Advertisement

ಪಂಚಾಯತ್‌ ಮಟ್ಟದಲ್ಲಿ ನವೋದಯ ಮಾದರಿ ಶಾಲೆ: D.K.ಶಿವಕುಮಾರ್‌ 

12:23 AM May 30, 2023 | Team Udayavani |

ಬೆಂಗಳೂರು: ಪ್ರತಿ ಯೊಂದು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನವೋದಯ ಮಾದರಿಯ ಉನ್ನತ ಗುಣ ಮಟ್ಟದ ಶಾಲೆ ಆರಂಭಿಸುವ ಬಗ್ಗೆ ಈಗಾಗಲೇ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಅದರ ಕಾರ್ಯಗತ ಸಂಬಂಧ ಶಿಕ್ಷಣ ಸಚಿವರ ಜತೆಗೆ ಈ ಬಗ್ಗೆ ಚರ್ಚೆಸಿ ನಡೆಸಿ ಮುಂದಿನ ಹೆಜ್ಜೆ ಇರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Advertisement

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಳ್ಳಿಯ ಮಕ್ಕಳು ಶಿಕ್ಷಣಕ್ಕಾಗಿ ಹಳ್ಳಿಯಿಂದ ನಗರಕ್ಕೆ ಬರುವುದನ್ನು ತಲುಪಿಸುವ ಸಲುವಾಗಿ ಸರಕಾರ ಯೋಜನೆ ರೂಪಿಸಲಿದೆ. ಈ ಉದ್ದೇಶ ಈಡೇರಿಕೆ ಗಾಗಿಯೇ ಈಗಾಗಲೇ ಪ್ರತಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನವೋದಯ ಮಾದರಿಯ ಉನ್ನತ ಗುಣಮಟ್ಟದ ಶಾಲೆ ಆರಂಭಿಸುವ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪನೆ ಮಾಡಲಾಗಿದೆ. ಸಚಿವ ಪರಮೇಶ್ವರ್‌ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಜತೆಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನಾನು ಓದಿದ ಶಾಲೆಗೆ ಭೇಟಿ ನೀಡಿ ಗುರುಗಳಾದ ಗೋಪಾಲಕೃಷ್ಣ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಅವರು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಸಾಧನೆ ಮಾಡಿದ್ದಾರೆ. ನ್ಯಾಷನಲ್‌ ಪಬ್ಲಿಕ್‌ ಶಾಲೆ ದೇಶದಲ್ಲೇ ಮೊದಲ ಸ್ವಾಯತ್ತ ಶಾಲೆ ಯಾಗಿದೆ. ಪ್ರತಿ ಪಂಚಾಯತ್‌ ಮಟ್ಟದಲ್ಲಿ ನವೋದಯ ಮಾದರಿಯ ಉನ್ನತ ಗುಣಮಟ್ಟದ ಶಾಲೆ ಆರಂಭಿಸಬೇಕು ಎಂಬುವುದು ನಮ್ಮ ಸರಕಾರದ ಉದ್ದೇಶವಾಗಿದೆ. ಇದನ್ನು ಯಾವ ರೀತಿ ಮಾಡಬೇಕು ಎಂದು ಮಾರ್ಗದರ್ಶನ ನೀಡಬೇಕು ಎಂದು ಗೋಪಾಲಕೃಷ್ಣ ಅವರ ಬಳಿ ಮನವಿ ಮಾಡಿದ್ದೇನೆ ಎಂದರು.

ಟೀಕೆಗೆ ಉತ್ತರ ನೀಡುತ್ತೇವೆ
ಕಾಂಗ್ರೆಸ್‌ ಪ್ರಣಾಳಿಕೆ ಭರವಸೆ ಜಾರಿ ಅಸಾಧ್ಯ ಎಂಬ ವಿಪಕ್ಷ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್‌, ಟೀಕೆ ಮಾಡುವವರಿಗೆ, ಸಲಹೆ ನೀಡುವವರಿಗೆ ಬೇಡ ಎನ್ನಲು ಸಾಧ್ಯವಿಲ್ಲ. ಟೀಕೆ ಮಾಡುವವರು ಮಾಡಲಿ. ನಾವು ಕೆಲಸ ಮಾಡಿ ಉತ್ತರ ನೀಡುತ್ತೇವೆ ಎಂದರು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಯಾರಿಗೂ ತೊಂದರೆ ಆಗಬಾರದು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು. ಹೀಗಾಗಿ ಇಲಾಖಾವಾರ ಅಧಿಕಾರಿಗಳ ಸಭೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

1ರಿಂದ 10ನೇ ತರಗತಿಗೆ “ಸೇತುಬಂಧ”
ಬೆಂಗಳೂರು, ಮೇ 29: ಒಂದರಿಂದ ಮೂರನೇ ತರಗತಿಗೆ ಆರಂಭದ 30 ದಿನಗಳು ಹಾಗೂ 4ರಿಂದ 10ನೇ ತರಗತಿ ಮಕ್ಕಳಿಗೆ 15 ದಿನಗಳ ಕಾಲ “ಸೇತುಬಂಧ’ ಕಾರ್ಯಕ್ರಮ ನಡೆಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸೂಚಿಸಿದೆ. ಶಾಲೆಯ ಆರಂಭದಲ್ಲೇ ನಿಗದಿತ ದಿನಗಳ ಕಾಲ ಈ ಚಟುವಟಿಕೆ ನಡೆಸುವಂತೆ ಸೂಚಿಸಲಾಗಿದೆ.
1ರಿಂದ 10ನೇ ತರಗತಿಗಳಿಗೆ ಸೇತುಬಂಧ ಶಿಕ್ಷಣದ ಸಾಹಿತ್ಯ ಮತ್ತು ವಿನ್ಯಾಸವನ್ನು ಸಿದ್ಧಪಡಿಸಿ //dsert.karnataka.gov.in/info-2sethubandha+Literature/k ದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಶಾಲಾ ಹಂತದಲ್ಲಿ ಸೇತುಬಂಧ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುವಂತೆ ಹಾಗೂ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗಾಗಿ ಈ ಸಾಹಿತ್ಯವನ್ನು ಸಿದ್ಧಪಡಿಸಿದೆ.

Advertisement

ಮಕ್ಕಳಿಗೆ ಸಿಹಿ ನೀಡಿ ಸ್ವಾಗತ: ಮಧು
2023-24ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆ ಮೇ 31ರಿಂದ ಆರಂಭವಾಗಲಿದ್ದು, ಮಕ್ಕಳನ್ನು ಸಿಹಿ ನೀಡಿ ಸ್ವಾಗತಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಾಲಾರಂಭದ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿ ಶುಭ ಕೋರಿರುವ ಅವರು, ಶಾಲೆಯಲ್ಲಿ ಪೂರಕ ಸಿದ್ಧತೆಗಳು ಆರಂಭಗೊಂಡಿವೆ. ಆರೋಗ್ಯಕರ ವಾತಾವರಣದಲ್ಲಿ ಖುಷಿಯ ಕಲಿಕೆ ನಿಮ್ಮದಾಗಲಿ. ಮಾದರಿ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರ, ಪೋಷಕರ ಹಾಗೂ ಕನ್ನಡಿಗರ ಸಹಕಾರವಿರಲಿ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next