ಜಗನ್ಮಾತೆ ದುರ್ಗಾ ದೇವಿಯು , ಸೃಷ್ಟಿಯನ್ನು ಕಾಪಾಡಲು ಒಂಭತ್ತು ಅವತಾರಗಳು ಎತ್ತಿ ನವರೂಪಿಣಿಯಾಗಿದ್ದಾಳೆ. ದೇಶದ ಪ್ರತಿಯೊಂದು ಕಡೆಗಳಲ್ಲೂ ವಿಭಿನ್ನ ಹೆಸರಿನಿಂದ, ವಿಭಿನ್ನ ರೀತಿಯಲ್ಲಿ ಆಚರಿಸಲ್ಪಡುವ ಈ ನವರಾತ್ರಿ ಹಬ್ಬದಲ್ಲಿ ಎಂಟನೇ ದಿನ ಆರಾಧಿಸಲ್ಪಡುವ ದೇವಿಯೆಂದರೆ ಅದು ಮಹಾಗೌರಿ.
ಮಹಾದೇವ ಶಿವನನ್ನು ವರಿಸುವ ಸಲುವಾಗಿ ಪಾರ್ವತಿ ದೇವಿ ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಸುದೀರ್ಘ ದಿನಗಳ ಘೋರ ತಪಸ್ಸಿನಿಂದಾಗಿ ಆಕೆಯ ಶರೀರದ ಚರ್ಮ ಸುಟ್ಟು, ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. ಪ್ರಕೃತಿ ವಿಕೋಪದಿಂದ ಕಪ್ಪು ಬಣ್ಣವಾಗಿದ್ದ ಅವಳ ಶರೀರವನ್ನು ಪರಮೇಶ್ವರನು, ಗಂಗಾ ನದಿಯಲ್ಲಿ ಶುದ್ಧಗೊಳಿಸುತ್ತಾನೆ.
ನಂತರ ಆಕೆಯನ್ನು ತನ್ನ ಪತ್ನಿಯಾಗಿ ಸ್ವೀಕರಿಸಿದನು ಎಂದು ಹೇಳಲಾಗುತ್ತದೆ. ಕರಿದಾದ ಬಣ್ಣದಿಂದ ಕೂಡಿದ್ದ ದೇವಿ ಗಂಗೆಯ ಸ್ನಾನದ ನಂತರ ಬಿಳಿ ವರ್ಣಕ್ಕೆ ತಿರುಗುತ್ತಾಳೆ. ಕಪ್ಪಿನಿಂದ ಗೌರ ಬಣ್ಣಕ್ಕೆ ಅಂದರೆ ಬಿಳಿ ಬಣ್ಣ ತಿರುಗಿದ ದೇವಿಯನ್ನು ಗೌರಿ ಅಥವಾ ಮಹಾಗೌರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಎಂಬ ಪ್ರತೀತಿ ಇದೆ.
ನವರಾತ್ರಿಯ ಎಂಟನೇ ದಿನದಂದು ಪೂಜಿಲ್ಪಡುವ ದೇವಿ ಮಹಾಗೌರಿಯು ನಾಲ್ಕು ತೋಳುಗಳನ್ನು ಹೊಂದಿದ್ದು, ಗೂಳಿಯ ಮೇಲೆ ಸವಾರಿ ಮಾಡುತ್ತಾಳೆ. ಬಲಗೈಲಿ ಅಭಯ ಮುದ್ರೆ, ಇನ್ನೊಂದು ಕೈಯಲ್ಲಿ ತ್ರಿಶೂಲ ಹಾಗೂ ಡಮರುಗವನ್ನು ಹಿಡಿದಿರುತ್ತಾಳೆ. ಮತ್ತೂಂದು ಕೈಯಲ್ಲಿ ವರದ ಮುದ್ರೆಯನ್ನು ಹೊಂದಿರುತ್ತಾಳೆ.
ಮಹಾಶಕ್ತಿಯ ಅವತಾರವಾದ ಮಹಾಗೌರಿ ಉಪಾಸನೆ ಭಕ್ತರಿಗೆ ಸನ್ಮಂಗಳವನ್ನು ಉಂಟುಮಾಡುತ್ತದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ನೈವೇದ್ಯವನ್ನಿಟ್ಟು ವಿಜೃಂಭಣೆಯಿಂದ ಮಹಾಗೌರಿಯನ್ನು ಪೂಜಿಸಲಾಗುತ್ತದೆ.
(ಸ್ವಾಮಿ ವಿಜಯಾನಂದ, ಆನಂದಾಶ್ರಮ, ಬೇವಿನಕೊಪ್ಪ, ಬೈಲಹೊಂಗಲ)
ದೇವಿ: ಮಹಾಗೌರಿ
ಬಣ್ಣ : ಬಿಳಿ
ದಿನಾಂಕ : 03/10/2022,
ಸೋಮವಾರ