Advertisement

ದಶಲಕ್ಷ ದಾಟಿದ ನವಕರ್ನಾಟಕ ಜನಪರ ಶಕ್ತಿ ಸಲಹೆ

12:30 PM Apr 30, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಜನರ ಬೇಕು-ಬೇಡಗಳ ಬಗ್ಗೆ ಅವರಿಂದಲೇ ಅಭಿಪ್ರಾಯ, ಸಲಹೆ ಪಡೆದು ಅವುಗಳಲ್ಲಿ ಸೂಕ್ತವಾದುದನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಲು ಬಿಜೆಪಿ ಆರಂಭಿಸಿದ “ನವಕರ್ನಾಟಕ ಜನಪರ ಶಕ್ತಿ’ ಅಭಿಯಾನದಡಿ ಸಂಗ್ರಹಿಸಿದ ಸಲಹೆ, ಅಹವಾಲು ಅಭಿಪ್ರಾಯಗಳು 10 ಲಕ್ಷ ಮೀರಿದೆ!

Advertisement

ಜನರಿಂದಲೇ ನೇರವಾಗಿ 2.5 ಲಕ್ಷ ಅಭಿಪ್ರಾಯ ಸಂಗ್ರಹವಾಗಿದ್ದರೆ, ಆನ್‌ಲೈನ್‌ಲ್ಲಿ 4 ಲಕ್ಷಕ್ಕೂ ಹೆಚ್ಚು ಸಲಹೆ, ಅಭಿಪ್ರಾಯ ಹಾಗೂ ಮಿಲ್ಡ್‌ ಕಾಲ್‌ ಅಭಿಯಾನದಡಿ 4 ಲಕ್ಷಕ್ಕೂ ಹೆಚ್ಚು ಸಲಹೆ, ಅಭಿಪ್ರಾಯ ಸಂಗ್ರಹವಾಗಿದೆ. ಮತದಾನದವರೆಗೂ ಈ ಅಭಿಯಾನ ಮುಂದುವರಿಯಲಿದೆ. ಸುಮಾರು ಮೂರು ಕೋಟಿ ಜನರನ್ನು ತಲುಪಿ 10 ಲಕ್ಷಕ್ಕೂ ಹೆಚ್ಚು ಸಲಹೆ, ಅಭಿಪ್ರಾಯವನ್ನು ಡಿಜಿಟಲ್‌ ವಿಧಾನದಡಿ ಸಂಗ್ರಹಿಸಲಾಗಿದೆ.

ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅಭಿಯಾನದ ಸಂಚಾಲಕರಾದ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಯಾವುದೇ ಸಮಸ್ಯೆಗೆ ಪರಿಹಾರ, ಶಾಶ್ವತ ಅಭಿವೃದ್ಧಿ, ದೂರದರ್ಶಿತ್ವದ ಪ್ರಯೋಜನ ಕಲ್ಪಿಸಲು ಆಳ ಅಧ್ಯಯನ, ಸಂಶೋಧನೆ, ಮಾಹಿತಿ ಕಲೆ ಹಾಕುವುದು ಮುಖ್ಯ.

ಜನರ ಬೇಕುಗಳನ್ನು ತಲುಪಲು ಹಾಗೂ ಬೇಡಗಳನ್ನು ನಿವಾರಿಸಲು ವಸ್ತುಸ್ಥಿತಿ ತಿಳಿಯುವುದು ಅಗತ್ಯ. ಆ ಹಿನ್ನೆಲೆಯಲ್ಲಿ ಜನ ಅಳಲು, ಅಭಿಪ್ರಾಯವನ್ನು ನೇರವಾಗಿ ಪಡೆದು ಕ್ರೋಡೀಕರಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಕ್ಷ ಈ ಅಭಿಯಾನ ಕೈಗೊಂಡಿದೆ ಎಂದು ಹೇಳಿದರು.

ದೇಶದಲ್ಲೇ ಪ್ರಥಮ ಪ್ರಯತ್ನ: ರಾಜ್ಯದ ಜನರು ಸೇರಿದಂತೆ ವಿಷಯತಜ್ಞರು, ಗಣ್ಯರನ್ನು ಸಂಪರ್ಕಿಸಿ ನೇರವಾಗಿ ಅಭಿಪ್ರಾಯ, ಸಲಹೆ, ಅಹವಾಲು ಆಲಿಸುವ ಪ್ರಯತ್ನ ದೇಶದಲ್ಲೇ ಪ್ರಥಮ. ಹಾಲಿ ವ್ಯವಸ್ಥೆಯಲ್ಲಿರುವ ಅನುಕೂಲ, ಅನಾನುಕೂಲ, ಸವಾಲು, ಪರಿಹಾರಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

Advertisement

25 ಪ್ರಮುಖ ವಲಯಗಳನ್ನು ಗುರುತಿಸಲಾಗಿದ್ದು, ಈ ಪೈಕಿ 18 ವಲಯಕ್ಕೆ ಸಂಬಂಧಪಟ್ಟಂತೆ ಸಭೆ, ಕಾರ್ಯಕ್ರಮ ನಡೆಸಿ ಜನಾಭಿಪ್ರಾಯ ಸಂಗ್ರಹಿಸಲಾಗಿದೆ. ಉಳಿದ ವಲಯ ಕುರಿತಂತೆ ಅನೌಪಚಾರಿಕ ವಿಧಾನದಡಿ ಸಲಹೆ ಸ್ವೀಕರಿಸಲಾಗಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 200 ಕ್ಷೇತ್ರಗಳಲ್ಲಿ ಸಭೆ ಆಯೋಜಿಸಿ ಸಲಹೆ ಪಡೆಯಲಾಗಿದೆ.

ಅಭಿಯಾನದ ಮೂಲಕ ಮೂರು ಕೋಟಿ ಜನರನ್ನು ತಲುಪಲಾಗಿದೆ. ವಿಧಾನಸಭಾ ಕ್ಷೇತ್ರವಾರು, ವಲಯವಾರು ಸಮಸ್ಯೆ, ಸಲಹೆ, ಪರಿಹಾರೋಪಾಯಗಳನ್ನು ವರ್ಗೀಕರಿಸಿ ಡಿಜಿಟಲ್‌ ವಿಧಾನದಡಿ ದಾಖಲಿಸಲಾಗಿದೆ. ಮತದಾನದವರೆಗೂ ರೋಡ್‌ ಶೋ, ಆನ್‌ಲೈನ್‌ನಡಿ ಸಲಹೆ ಸಂಗ್ರಹ ಮುಂದುವರಿಯಲಿದೆ. ಮುಂಬರುವ ಸರ್ಕಾರ ಇದನ್ನು ಜಾರಿಗೊಳಿಸಲು ಗಮನ ಹರಿಸಲಿದೆ.

ಸಮಸ್ಯೆ ಸಮಸ್ಯೆಯಾಗಿಯೇ ಉಳಿಯದೆ ಪರಿಹಾರವಾಗಬೇಕು ಎಂಬುದು ಅಭಿಯಾನದ ಉದ್ದೇಶ. ಸಮಸ್ಯೆಗಳ ನಿವಾರಣೆಗೆ ದೀರ್ಘ‌ಕಾಲದ ಹೋರಾಟ, ಚಳವಳಿಯ ಇತಿಹಾಸವಿರಲಿದ್ದು, ಪರಿಹಾರವಾಗಿರುವುದಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಅಳಲು ತೋಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ಜನರನ್ನೇ ಸಂಪರ್ಕಿಸುವುದು ಅಭಿಯಾನದ ಮೂಲ ಆಶಯ.

ಅಭಿಯಾನ ಎಂಟು ತಿಂಗಳಿನಿಂದ ನಡೆದಿದ್ದರೂ ನಾಲ್ಕು ತಿಂಗಳನಿಂದೀಚೆಗೆ ಪರಿಣಾಮಕಾರಿಯಾಗಿ ನಡೆದಿದೆ. 70 ಮಂದಿ ಇದರಲ್ಲಿ ತೊಡಗಿಸಿಕೊಂಡಿದ್ದು, ನಿರಂತರ ಶ್ರಮ ವಹಿಸಿ ದಾಖಲಿಸಲಾಗಿದೆ. ನವಕರ್ನಾಟಕ ಜನಪರ ಶಕ್ತಿ ಅಭಿಯಾನದ ಎರಡನೇ ಹಂತದಡಿ ಸಾಹಿತಿಗಳಿಂದಲೂ ಸಲಹೆ ಪಡೆಯಲಾಯಿತು. ಒಟ್ಟಾರೆ ಎಲ್ಲ ಸಲಹೆಗಳನ್ನು ಒಗ್ಗೂಡಿಸಲಾಗಿದೆ. ಇಂತಹ ಅಭಿಯಾನ ಪ್ರತಿ ವರ್ಷ ನಡೆಯಬೇಕು ಎಂದು ಹೇಳುತ್ತಾರೆ.

ಪೇಯ್ಡ್ ಸರ್ವಿಸ್‌ ನಿಲ್ಲಬೇಕು: ಇಂದು ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಹಣ ನೀಡದಿದ್ದರೆ ಕೆಲಸ ಆಗುವುದಿಲ್ಲ ಎಂಬ ಸ್ಥಿತಿ ಇದೆ. ಈ ಪೇಯ್ಡ್ ಸರ್ವಿಸ್‌ಗಳು ನಿಲ್ಲಬೇಕು. ಸರ್ಕಾರಿ ವ್ಯವಸ್ಥೆಯಡಿ ಸೇವೆ ನೀಡುವುದು ಬಲಗೊಳ್ಳಬೇಕಿದೆ. ಸಲಹೆ ನೀಡಿದವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ದೇಶದಲ್ಲಿ ಉತ್ತಮ ಹಾಗೂ ಮಾದರಿ ಅಭಿಯಾನ ನಡೆಸಿದ ತೃಪ್ತಿ ಇದೆ ಎಂದು ಹೇಳಿದರು.

* ಎಂ.ಕೀರ್ತಿಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next