ಬಳ್ಳಾರಿ: ಬಳ್ಳಾರಿ, ರಾಯಚೂರು, ಕೊಪ್ಪಳ ತ್ರಿವಳಿ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಅಡಿ ಹೂಳಿನಿಂದ ನೀರಿನ ಕೊರತೆ ಸರಿದೂಗಿಸಲು ನವಿಲೆ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವುದಾಗಿ ಈಗಾಗಲೇ ಘೋಷಿಸಿದ್ದ ರಾಜ್ಯ ಸರ್ಕಾರ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಜಲಾಶಯ ನಿರ್ಮಾಣಕ್ಕೆ 1 ಸಾವಿರ ಕೋಟಿ ರೂ. ಘೋಷಿಸಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಇದರಿಂದ ನೀರಿನ ಕೊರತೆ ಎದುರಿಸುತ್ತಿರುವ ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ.
ತುಂಗಭದ್ರಾ ಜಲಾಶಯ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳೊಂದಿಗೆ ನೆರೆಯ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಗೂ ನೀರುದೊಗಿಸುವ ಜೀವನಾಡಿಯಾಗಿದೆ. 133 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 33 ಟಿಎಂಸಿ ಅಡಿಯಷ್ಟು ಹೂಳು ತುಂಬಿಕೊಂಡಿದ್ದು, 1993, 2004, 2008 ಸೇರಿ ನಡೆಸಿದ ಹೂಳಿನ ಸಮೀಕ್ಷೆಯಿಂದ ದೃಢಪಟ್ಟಿದೆ. ಇದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ 133 ಟಿಎಂಸಿ ಅಡಿಯಿಂದ 100 ಟಿಎಂಸಿ ಅಡಿಗೆ ಕುಸಿತವಾಗಿದೆ. ಪರಿಣಾಮ ಜಲಾಶಯದ ಬಲದಂಡೆ ಭಾಗದ ಬಳ್ಳಾರಿಗೆ ಒಂದಷ್ಟು ನೀರು ಲಭಿಸಿದರೂ ಎಡದಂಡೆಯ ಕೊಪ್ಪಳ, ರಾಯಚೂರು ಜಿಲ್ಲೆಗಳ ಕೊನೆ ಭಾಗಕ್ಕೆ ಎರಡನೇ ಬೆಳೆಗೆ ನೀರಿನ ಕೊರತೆಯಾಗುತ್ತಿತ್ತು. ಜಲಾಶಯ ನಿರ್ಮಾಣದಿಂದ ನೀರಿನ ಕೊರತೆ ನೀಗಲಿದೆ.
ಸಮಾನಾಂತರ ಜಲಾಶಯ: ಸಮಾನಾಂತರ ಜಲಾಶಯವನ್ನು ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗುವುದಿಲ್ಲ. ಬದಲಿಗೆ ಕೊಪ್ಪಳ ಜಿಲ್ಲೆಯ ನವಿಲೆ ಎಂಬ ಗ್ರಾಮದ ಬಳಿ ನಿರ್ಮಿಸಿ, ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುವ ಬದಲಿಗೆ ಪ್ರತ್ಯೇಕ ಕಾಲುವೆ ಮೂಲಕ ಕೊಂಡೊಯ್ದು ಸಂಗ್ರಹಿಸಲಾಗುತ್ತದೆ. ಕಾಕನಕಿಂಡಿಯಿಂದ ನವಿಲೆವರೆಗೆ 38 ಕಿಮೀ ಉದ್ದದ ಕಾಲುವೆ ನಿರ್ಮಿಸಲಾಗುತ್ತದೆ. ಮಧ್ಯದಲ್ಲಿ ಸುಮಾರು 8 ಕಿಮೀ ನಷ್ಟು ಗುಡ್ಡದಲ್ಲಿ ಸುರಂಗ ಕೊರೆದು ಕಾಲುವೆ ನಿರ್ಮಿಸಲಾಗುತ್ತದೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ 1613-14ನೇ ಅಡಿಗೆ ಬಂದಾಗ ಹೆಚ್ಚುವರಿ ನೀರನ್ನು ನದಿಗೆ ಬಿಡುವ ಬದಲಿಗೆ ಕಾಲುವೆ ಮೂಲಕ ನವಿಲೆ ಜಲಾಶಯಕ್ಕೆ ಕೊಂಡೊಯ್ಯಲಾಗುತ್ತದೆ. ಜಲಾಶಯ ನಿರ್ಮಾಣಕ್ಕೆ ನವಿಲೆ ಬಳಿ ಸುಮಾರು 19 ಗ್ರಾಮಗಳು ಮುಳುಗಡೆಯಾಗಲಿವೆ ಎಂದು ತುಂಗಭದ್ರಾ ನೀರಾವರಿ ನಿಗಮದ ಅಧಿ ಕಾರಿಗಳು ತಿಳಿಸುತ್ತಾರೆ.
30 ಟಿಎಂಸಿ ಸಂಗ್ರಹ ಸಾಮರ್ಥ್ಯ: ನವಿಲೆ ಬಳಿ 30 ಟಿಎಂಸಿ ಅಡಿ ಸಾಮರ್ಥ್ಯದ ಸಮನಾಂತರ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಸೂಚನೆಯಂತೆ ಡಿಪಿಎಆರ್ ಸಿದ್ಧಪಡಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಇದರಲ್ಲಿ ಆಂಧ್ರ, ತೆಲಂಗಾಣದವರು ಶೇ.35ರಷ್ಟು ಪಾಲು ಕೇಳಿದಲ್ಲಿ ಅವರಿಂದಲೂ ಅನುದಾನ ಪಡೆದು, 30 ಟಿಎಂಸಿ ಅಡಿ ಬದಲಿಗೆ 50 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ನಿರ್ಮಿಸುವ ಚಿಂತನೆಯೂ ಸರ್ಕಾರದ ಮಟ್ಟದಲ್ಲಿದೆ. ಅಥವಾ ಡಿಪಿಎಆರ್ ವರದಿಗೆ ಟಿಬಿ ಮಂಡಳಿ ಒಪ್ಪಿಗೆ ನೀಡಿದಲ್ಲಿ ಅವರು, ಈ ಹಿಂದೆ ಕೇಳಿದಂತೆ ಅವರಿಗೂ ಪರ್ಯಾಯ ಕಾಲುವೆ ನೀಡಿ ಹೆಚ್ಚುವರಿ ನೀರನ್ನು ಆಂಧ್ರಕ್ಕೆ ಕೊಂಡೊಯ್ಯಲು ಅನುಮತಿ ನೀಡಬೇಕಾಗುತ್ತದೆ. ಇದೆಲ್ಲಕ್ಕೂ ಮುನ್ನ ಕೇಂದ್ರದ ಜಲಮಂಡಳಿ ಅನುಮತಿ ನೀಡಬೇಕಾಗುತ್ತದೆ. ಗೆಜೆಟ್ ಅ ಧಿಸೂಚನೆ ಹೊರಡಿಸಿದ ಬಳಿಕ ಸಂಬಂಧಪಟ್ಟ ಸಹಾಯಕ ಆಯುಕ್ತರು ಭೂ ಸ್ವಾಧೀನಕ್ಕೆ ಮುಂದಾಗಲಿದ್ದಾರೆ. ರಾಯಚೂರು, ಕೊಪ್ಪಳಜಿಲ್ಲೆಗಳ ರೈತರು ಎದುರಿಸುತ್ತಿದ್ದ ನೀರಿನ ಕೊರತೆ ನೀಗಿಸಲು ಅನುಕೂಲವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ 10 ವರ್ಷದೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅಧಿ ಕಾರಿಗಳ ವಿಶ್ವಾಸವಾಗಿದೆ.
ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿ ಅಡಿ ಹೂಳು ತುಂಬಿದ್ದರಿಂದ ನೀರು ಸಂಗ್ರಹ ಕೊರತೆಯಾಗಿದೆ. ಈ ನೀರನ್ನು ಸರಿದೂಗಿಸಲು ನವಿಲೆ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ 1 ಸಾವಿರ ಕೋಟಿ ಘೋಷಣೆ ಮಾಡಲಾಗಿದೆ. ನೆರೆಯ ಆಂಧ್ರ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಿಬ್ಬರೂ ನಮಗೆ ಆತ್ಮೀಯರಾಗಿದ್ದು, ಅವರೊಂದಿಗೆ ಸಮಾಲೋಚನೆ ನಡೆಸಿ, ಒಪ್ಪಿಗೆ ಪಡೆಯಲಾಗುವುದು.
–
ಬಿ.ಶ್ರೀರಾಮುಲು,
ಜಿಲ್ಲಾ ಉಸ್ತುವಾರಿ ಸಚಿವ, ಬಳ್ಳಾರಿ
ನವಿಲೆ ಜಲಾಶಯದಿಂದ ರಾಯಚೂರು, ಕೊಪ್ಪಳ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ಬೇಸಿಗೆ ಬೆಳೆಗೆ ನೀರಿನ ಕೊರತೆ ನೀಗಲಿದೆ. ಡಿಪಿಎಆರ್ ಸಿದ್ಧಪಡಿಸಲಾಗುತ್ತಿದೆ. ರಾಜ್ಯ ಸರ್ಕಾರ 30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ನಿರ್ಮಿಸಲು ಮುಂದಾಗಿದ್ದು, ಇದಕ್ಕೆ ಆಂಧ್ರ, ತೆಲಂಗಾಣದವರು ಒಪ್ಪಿ, ತಮ್ಮ ಪಾಲಿನ ಶೇ.35ರಷ್ಟು ನೀರು ಕೇಳಿದಲ್ಲಿ ಜಲಾಶಯವನ್ನು 50 ಟಿಎಂಸಿ ಅಡಿಗೆ ಹೆಚ್ಚಿಸಲು ಚಿಂತನೆ ಸರ್ಕಾರದ ಮುಂದಿದೆ. ಅಧಿಸೂಚನೆ ಹೊರಡಿಸಿದ ಬಳಿಕ ಸಹಾಯಕ ಆಯುಕ್ತರು ಭೂ ಸ್ವಾಧೀನಕ್ಕೆ ಮುಂದಾಗಲಿದ್ದಾರೆ.
-ಬಸಪ್ಪ ಜಾನೇಕರ್, ಮುಖ್ಯ ಎಂಜಿನಿಯರ್,
ಟಿಬಿ ನೀರಾವರಿ ನಿಗಮ, ಮುನಿರಾಬಾದ್
ಹೂಳು ತೆರವು ಅಸಾಧ್ಯ
ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳು ಕಳೆದ ಎರಡು ದಶಕಗಳಿಂದ ಸದ್ದು ಮಾಡುತ್ತಿದೆ. ಹೂಳನ್ನು ತೆರವುಗೊಳಿಸಲು ಸರ್ಕಾರದ ಮಟ್ಟದಲ್ಲಿ ಹಲವು ಬಾರಿ ಚರ್ಚೆಗಳು ಸಹ ನಡೆದಿವೆ. ಗ್ಲೋಬಲ್ ಟೆಂಡರ್ ಕರೆದು, ಜರ್ಮನ್ ತಂತ್ರಜ್ಞಾನದ ಮೂಲಕ ಹೂಳು ತೆರವುಗೊಳಿಸುವುದಾಗಿಯೂ ಹಿಂದೆ ತಿಳಿಸಲಾಗಿತ್ತು. ಆದರೆ, ಹೂಳು ತೆರವು ಪ್ರಕ್ರಿಯೆಗೆ ಅಪಾರ ವೆಚ್ಚ ತಗುಲುವ ಅಂದಾಜಿನಿಂದ ಯಾವೊಬ್ಬ ಟೆಂಡರ್‌ದಾರರು ಮುಂದೆ ಬರಲಿಲ್ಲ. ಮೇಲಾಗಿ 33 ಟಿಎಂಸಿ ಅಡಿ ಹೂಳು ತೆರವುಗೊಳಿಸುವುದು ಸಹ ಸುಲಭವಲ್ಲ ಎಂದು ತಜ್ಞರ ಸಮಿತಿಯೂ ಸರ್ಕಾರಕ್ಕೆ ವರದಿ ನೀಡಿದೆ. ಇದರಿಂದ ಹೂಳು ತೆರವು ವಿಷಯವನ್ನು ಕೈಬಿಟ್ಟಿರುವ ರಾಜ್ಯ ಸರ್ಕಾರ, ಪರ್ಯಾಯವಾಗಿ ನವಿಲೆ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಿದ್ದು, 2017ರಲ್ಲಿ ಮೊದಲ ಬಾರಿಗೆ ಬಜೆಟ್‌ನಲ್ಲಿ ಘೋಷಿಸಿತು. ಆಗಿನಿಂದ ದಾಖಲೆಗಷ್ಟೇ ಸೀಮಿತವಾಗಿದ್ದ ಈ ಯೋಜನೆಗೆ ಕಳೆದ ವರ್ಷ ಬಜೆಟ್‌ನಲ್ಲಿ ಡಿಪಿಎಆರ್ ಸಿದ್ಧಪಡಿಸಲು 500 ಕೋಟಿ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಯೋಜನೆ ಕಾರ್ಯಗತಗೊಳಿಸಲು 1 ಸಾವಿರ ಕೋಟಿ ರೂ. ಘೋಷಿಸಿದೆ.