ಪಂಜಾಬ್‌ನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿಗೆ ಈಗ 58 ವರ್ಷ. ಮುಂದೊಮ್ಮೆ ಪಂಜಾಬ್ ಮುಖ್ಯಮಂತ್ರಿಯಾಗಲೇಬೇಕೆಂದು ಪಣ ತೊಟ್ಟಿರುವ ನವಜೋತ್ ಸಿಂಗ್ ಸಿಧುಗೂ 58 ವರ್ಷ. ಇವರಿಬ್ಬರ ಸ್ಥಾನಮಾನ ನಿರ್ಧರಿಸುವ ಸ್ಥಿತಿಯಲ್ಲಿರುವ ಕಾಂಗ್ರೆಸ್‌ನ ಅಗ್ರನಾಯಕ ರಾಹುಲ್ ಗಾಂಧಿಗೆ 51 ವರ್ಷ!
ಉಳಿದಿಬ್ಬರಿಗೆ ಹೋಲಿಸಿದರೆ ರಾಹುಲ್‌ಗೆ ಸ್ವಲ್ಪ ಸಮಯ ಜಾಸ್ತಿಯಿದೆ, ದೇಶವನ್ನು ಮುನ್ನಡೆಸಲು ಇನ್ನಷ್ಟು ಕಾಯಬಹುದು. ನವಜೋತ್ ಸಿಂಗ್ ಸಿಧುಗೆ ಅಷ್ಟು ಸಮಯ ಬಾಕಿಯಿಲ್ಲ. ಹಾಗಾಗಿಯೆ ಅವರು ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕರೆಸಿಕೊಳ್ಳಲು ತನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದರು. ಆದರೆ ರಾಹುಲ್ ಮಾತ್ರ ತಣ್ಣಗೆ ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಚನ್ನಿಯನ್ನೇ ಫೆ.20ರ ಚುನಾವಣೆಗೂ ಮುಖ್ಯಮಂತ್ರಿ ಅಭ್ಯ ರ್ಥಿ ಎಂದು ಘೋಷಿಸಿದ್ದಾರೆ.
ಸಿಧು ಮಾಜಿ ಕ್ರಿಕೆಟಿಗ, ಬಹಳ ಜನಪ್ರಿಯ, ಪಂಜಾಬ್‌ನಲ್ಲಿ ಎಲ್ಲರಿಗೂ ಗೊತ್ತಿರುವ ಹೆಸರು, ಅತ್ಯುತ್ತಮ ಮಾತುಗಾರ. ಲಕ್ಷಾಂತರ ಜನ ಸೇರಿದ್ದರೂ ಎಲ್ಲರೂ ತಲೆದೂಗುವಂತೆ ಮಾಡಬಲ್ಲರು. ಕಾಂಗ್ರೆಸ್‌ನಲ್ಲಿ ಕ್ಯಾಪ್ಟನ್ ಎಂದೇ ಕರೆಸಿಕೊಂಡಿದ್ದ ಅಮರೀಂದರ್ ಸಿಂಗ್‌ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಲು ನವಜೋತ್ ಹೋರಾಟವೇ ಮುಖ್ಯ ಕಾರಣ. ಸಿಧು ನೇರವಾಗಿ ಅಮರೀಂದರ್ ವಿರುದ್ಧ ತಿರುಗಿಬಿದ್ದಿದ್ದರು. 79 ವರ್ಷವಾಗಿದ್ದರೂ ಅಮರೀಂದರ್ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ತಯಾರಿರಲಿಲ್ಲ. ಕಾಂಗ್ರೆಸ್‌ಗೆ ಪರ್ಯಾಯ ನಾಯಕತ್ವ ಅನಿವಾರ್ಯವಾಗಿತ್ತು. ಇಂತಹ ಹೊತ್ತಿನಲ್ಲಿ ಕೈಹಿಡಿದ ಸಿಧು ಅಮರೀಂದರ್ ವಿರುದ್ಧ ತಿರುಗಿಬಿದ್ದರು. ಅದರ ಫಲವಾಗಿ ಅಮರೀಂದರ್ ಅಧಿಕಾರದಲ್ಲಿದ್ದಾಗಲೇ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರೂ ಆದರು.
ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಅಮರೀಂದರ್ ಮುಖ್ಯಮಂತ್ರಿ ಸ್ಥಾನದಿಂದ ಅನಿವಾ ರ್ಯವಾಗಿ ಕೆಳಕ್ಕಿಳಿದರು. ಆಗ ಲೆಕ್ಕಾಚಾರದ ಪ್ರಕಾರ ಸಿಧು ಮುಖ್ಯಮಂತ್ರಿಯಾಗಬೇಕಿತ್ತು. ದಿಢೀರನೆ ಚರಣ್‌ಜಿತ್ ಸಿಂಗ್ ಚನ್ನಿ ಆ ಪಟ್ಟ ಪಡೆದರು. ಇದು ತೀರಾ ಅನಿರೀಕ್ಷಿತ ಹೆಸರು! ಅಲ್ಲೇ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ವ್ಯಕ್ತಿ ಯಾರೆಂದು ಸೂಚಿಸಿಯಾಗಿತ್ತು. ಮೊನ್ನೆ ರವಿವಾರ ಚನ್ನಿಯೇ ನಾಯಕ ಎಂದು ರಾಹುಲ್ ಮತ್ತೂಮ್ಮೆ ಹೇಳಿದ್ದು ಒಂದು ಔಪಚಾರಿಕತೆ ಎನ್ನದೇ ವಿಧಿಯಿಲ್ಲ. ಆದರೆ ಒಳಗೊಳಗೇ ಆ ಸ್ಥಾನಕ್ಕಾಗಿ ಸಿಧು ತೀವ್ರ ಹೋರಾಟ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಸಿಧು ಜನಪ್ರಿಯ, ಮಾತುಗಾರ, ಮೇಲಾಗಿ ಸಿಕ್ಖ್ ಜನಾಂಗಕ್ಕೇ ಸೇರಿದ್ದಾರೆ. ಹೀಗಿದ್ದರೂ ಚರಣ್‌ಜಿತ್ ಚನ್ನಿಯನ್ನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿದ್ದೇಕೆ? ಇದಕ್ಕೆ ಹಲವು ಕಾರಣಗಳಿವೆ. ಚನ್ನಿ ಅಪರಿಚಿತ ಇರಬಹುದು, ಆದರೆ ಪಂಜಾಬ್‌ನಲ್ಲಿ ಶೇ.32ರಷ್ಟಿರುವ ದಲಿತ ಸಮುದಾಯಕ್ಕೆ ಸೇರಿದವರು. ಅವರು ಮಾಝಿº ಸಮುದಾಯ ವನ್ನು ಪ್ರತಿನಿಧಿಸುತ್ತಾರೆ. ಪ್ರಸ್ತುತ ಕಾಂಗ್ರೆಸ್‌ನ ಪ್ರಮುಖ ಎದುರಾಳಿಯಾಗಿರುವ ಶಿರೋಮಣಿ ಅಕಾಲಿದಳ, ಬಿಎಸ್ಪಿ ಜತೆ ಮೈತ್ರಿ ಮಾಡಿಕೊಂಡು ದಲಿತರ ಮತಗಳನ್ನು ಸೆಳೆಯಲು ಹೊರಟಿದೆ. ಅದಕ್ಕೆ ಕಾಂಗ್ರೆಸ್ ಕಡಿವಾಣ ಹಾಕಬೇಕಿದೆ. ಹಾಗೆಯೇ ಪಂಜಾಬ್ ಮಾತ್ರ ವ ಲ್ಲದೇ ಉತ್ತರಪ್ರದೇಶದಲ್ಲೂ ಚುನಾವಣೆ ಇದೆ. ಇಲ್ಲೂ ದಲಿತರು ನಿರ್ಣಾಯಕ ಮತದಾರರು. ಈ ನಡೆಯ ಮೂಲಕ ಉತ್ತರಪ್ರದೇಶದಲ್ಲೂ ದಲಿತರನ್ನು ಸೆಳೆಯುವ ಲೆಕ್ಕಾಚಾರವಿದೆ, ಮಾತ್ರವಲ್ಲ ಇಡೀ ದೇಶದಲ್ಲಿ ದಲಿತರ ಸಹಾನುಭೂತಿಯನ್ನು ಗಳಿಸಿಕೊಳ್ಳಬೇಕಿದೆ. ಲೋಕಸಭಾ ಚುನಾವಣೆಗೂ ಹಂತಹಂತವಾಗಿ ರಾಹುಲ್ ಸಜ್ಜಾಗಬೇಕಿದೆ. ಚನ್ನಿ ಹೆಸರಿನ ಘೋಷಣೆಯ ಹಿಂದೆ ಇಷ್ಟು ತರ್ಕಗಳು ಅಡಗಿವೆ!
ಎಲ್ಲಕ್ಕಿಂತ ಮುಖ್ಯಮಂತ್ರಿ ಚರಣ್ ಶುದ್ಧಹಸ್ತ. ಹಾಗೆಯೇ ಮೃದು ಸ್ವಭಾವದವರು. ಎಲ್ಲರನ್ನೂ ಜತೆಗೊಯ್ಯುವ ಶಕ್ತಿ ಹೊಂದಿದ್ದಾರೆ. ಸಿಧು ಮಾತುಗಾರ ಎನ್ನುವುದೇನೋ ಸತ್ಯ. ಆದರೆ ಎಡವಟ್ಟು ಹೇಳಿಕೆಗಳನ್ನು ಬೇಕಾಬಿಟ್ಟಿ ನೀಡಿದ್ದಾರೆ. ಅವರ ನಡೆಗಳು ಕಾಂಗ್ರೆಸನ್ನು ಹಲವು ಬಾರಿ ಇಕ್ಕಟ್ಟಿಗೆ ಸಿಲುಕಿಸಿವೆ. ಇವನ್ನೆಲ್ಲ ನೋಡಿದಾಗ ಕಾಂಗ್ರೆಸ್ ಸುರಕ್ಷಿತ ಆಯ್ಕೆಯಾದ ಚರಣ್‌ಜಿತ್ ಕಡೆಗೆ ವಾಲಿದ್ದು ಅಚ್ಚರಿಯ ವಿಚಾರವಲ್ಲ.