Advertisement

ನವರಾತ್ರಿ ಇಂದಿನ ಆರಾಧನೆ; ದುಷ್ಟ ಸಂಹಾರಕ್ಕೆಂದೇ ಜನಿಸಿದವಳು ಕಾತ್ಯಾಯಿನಿ

04:59 PM Sep 30, 2022 | Team Udayavani |

ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ. ಒಂಭತ್ತು ಅವತಾರಗಳಲ್ಲಿ ಆರನೇ ಅವತಾರವೇ ಕಾತ್ಯಾಯಿನಿ ದೇವಿ.

Advertisement

ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಆರಾಧಿಸಲಾಗುತ್ತದೆ. ಒಮ್ಮೆ ಕಾತ್ಯಾಯನ್‌ ಎನ್ನುವ ಋಷಿಯು ಪಾರ್ವತಿ ದೇವಿಯಂತಹ ಮಗಳನ್ನು ಪಡೆಯಬೇಕು ಎಂದು ಆಶಿಸಿ, ಭಕ್ತಿಯಿಂದ ತಪಸ್ಸನ್ನು ಕೈಗೊಳ್ಳುತ್ತಾರೆ. ಮಹರ್ಷಿ ಕಾತ್ಯಾಯನರು ಭಗವತಿ ಪರಾಂಬಿಕೆಯ ಉಪಾಸನೆ ಮಾಡುತ್ತಾ, ಅನೇಕ ವರ್ಷಗಳವರೆಗೆ ಕಠಿಣ ತಪಸ್ಸನ್ನಾಚರಿಸುತ್ತಾರೆ. ಅವರ ಪ್ರಾರ್ಥನೆ, ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ಮಾತೆಯು ಆಶೀರ್ವಾದ ಮಾಡುತ್ತಾಳೆ.

ದೇವಿಯು ಕಾತ್ಯಾಯನಿಯಾಗಿ ಜನಿಸುತ್ತಾಳೆ. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯಿನಿ ಎಂದು ಹೆಸರಿಡುತ್ತಾರೆ. ಕಾತ್ಯಾಯಿನಿಯು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ದುಷ್ಕೃತ್ಯ ಎಸಗುವ ರಾಕ್ಷಸರ ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸಿದಳು. ದುಷ್ಟ ರಾಕ್ಷಸರ ಸಂಹಾರಕ್ಕಾಗಿ ದುರ್ಗಾದೇವಿಯು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ.

ಸಿಂಹವಾಹಿನಿಯಾಗಿ ಬಂಗಾರ ವರ್ಣವನ್ನು ಹೊಂದಿದ ಈಕೆಯನ್ನು ನವರಾತ್ರಿಯ ಆರನೇ ದಿನ ಪೂಜಿಸುತ್ತಾರೆ. ಅಂದು ಸಾಧಕನ ಮನಸ್ಸು ಆಜ್ಞಾಚಕ್ರದಲ್ಲಿ ನೆಲೆಗೊಳ್ಳುತ್ತದೆ. ಇದರಿಂದ ಚತುರ್ವಿಧ ಫ‌ಲಪುರುಷಾರ್ಥಗಳ ಪ್ರಾಪ್ತಿಯಾಗುವುದರೊಂದಿಗೆ ರೋಗ, ಶೋಕ, ಭಯ, ಸಂತಾಪ ದೂರಾಗುತ್ತವೆ ಹಾಗೂ ಪೂರ್ವಜನ್ಮ ಕೃತ ಪಾಪನಾಶವಾಗುತ್ತವೆ. ದೇವಿಯ ಇಷ್ಟ ನೈವೇದ್ಯ ಹುಗ್ಗಿಯನ್ನು ನೈವೇದ್ಯಮಾಡಿ ಪೂಜಿಸುವುದು ಶ್ರೇಷ್ಠ ಎನ್ನಲಾಗುತ್ತದೆ.

ದೇವಿ: ಕಾತ್ಯಾಯಿನಿ
ಬಣ್ಣ : ಕೆಂಪು
ದಿನಾಂಕ : 01/10/2022, ಶನಿವಾರ

Advertisement

(ಡಾ.ನವೀನ್‌, ತಂತ್ರಯೋಗಿಗಳು, ಆರ್ಯುವೇದ ವೈದ್ಯರು, ಶಿವಮೊಗ್ಗ )

 

Advertisement

Udayavani is now on Telegram. Click here to join our channel and stay updated with the latest news.

Next