ಮಂಗಳೂರು: ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರ ಅಕಾಡೆಮಿಯ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕುಸಲ್ದರಸೆ ನವೀನ್ ಡಿ ಪಡೀಲ್ ಇವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರವಾದ ‘ಜೀಟಿಗೆ’ ನಂತರ ಸಂತೋಷ್ ಮಾಡ ಇವರು ನಿರ್ದೇಶಿಸಿದ ಮೊದಲ ಅರೆಭಾಷೆ ಚಿತ್ರವಾದ ‘ಮೂಗಜ್ಜನ ಕೋಳಿ’ ಚಿತ್ರದಲ್ಲಿ ಮುಖ್ಯ ಪಾತ್ರವಾದ ಮೂಗಜ್ಜನ ಪಾತ್ರವನ್ನು ನವೀನ್ ಡಿ ಪಡೀಲ್ ಇವರು ನಿರ್ವಹಿಸಿದ್ದಾರೆ. ಇಡೀ ಸಿನಿಮಾದಲ್ಲಿ ಒಂದೇ ಒಂದು ಮಾತಿಲ್ಲದ, ಕೋಳಿಗಳನ್ನು ಪ್ರೀತಿಸುವ ಒರಟು ಮುದುಕನ ಪಾತ್ರವನ್ನುಇವರು ಅಭಿನಯಿಸಿದ್ದರು.
‘ನಮ್ಮಕನಸು ಪ್ರೊಡಕ್ಷನ್ಸ್’ ಎಂಬ ಬ್ಯಾನರಿನಡಿಯಲ್ಲಿ ಕೆ.ಸುರೇಶ್ ನಿರ್ಮಿಸಿರುವ ಚೊಚ್ಚಲ ಚಿತ್ರ ಮೂಗಜ್ಜನ ಕೋಳಿಗೆ ಸುರೇಶ್ ಅರಸ್ ಸಂಕಲನವಿದೆ. ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಸಾಹಿತ್ಯ ಬರೆದಿದ್ದು, ಪಿ.ವಿಷ್ಣುಪ್ರಸಾದ್ ಛಾಯಾಗ್ರಾಹಕರಾಗಿದ್ದಾರೆ. ವಿನೀತ್ ವಟ್ಟಂಕುಳತ್ ಅವರ ಕಥೆ, ರಮೇಶ್ ಶೆಟ್ಟಿಗಾರ್ ಅವರ ಚಿತ್ರಕಥೆ ಹಾಗೂ ಸಂಭಾಷಣೆಯಿದೆ. ಈ ಚಿತ್ರಕ್ಕೆ ಸುಳ್ಯದ ಯುವ ಕವಯತ್ರಿ ರಮ್ಯಶ್ರೀ ನಡುಮನೆ ಇವರು ಅರೆಭಾಷೆಯ ಸಹಾಯ ನೀಡಿದ್ದಾರೆ.
ಹಿನ್ನಲೆ ಸಂಗೀತ ದೀಪಾಂಕುರನ್, ಹಾಡುಗಳಿಗೆ ಅರುಣ್ ಗೋಪನ್, ಕಲಾ ನಿರ್ದೇಶನವನ್ನು ರಾಜೇಶ್ ಬಂದ್ಯೋಡ್, ವಸ್ತ್ರಾಲಂಕಾರವನ್ನು ಮೀರಾ ಸಂತೋಷ್, ಸಹನಿರ್ದೇಶಕರಾಗಿ ಅವಿನಾಶ್ ರೈ ಕಾಸರಗೋಡು, ಸಹಾಯಕ ನಿರ್ದೇಶಕರಾಗಿ, ರವಿ ವರ್ಕಡಿ, ಗಿರೀಶ್ ಸುಳ್ಯ, ಹಾಗೂ ಕಾರ್ಯ ನಿರ್ವಹಣೆಯನ್ನು ವಿಜಯ್ ಮಯ್ಯ ನಿರ್ವಹಿಸಿದ್ದಾರೆ.
ಈ ಚಿತ್ರಕ್ಕೆ ಹಲವಾರು ಪ್ರಶಸ್ತಿ, ಮನ್ನಣೆಗಳು ದೊರಕಿದ್ದು ಅವುಗಳಲ್ಲಿ 23ನೇ ಯುಫ್ಎಂಸಿ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೇಬಿ ಗೌರಿಕಾಳಿಗೆ ಉತ್ತಮ ಬಾಲನಟಿ ಪ್ರಶಸ್ತಿ, ಜಾಗರಣ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿ, ಫ್ರಾನ್ಸಿನ ಫೆಸ್ಟಿವಲ್ ಡೆ ಸಿನೇಮ ಡಿ ಸಿಫಾಲು, ಇಟಲಿಯ ಗೋಲ್ಡನ್ ಫೆಮಿ ಫಿಲ್ಮ್ ಫೆಸ್ಟಿವಲ್ 2023, ಜಮ್ಮು ಕಾಶ್ಮೀರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2023, ಸ್ಟೂಡೆಂಟ್ ವರ್ಲ್ಡ್‌ಇಂಪಾಕ್ಟ್ ಫೀಲ್ಮ್ ಫೆಸ್ಟಿವಲ್, ಬಿರಿಸಮುಂಡ ಚಿತ್ರೋತ್ಸವ, ತಮೀಝಗಂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಸ್ಟ್ ಇಂಟರ್ನ್ಯಾಷನಲ್ ಫಿಲಂ ಅವಾರ್ಡ್, ರೋಹಿಪ್ ಇಂಟರ್ನಲ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ special jury mention, UK ಯ ಲಿಫ್ಟ್ ಆಫ್ ಗ್ಲೋಬಲ್ ನೆಟ್ವರ್ಕ್ ಚಲನಚಿತ್ರೋತ್ಸವ ಹಾಗೂ ಭಾರತದ ಪ್ರತಿಷ್ಠತ ಫಿಲಂ ಫೆಸ್ಟಿವಲ್ ಆದ 29ನೇ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕೂಡ ಈ ಚಿತ್ರವು ಅಧಿಕೃತವಾಗಿ ಆಯ್ಕೆಯಾಗಿದೆ.
ಕುಮಾರಿ ಗೌರಿಕ, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯ, ರಾಘವೇಂದ್ರ ಭಟ್, ಡಾ. ಜೀವನ್ ರಾಮ್ ಸುಳ್ಯ, ಕುಮಾರಿ ಸಾನಿಧ್ಯ, ಹಾಗೂ ಇತರ ಮಕ್ಕಳು ನಟಿಸಿದ್ದಾರೆ.