ನವರಾತ್ರಿಯ ಮೂರನೇ ದಿವಸ, ತೃತೀಯಾದಂದು ದೇವಿ ದುರ್ಗೆಯ ಮೂರನೇ ರೂಪವಾದ ಚಂದ್ರಘಂಟಾ ಶಕ್ತಿಯನ್ನು ಸಾಧಕನು ಅರ್ಚಿಸುತ್ತಾನೆ.
ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||
“ಘಂಟಾಕಾರದ ಅರ್ಧಚಂದ್ರನನ್ನು ಶಿರಸ್ಸಿನಲ್ಲಿ ಧರಿಸಿರುವವಳು ಚಂದ್ರಘಂಟಾ. ಇವಳ ಶರೀರದ ಕಾಂತಿ ಚಿನ್ನದಂತೆ ಹೊಳೆಯುತ್ತಿರುವುದು. ಖಡ್ಗ, ಧನಸ್ಸು, ತ್ರಿಶೂಲ ಮುಂತಾದ ದಿವ್ಯಾಸ್ತ್ರಗಳನ್ನು ಹತ್ತು ಕೈಯಲ್ಲಿ ಧರಿಸಿದ್ದಾಳೆ. ಸಿಂಹಾರೂಢಳಾಗಿ ಯುದ್ಧಕ್ಕೆ ಸನ್ನದ್ಧಳಾಗಿರುವಂತೆ ತೋರುವಳು. ಘಂಟಾನಾದದಂತೆ ಈಕೆಯ ಗಂಭೀರ ಧ್ವನಿ ಕೇಳುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ. ಈ ದೇವಿ ದುಷ್ಟರನ್ನು ಶಿಕ್ಷಿಸುತ್ತಾಳೆ, ಸಜ್ಜನರಿಗೆ ರಕ್ಷಾಕವಚವಾಗಿ ನಿಂತಿದ್ದಾಳೆ. ಈಕೆಯನ್ನು ಆರಾಧಿಸುವ ಭಕ್ತರಿಗೆ ನಿರ್ಭಯತೆ, ಪರಾಕ್ರಮ ಮತ್ತು ಆತ್ಮಶಕ್ತಿಗಳು ದೊರೆಯುತ್ತವೆ.’
ಈ ಆದಿಶಕ್ತಿಯ ಉಪಾಸನೆಯಿಂದ ಸಂಸಾರದ ತ್ರಿತಾಪಗಳು ದೂರವಾಗುತ್ತವೆ. ಇಹ-ಪರದಲ್ಲಿ ಸದ್ಗತಿಯು ದೊರಕುತ್ತದೆ. ಸಾಧಕನು ಈಕೆಯನ್ನು ಪೂಜಿಸುವುದರಿಂದ ಮನಸ್ಸು ಮಣಿಪುರ ಚಕ್ರವನ್ನು ಪ್ರವೇಶಿಸುತ್ತದೆ. ಸಾಧಕನಿಗೆ ದೇವಿಯ ಕೃಪೆಯಿಂದ ಅಲೌಕಿಕ ವಸ್ತುಗಳ ದರ್ಶನವಾಗುತ್ತದೆ. ಮಂಗಳ ಧ್ವನಿಗಳು ಕೇಳಿಬರುತ್ತವೆ. ಸಾಧಕನು ಧ್ಯಾನಸಿದ್ಧನಾದಾಗ ಘಂಟೆಯ ಧ್ವನಿಯೂ ಅಂದರೆ ಅನಾಹತ ಧ್ವನಿಯೂ ಕೇಳಿಬರುತ್ತದೆ ಎಂದು ತಂತ್ರಶಾಸ್ತ್ರಗಳಲ್ಲಿ ಉಲ್ಲೇಖವಿದೆ.