Advertisement

ನವಿಮುಂಬಯಿ ಕನ್ನಡ ಭವನ ಪಾಳು ಬೀಳದಿರಲಿ

12:13 PM Jan 13, 2019 | Team Udayavani |

ಮುಂಬಯಿ: 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಧಾರವಾಡದಲ್ಲಿ ಜ. 4, 5 ಹಾಗೂ 6 ರಂದು ಮೂರು ದಿನ ಗಳ ಕಾಲ ಕೃಷಿ ವಿಶ್ವವಿದ್ಯಾಲಯ ಆವರಣ ದಲ್ಲಿ ಅಂಬಿಕಾತನಯದತ್ತ ಪ್ರಧಾನ ವೇದಿಕೆಯಲ್ಲಿ ಜರಗಿತು.

Advertisement

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಅಧ್ಯಕ್ಷತೆ ಯಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಸಮ್ಮೇಳನವನ್ನು ಉದ್ಘಾಟಿಸಿದರು.  ಜ. 5 ರಂದು ಮಧ್ಯಾಹ್ನ ಗಡಿನಾಡ ತಲ್ಲಣಗಳು ಗೋಷ್ಠಿಯು ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಅಕಾಡೆಮಿ, ಪರಿಷತ್ತು ಗಮನಹರಿಸಲಿ
ಹೊರನಾಡ ಕನ್ನಡಿಗರ ಸಮಸ್ಯೆ ಗಳು ವಿಷಯದ ಕುರಿತಂತೆ ಮುಂಬಯಿ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಮಾತನಾಡಿ, ಹೊರನಾಡ ಸಾಹಿತಿಗಳ ಕೃತಿಗಳನ್ನು ಒಳನಾಡಿನಲ್ಲಿ ಗುರುತಿಸಬೇಕು. ಚರ್ಚೆ ನಡೆಸಬೇಕು. ಈ ಬಗ್ಗೆ ಪ್ರಾಧಿಕಾರ, ಅಕಾಡೆಮಿ, ಪರಿಷತ್ತುಗಳು ಗಮನ ಹರಿಸಬೇಕಾಗಿದೆ. ಅಕಾಡೆಮಿಗಳಿಗೆ ಸದಸ್ಯರ ನೇಮಕಾತಿಯಲ್ಲಿ ಹಿಂದೆಲ್ಲಾ ಮುಂಬಯಿ ಕನ್ನಡಿಗರನ್ನೂ ಪರಿಗಣಿಸುತ್ತಿದ್ದರು. ಇತ್ತೀಚೆಗೆ ಕೆಲವು ವರ್ಷಗಳಿಂದ ಅದನ್ನು ನಿಲ್ಲಿಸಿ ರುವ ಕಾರಣಗಳೇನು ಎಂದು ಜೋಕಟ್ಟೆ ಯವರು ಪ್ರಶ್ನಿಸಿದರು.

ಗಡಿ ಸಮಸ್ಯೆ  ಎದುರಿಸಬೇಕಾದ ಸಮಸ್ಯೆಗಳು ಕುರಿತಂತೆ ಬೆಳಗಾವಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್‌ ಚಂದರಗಿ ಮಾತನಾಡಿ,  ಗಡಿ ಸಂರಕ್ಷಣೆ ಪ್ರಾಧಿಕಾರ ಬೆಂಗಳೂರಲ್ಲಿ ಯಾಕೆ ಇದೆ ಎಂದು ಪ್ರಶ್ನಿಸಿ,  ಮಂತ್ರಿಗಳು – ಶಾಸಕರು – ಸಂಸದರು ಎಲ್ಲರೂ ನಮ್ಮನ್ನು ಕೈ  ಬಿಟ್ಟಿದ್ದಾರೆ, ಬೆಳಗಾವಿ ಎಂದೂ ಬಿಟ್ಟು ಕೊಡೋದಿಲ್ಲ ಎನ್ನುವ ಗಿಳಿಪಾಠ ಬಿಟ್ಟುಬಿಡಿ. ಕಂಬಾರರು ಎಂಎಲ್‌ಸಿ ಆಗಿದ್ದಾಗ ಗಡಿ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಜೊತೆ ಎಷ್ಟು ಸಭೆ ನಡೆಸಿದ್ದಾರೆ,  ಬೆಂಗಳೂರು ವಿಧಾನ ಸೌಧಕ್ಕೆ ಹೋದ ಸಾಹಿತಿಗಳೆಲ್ಲಾ ಅಲ್ಲೇ ಐಕ್ಯವಾಗಿ ಬಿಡ್ತಾರೆ ಎಂದ ಅಶೋಕ ಚಂದರಗಿಯವರು ಎಲ್ಲಾ ಪ್ರಾಧಿಕಾರಗಳ ನಡುವೆ ಸಮನ್ವಯತೆ ಇರಲಿ ಎಂದರು.

ಖ್ಯಾತ ಕನ್ನಡ ಸಾಹಿತಿ ಎಸ್‌. ಎಲ್‌. ಭೈರಪ್ಪ ಅವರು ಕನ್ನಡಕ್ಕಿಂತಲೂ ಮರಾಠಿಯಲ್ಲಿ ಹೆಚ್ಚು ಜನಪ್ರಿಯರು ಎಂದು ಪ್ರೊ| ಚಂದ್ರಕಾಂತ್‌ ಪೋಕಳೆಯವರು ಕರ್ನಾಟಕ – ಮಹಾರಾಷ್ಟ್ರ ಕೊಡುಕೊಳ್ಳುವಿಕೆ ವಿಷಯವಾಗಿ ಮಾತನಾಡಿ,  ಮರಾಠಿಗೆ ಅನುವಾದಗೊಂಡಿರುವ  ಭೈರಪ್ಪ ಅವರ ಕೃತಿಗಳು ಅತೀ ಹೆಚ್ಚು ಮಾರಾಟವಾಗಿವೆ. ಉಮಾ ಕುಲಕರ್ಣಿ ಅವರು ಮರಾಠಿಗೆ ಭೈರಪ್ಪರ ಕಾದಂಬರಿಗಳನ್ನು ಅನುವಾದ ಮಾಡಿದ್ದಾರೆ. ಉಮಾ ಅವರ ಪತಿ ಕನ್ನಡದವರು. ಉಮಾ ಅವರಿಗೆ ಕನ್ನಡ ಗೊತ್ತಿಲ್ಲ. ಪತಿ ಕನ್ನಡದಲ್ಲಿ ಹೇಳಿದ್ದನ್ನು ಉಮಾ ಅವರು ಮರಾಠಿಗೆ ಅನುವಾದಿಸುತ್ತಾರೆ ಎಂದರು.

Advertisement

ಅಧ್ಯಕ್ಷತೆ ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ ವಹಿಸಿ ಮಾತನಾಡಿ,  ಬೆಳಗಾವಿ ಜಿಲ್ಲೆಯನ್ನು ವಿಭಜಿಸುವುದಾದರೆ ಚಿಕ್ಕೋಡಿಯನ್ನೇ ಹೊಸಜಿಲ್ಲೆಯಾಗಿ ರಚಿಸಬೇಕು ಎಂದರು. ಸುರೇಶ್‌ ಚನಶೆಟ್ಟಿ ಅವರು ಸ್ವಾಗತಿಸಿದರು. ಲಿಂಗಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಮಂಗಲಾ ಶ್ರೀಶೈಲ್‌   ನಿರ್ವಹಿಸಿದರು. ಶ್ರೀಶೈಲ ಈರಪ್ಪ ವಂದಿಸಿದರು.

“ಭೂತ ಬಂಗಲೆ ಆಗಬಾರದು’
ನವಿ ಮುಂಬಯಿಯಲ್ಲಿ ಮೂರು ಮಾಳಿಗೆಯ ಕನ್ನಡ ಭವನವು ಉದ್ಘಾಟನೆಗೊಂಡಿದ್ದರೂ ಬೀಗ ಹಾಕಲಾಗಿದ್ದು, ಯಾರಿಗೂ ಪ್ರಯೋಜನ ಇಲ್ಲದಂತಾಗಿದೆ. ಅದು ಪಾಳು ಬಿದ್ದು ಭೂತ ಬಂಗಲೆ ಆಗಬಾರದು. ಈ ಬಗ್ಗೆ ಕರ್ನಾಟಕ ಸರಕಾರ ಎಚ್ಚೆತ್ತುಕೊಳ್ಳಬೇಕು. ಸರಕಾರ ಕನ್ನಡ ಚಟುವಟಿಕೆಗಳಿಗೆ ನೆರವು ನೀಡಬೇಕು. ಹೊರನಾಡಿನ ಉತ್ತಮ ಪುಸ್ತಕಗಳನ್ನು ಪರಿಷತ್‌- ಪ್ರಾಧಿಕಾರ ಪರಿಶೀಲಿಸಿ ಪ್ರಕಟಿಸಬೇಕು. ಗಡಿನಾಡು ಹೊರನಾಡು ಪ್ರಾಧಿಕಾರ ಶೀಘ್ರ ಕಾರ್ಯರೂಪಕ್ಕೆ ಬರುವಂತಾಗಬೇಕು. ಮುಂದಿನ ಪೀಳಿಗೆಗೆ ಕನ್ನಡದಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕನ್ನಡದ ಕುರಿತಂತೆ ಇಂಗ್ಲಿಷ್‌ನಲ್ಲಿಯೂ ಕೃತಿಗಳನ್ನು ಪ್ರಕಟಿಸಬೇಕು. ಚಿಣ್ಣರ ಬಿಂಬದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಮಾನ್ಯತೆ ನೀಡಬೇಕು ಎಂದು ಶ್ರೀನಿವಾಸ ಜೋಕಟ್ಟೆ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next