“ಗುಲ್ಟು’ ಸಿನಿಮಾದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು ನಟ ನವೀನ್‌ಶಂಕರ್. ಮೊದಲ ಸಿನಿಮಾದಲ್ಲೇ ಪ್ರೇಕ್ಷಕರು ಮತ್ತು ಸಿನಿ ಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾದ ನವೀನ್ ಶಂಕರ್, ನಂತರ ಕೆಲ ವರ್ಷ ಗ್ಯಾಪ್ ತೆಗೆದುಕೊಂಡು ಬಳಿಕ “ಧರಣಿ ಮಂಡಲ ಮಧ್ಯದೊಳಗೆ’, “ಹೊಂದಿಸಿ ಬರೆಯಿರಿ’ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ನವೀನ್ ಶಂಕರ್ ಅಭಿನಯದ “ಕ್ಷೇತ್ರಪತಿ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಇತ್ತೀಚೆಗಷ್ಟೇ ಅದರ ಮೊದಲ ಟೀಸರ್ ಬಿಡುಗಡೆಯಾಗಿದೆ. ಇದೇ ವೇಳೆ ಮಾತಿಗೆ ಸಿಕ್ಕ ನವೀನ್ ಶಂಕರ್ ತಮ್ಮ ಸಿನಿಮಾ ಜರ್ನಿಯ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ಗುಲ್ಟು’ ಸಿನಿಮಾದ ನಂತರ ಸ್ವಲ್ಪ ಗ್ಯಾಪ್ ತೆಗೆದುಕೊಳ್ಳಲು ಕಾರಣ?
“ಗುಲ್ಟು’ ಸಿನಿಮಾ ನಮ್ಮ ನಿರೀಕ್ಷೆಗೂ ಮೀರಿದ ಗೆಲುವನ್ನು ತಂದುಕೊಟ್ಟಿತು. “ಗುಲ್ಟು’ ಸಿನಿಮಾ ಆದ ನಂತರ ಒಂದಷ್ಟು ಸಿನಿಮಾಗಳ ಆಫರ್ ಕೂಡ ಬಂದವು. ಅದರಲ್ಲಿ ನಾನು ಕೂಡ ಇಷ್ಟಪಟ್ಟು ಮಾಡಬಹುದಾದ ಒಂದೆರಡು ಸಿನಿಮಾಗಳನ್ನು ಒಪ್ಪಿಕೊಂಡೆ. ಆದಕ್ಕಾಗಿ ಒಂದಷ್ಟು ತಯಾರಿ ಕೂಡ ಮಾಡಿಕೊಳ್ಳಬೇಕಾಯಿತು. ಈ ಮಧ್ಯೆ ಬೇರೆ ಒಂದಷ್ಟು ಸಿನಿಮಾಗಳು ಬಂದರೂ, ಕೈಯಲ್ಲಿರುವ ಸಿನಿಮಾಗಳು ಮುಗಿಯಲಿ ಎಂಬ ಕಾರಣಕ್ಕೆ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಆನಂತರ ಕಾರಣಾಂತರಗ ಳಿಂದ ನಾನು ಒಪ್ಪಿಕೊಂಡಿದ್ದ ಆ ಸಿನಿಮಾಗಳು ಅರ್ಧಕ್ಕೆ ನಿಂತವು. ಇದರ ನಡುವೆಯೇ ಕೋವಿಡ್ ಲಾಕ್‌ಡೌನ್ ಕೂಡ ಬಂತು. ಹೀಗಾಗಿ ಸ್ವಲ್ಪ ಗ್ಯಾಪ್ ಆಯಿತು.
ನಾಯಕ ನಟನಾಗಿರುವಾಗಲೇ ಖಳನಟನೆಯತ್ತ ಮುಖ ಮಾಡಿದ್ದು ಯಾಕೆ?
ಮೊದಲಿಗೆ ನಾನೊಬ್ಬ ನಟ. ಇಲ್ಲಿ ನಾನೊಬ್ಬ ನಟನಾಗಬೇಕು ಎಂಬ ಕನಸನ್ನು ಇಟ್ಟುಕೊಂಡು ಚಿತ್ರರಂಗಕ್ಕೆ ಬಂದವನು. ಒಂದೇ ಪಾತ್ರಗಳಿಗೆ ಅಂಟಿಕೊಳ್ಳದೆ, ಇಲ್ಲಿ ಎಲ್ಲ ಥರದ ಪಾತ್ರಗಳನ್ನು ಮಾಡಬೇಕು ಎಂಬುದು ನನ್ನಉದ್ದೇಶ. ಹಾಗಾಗಿ ಅದು ಹೀರೋ ಪಾತ್ರವೋ ಅಥವಾ ವಿಲನ್ ಪಾತ್ರವೋ ಎಂಬುದು ನನಗೆ ಮುಖ್ಯವಲ್ಲ. ನನಗೆ ಬರುವ ಪಾತ್ರಗಳಿಗೆ ನಾನು ನ್ಯಾಯ ಕೊಡಬೇಕು, ಅದನ್ನು “ದಿ ಬೆಸ್ಟ್’ ಎನ್ನುವಂತೆ ಮಾಡಬೇಕು. ಅಷ್ಟೇ ನನ್ನ ಕೆಲಸ. “ಹೊಯ್ಸಳ’ ಸಿನಿಮಾದಲ್ಲೂ ಅಂಥದ್ದೇ ಪಾತ್ರ ಸಿಕ್ಕಿತು. ನಿರ್ದೇಶಕರು ಕಥೆ ಮತ್ತು ಪಾತ್ರ ಹೇಳಿದಾಗ ತುಂಬ ಇಷ್ಟವಾಯ್ತು. ಹಾಗಾಗಿ ತುಂಬ ಖುಷಿಯಿಂದ ಆ ಪಾತ್ರ ಮಾಡಿದೆ.
ಮೊದಲ ಬಾರಿಗೆ ವಿಲನ್ ಆಗಿ ಕಾಣಿಸಿಕೊಂಡಾಗ ಸಿಕ್ಕ ಪ್ರತಿಕ್ರಿಯೆ?
ಮೊದಲ ಬಾರಿಗೆ “ಹೊಯ್ಸಳ’ ಸಿನಿಮಾದಲ್ಲಿ ನನ್ನ ಪಾತ್ರ ಕೇಳಿದಾಗಲೇ ಅದರ ಮೇಲೊಂದು ಭರವಸೆಯಿತ್ತು. ತುಂಬ ಮೃಗೀಯವಾಗಿರುವಂಥ, ಅಭಿನಯಕ್ಕೆ ಸಾಕಷ್ಟು ಸ್ಕೋಪ್ ಇರುವಂಥ ಪಾತ್ರ ಇದಾಗಿದೆ ಎಂಬುದು ನನಗೂ ಗೊತ್ತಿತ್ತು. ಜೊತೆಗೆ ಚಿತ್ರತಂಡದ ಸಪೋರ್ಟ್ ಕೂಡ ತುಂಬ ಚೆನ್ನಾಗಿತ್ತು. ಹಾಗಾಗಿ ತುಂಬ ಎಂಜಾಯ್ ಮಾಡಿಕೊಂಡು ಈ ಪಾತ್ರ ಮಾಡಿದೆ. ಸಿನಿಮಾ ರಿಲೀಸ್ ಆದ ನಂತರ ನಿಜಕ್ಕೂ ಅದ್ಭುತ ರೆಸ್ಪಾನ್ಸ್ ಸಿಕ್ಕಿತು. ಆಡಿಯನ್ಸ್, ಇಂಡಸ್ಟ್ರಿಯವರು ಎಲ್ಲರೂ ಆ ಪಾತ್ರದ ಬಗ್ಗೆ ಮಾತನಾಡಿದರು. ಈಗಲೂ ಹೊರಗಡೆ ಹೊದಾಗ ಜನ ಆ ಪಾತ್ರದ ಬಗ್ಗೆ ಮಾತನಾಡುತ್ತಾರೆ.
ನಿಮ್ಮ ಪಾತ್ರಗಳ ಆಯ್ಕೆ ಹೇಗೆ?
ಮೊದಲಿಗೆ ಒಬ್ಬ ಕಲಾವಿದನಾಗಿ, ಆ ಸಿನಿಮಾದ ಕಥೆ ಮತ್ತು ಪಾತ್ರ ನನಗೆ ಇಷ್ಟವಾಗಬೇಕು. ಅದು ಹೀರೋ ಪಾತ್ರವಿರಲಿ, ವಿಲನ್ ಪಾತ್ರವಾಗಿರಲಿ, ಪೋಷಕ ಪಾತ್ರವಾಗಿರಲಿ, ಅಥವಾ ಇತರೆ ಯಾವುದೇ ಪಾತ್ರವಾಗಿರಲಿ, ಮೊದಲು ನಾನು ಕಥೆ ಮತ್ತು ಪಾತ್ರವನ್ನು ಎಂಜಾಯ್ ಮಾಡಬೇಕು. ಅದು ನನಗೆ ಖುಷಿ ಕೊಡಬೇಕು. ನನಗೆ ಕಥೆ, ಪಾತ್ರ ಇಷ್ಟವಾದರೆ ಮಾತ್ರ ನಾನು ಅದನ್ನು ನನ್ನ ಪಾತ್ರದ ಮೂಲಕ ಆಡಿಯನ್ಸ್‌ಗೆ ತಲುಪಿಸಲು ಸಾಧ್ಯ. ನನಗೆ ಈ ಕಥೆ, ಪಾತ್ರದಲ್ಲಿ ಏನೋ ಇದೆ ಅಂಥ ಅನಿಸಿದರೆ ಖಂಡಿತಾ, ಯಾವುದೇ ಪಾತ್ರವಾದರೂ ಮಾಡುತ್ತೇನೆ.
ಮುಂಬರುವ ಸಿನಿಮಾಗಳ ಬಗ್ಗೆ ಹೇಳಿ?
ಸದ್ಯ ನಾನು ಹೀರೋ ಆಗಿ ಕಾಣಿಸಿಕೊಂಡಿರುವ “ಕ್ಷೇತ್ರಪತಿ’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಫೈನಲ್ ಹಂತದಲ್ಲಿದ್ದು, ಇದೇ ಜೂನ್ ಅಥವಾ ಜುಲೈ ವೇಳೆಗೆ ರಿಲೀಸ್ ಆಗಲಿದೆ. ಇದೊಂದು ಉತ್ತರ ಕರ್ನಾಟಕದ ಸೊಗಡಿನ ಸಿನಿಮಾ. ರೈತರ ಹೋರಾಟ, ರಾಜಕಾರಣ ಹೀಗೆ ಅನೇಕ ವಿಷಯಗಳು ಸಿನಿಮಾದಲ್ಲಿದೆ. ಈಗಾಗಲೇ ಇದರ ಟೀಸರ್ ರಿಲೀಸ್ ಆಗಿದ್ದು, ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
ಜಿ.ಎಸ್.ಕಾರ್ತಿಕ ಸುಧನ್