ಇಲ್ಲಿಯವರೆಗೆ ದುರ್ಗಾಮಾತೆಯ ಎಂಟು ರೂಪಗಳ ಕುರಿತು ತಿಳಿದೆವು. ಜಗನ್ಮಾತೆಯ ಒಂಬತ್ತನೇ ರೂಪವೇ ಸಿದ್ಧಿಧಾತ್ರೀ.ಸಿದ್ಧಿಧಾತ್ರೀ ಎಂದರೆ ಸಿದ್ಧಿಗಳನ್ನು, ವಿಶೇಷ ಶಕ್ತಿಗಳನ್ನು ಈಕೆ ದಯಪಾಲಿಸುತ್ತಾಳೆ ಎಂದು ಅರ್ಥ. ನಮಗೆ ಅಷ್ಟಸಿದ್ಧಿಗಳ ಕುರಿತು ತಿಳಿದಿದೆ. ಆದರೆ ಬ್ರಹ್ಮವೈವರ್ತ ಪುರಾಣದ ಪ್ರಕಾರ ಸಿದ್ಧಿಗಳು 18. ಅವು 1. ಅಣಿಮಾ 2. ಲ ಮಾ 3. ಪ್ರಾಪ್ತಿ 4. ಪ್ರಾಕಾಮ್ಯ 5. ಮಹಿಮಾ 6. ಈಶ್ವರ ವಶಿತ್ವ 7. ಸರ್ವಕಾಮಾನಸಾಯಿತಾ 8. ಸರ್ವಜ್ಞತ್ವ 9. ದೂರಶ್ರವಣ 10. ಪರಕಾಯಪ್ರವೇಶ 11. ವಾಕ್‌ಸಿದ್ಧಿ 12. ಕಲ್ಪವೃಕ್ಷ 13. ಸೃಷ್ಟಿ 14. ಸಂಹಾರಕರಣ 15. ಅಮರತ್ವ 16. ಸರ್ವನಾಯಕತ್ವ 17. ಭಾವನಾ 18. ಸಿದ್ಧಿ ಸಿದ್ಧ ಗಂಧರ್ವ ಯಕ್ಷಾದೈರಸುರೈರಮರೈರಪಿ |ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||
“ಸಾಧಕರಿಗೆ ಈ ಮೇಲಿನ ಎಲ್ಲ ಸಿದ್ಧಿಗಳನ್ನು ನೀಡುವವಳೇ ಸಿದ್ಧಿಧಾತ್ರೀ. ದೇವಿ ಪುರಾಣದ ಪ್ರಕಾರ ಪರಶಿವನಿಗೂ ಸಹ ಈಕೆಯ ಕೃಪೆಯಿಂದಲೇ ಸಿದ್ಧಿಗಳು ದೊರೆತಿವೆ ಎಂದು. ಸಿದ್ಧರು, ಗಂಧರ್ವರು, ಯಕ್ಷರು, ದೇವತೆಗಳೂ ಇವಳನ್ನು ಸಿದ್ಧಿಗಳಿಗಾಗಿ ಪೂಜಿಸುತ್ತಾರೆ. ಈಕೆಯ ವಾಹನ ಸಿಂಹ. ಸದಾ ಕಮಲಪುಷ್ಪದ ಮೇಲೆ ಈಕೆ ಕುಳಿತಿದ್ದು, ಚತುಭುìಜವನ್ನು ಹೊಂದಿದ್ದಾಳೆ. ಮೇಲಿನ ಬಲಹಸ್ತದಲ್ಲಿ ಕಮಲ, ಕೆಳಗಿನ ಬಲಹಸ್ತದಲ್ಲಿ ಗದೆ, ಮೇಲಿನ ಎಡಹಸ್ತದಲ್ಲಿ ಶಂಖ, ಕೆಳಗಿನ ಎಡಹಸ್ತದಲ್ಲಿ ಕಮಲವನ್ನು ಹಿಡಿದಿದ್ದಾಳೆ.’
ನವಮಿ ತಿಥಿಯಂದು ಈಕೆಯನ್ನು ಭಕ್ತರು ಆರಾಧಿಸುತ್ತಾರೆ. ಈ ದಿನ ಶಾಸ್ತ್ರ ಹೇಳಿರುವ ವಿಧಿ-ವಿಧಾನಗಳಂತೆ, ಭಕ್ತಿ ಶ್ರದ್ಧೆಗಳಿಂದ ಸಿದ್ಧಿಧಾತ್ರಿಯನ್ನು ಆರಾಧಿಸಿದರೆ ಸಮಸ್ತ ಸಿದ್ಧಿಗಳೂ ದೊರೆಯುತ್ತವೆ. ಸಿದ್ಧಿಧಾತ್ರಿಯನ್ನು ಪೂಜಿಸುವ ಭಕ್ತನು ಸಂಸಾರದಲ್ಲಿ ನಿರ್ಲಿಪ್ತತೆಯನ್ನು ಪಡೆದು, ಪರಮಫಲವಾದ ಮೋಕ್ಷವನ್ನು ಹೊಂದುತ್ತಾನೆ. ಭಗವತಿಯ ಪರಮಸಾನ್ನಿಧ್ಯ ದೊರೆತು, ಜನ್ಮವು ಸಾರ್ಥಕವಾಗುತ್ತದೆ.
ಸ್ವಾಮಿ ಶಾಂತಿವ್ರತಾನಂದಜೀ,
ಅಧ್ಯಕ್ಷರು, ರಾಮಕೃಷ್ಣ ವೇದಾಂತ ಕೇಂದ್ರ, ಐರ್ಲೆಂಡ್