

ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ದೇವಾಲಯಗಳಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ನವರಾತ್ರಿ ಉತ್ಸವದ ಮೊದಲ ರವಿವಾರವಾದ್ದರಿಂದ ಬಹುತೇಕ ದೇವಾಲಯಗಳಲ್ಲಿ ಒಮ್ಮೆಗೆ ಕನಿಷ್ಠ 100 ಮಂದಿ ಯಂತೆ ಬೆಳಗ್ಗಿನಿಂದ ರಾತ್ರಿಯವರೆಗೆ ಸಾವಿರಾರು ಭಕ್ತರು ಆಗಮಿಸಿದ್ದರು. ದೇವಾಲಯಗಳಿಗೆ ಆಗಮಿಸುವ ಭಕ್ತರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವ ನಿಯಮಕ್ಕೆ ಆದ್ಯತೆ ನೀಡಿರುವುದು ಉಲ್ಲೇಖನೀಯ.

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ರವಿವಾರ ಬೆಳಗ್ಗಿನಿಂದ ರಾತ್ರಿಯವರೆಗೆ ಸಾವಿರಾರು ಭಕ್ತರು ಆಗಮಿಸಿದ್ದರು. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿಯೂ ಬೆಳಗ್ಗಿನಿಂದ ರಾತ್ರಿಯವರೆಗೆ ಸಾವಿರಾರು ಭಕ್ತರು ಆಗಮಿಸಿದ್ದರು. ದೇವಾಲಯಕ್ಕೆ ಆಗಮಿಸಿದ ಎಲ್ಲ ಭಕ್ತರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಮಾಸ್ಕ್ ಧರಿಸುವ ನಿಯಮ ಪಾಲನೆಗೆ ಒತ್ತು ನೀಡಿದರು.

ಕೊಡಿಯಾಲ್‌ಬೈಲ್‌ನ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ, ಬೋಳಾರ ಶ್ರೀ ಮಾರಿಯಮ್ಮ ದೇವಸ್ಥಾನ ಸೇರಿದಂತೆ ನಗರದ ಎಲ್ಲ ದೇವಾಲಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪೊಳಲಿಯಲ್ಲಿ ಹೆಚ್ಚಿನ ಭಕ್ತರು
ಬಂಟ್ವಾಳ: ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ರವಿವಾರ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಕಂಡು ಬಂದರು. ಬೆಳಗ್ಗಿನಿಂದಲೇ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದು, ರಾತ್ರಿವರೆಗೂ ಭಕ್ತರ ದಂಡು ಕಂಡುಬಂತು.

Advertisement

ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡು ಭಕ್ತರಿಗೆ ಎಲ್ಲ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ತಿಳಿಸಿದ್ದಾರೆ.

ಕೊಲ್ಲೂರು ದೇಗುಲ
ಕೊಲ್ಲೂರು: ಜಿಲ್ಲೆಯ ಖ್ಯಾತ ದೇವಿ ದೇಗುಲ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದರು. ಭಕ್ತರಿಗೆ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಕಾಯ್ದು ಸ್ಯಾನಿಟೈಸ್‌ ಬಳಸಿ ದೇವಿಯ ದರ್ಶನಕ್ಕೆ ಅನುವು ಮಾಡಿ ಕೊಡಲಾಯಿತು. ದೇಗುಲದಲ್ಲಿ ಭೋಜನ ವ್ಯವಸ್ಥೆ ಏರ್ಪಡಿಸಲಾಗಿದ್ದು ಸರಕಾರದ ಆದೇಶದಂತೆ ಕ್ರಮ ಕೈಗೊಳ್ಳಲಾಗಿತ್ತು. ಭಕ್ತರ ಸಕಲ ಸೌಕರ್ಯದ ಜವಾಬ್ದಾರಿಯನ್ನು ಜಿಲ್ಲಾಡಳಿತವು ವಹಿಸಿತ್ತು. ವಿಶೇಷ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನವರಾತ್ರಿ ಪ್ರಯುಕ್ತ ರವಿ ವಾರ ಸಾವಿರಾರು ಭಕ್ತರು ಭೇಟಿ ನೀಡಿದ್ದು, ಹೆಚ್ಚಿನ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ. ವ್ಯವಸ್ಥಿತ ಸರತಿ ಸಾಲಿನ ಮೂಲಕ ಭಕ್ತರನ್ನು ದೇಗುಲಕ್ಕೆ ಹಾಗೂ ಭೋಜನಾಲಯಕ್ಕೆ ಬಿಡಲಾಗುತ್ತಿತ್ತು.

ಅಕ್ಷರಾಭ್ಯಾಸ ರದ್ದು
ಬಿಸಿಲು ಮತ್ತು ಮಳೆಯ ರಕ್ಷಣೆಗೆ ಭಕ್ತರ ಸರತಿ ಸಾಲಿಗಾಗಿ ತಾತ್ಕಾಲಿಕ ಮೇಲ್ಛಾವಣಿ ನಿರ್ಮಿಸಲಾಗಿದೆ. ಲಲಿತಾ ಪಂಚಮಿಯ ದಿನ ಮಹಿಳಾ ಭಕ್ತರಿಗೆ ವಿತರಿಸಲಾಗುತ್ತಿದ್ದ ದೇವರ ಶೇಷ ವಸ್ತ್ರವನ್ನು ಈ ಬಾರಿ ಕೋವಿಡ್‌ ಕಾರಣದಿಂದ ರದ್ದುಪಡಿಸಲಾಗಿದೆ. ನವರಾತ್ರಿಯ ಮಹಾನವಮಿ, ವಿಜಯದಶಮಿ ದಿನ ಮಕ್ಕಳಿಗೆ ಅಕ್ಷರಾಭ್ಯಾಸ ಇದ್ದು ಈ ಬಾರಿ ಅದನ್ನು ಕೈಬಿಡಲಾಗಿದೆ. ನವರಾತ್ರಿ ದಿನಗಳಲ್ಲಿ ವಿಶೇಷ ಅಲಂಕಾರಕ್ಕಾಗಿ ಅಪರಾಹ್ನ 3ರಿಂದ 5ರ ವರೆಗೆ ದೇವರ ದರ್ಶನ ಇರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ. ಭಕ್ತರ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಈ ಬಾರಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರಿಂದ ರಸ್ತೆ ಬ್ಲಾಕ್‌ನಂತಹ ಸಮಸ್ಯೆಗಳು ಕಡಿಮೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next