Advertisement
ಕೊಲ್ಲೂರಲ್ಲಿ ಅಕ್ಷರಭ್ಯಾಸ:ಶಕ್ತಿದೇವತೆಯ ಕೇಂದ್ರ ಕೊಲ್ಲೂರಿನಲ್ಲಿ ಶುಕ್ರವಾರ ವಿಜಯದಶಮಿ ಪ್ರಯುಕ್ತ ಸರಸ್ವತಿ ಮಂಟಪ ಹಾಗೂ ಚಂಡಿಕಾ ಯಾಗದ ಹೊರ ಪೌಳಿಯಲ್ಲಿ ಅಕ್ಷರಾಭ್ಯಾಸಕ್ಕೆ ಸಹಸ್ರಾರು ಮಕ್ಕಳು ಪೋಷಕರೊಡನೆ ಆಗಮಿಸಿದ್ದರು. ಮಕ್ಕಳ ನಾಲಗೆಯ ಮೇಲೆ ಚಿನ್ನದ ನಾಣ್ಯದಲ್ಲಿ ಓಂಕಾರ ಬರೆಯಲಾಯಿತು. ಅಕ್ಕಿಯಲ್ಲಿ ಕೂಡ ವಿದ್ಯಾರಂಭ ನಡೆಯಿತು. ಈ ಮಧ್ಯೆ, ಗುರುವಾರ ಮೂಕಾಂಬಿಕಾ ದೇಗುಲದಲ್ಲಿ ಚಂಡಿಕಾಯಾಗ ಹಾಗೂ ರಥೋತ್ಸವ ನಡೆಯಿತು. ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಜಯಘೋಷದೊಂದಿಗೆ ರಥೋತ್ಸವದಲ್ಲಿ ಪಾಲ್ಗೊಂಡರು.
ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ಶೃಂಗೇರಿ ಶ್ರೀ ಶಾರದಾಂಬೆಗೆ ಸಿಂಹವಾಹನ ಅಲಂಕಾರ ಮಾಡಲಾಗಿತ್ತು. ಮಠದಲ್ಲಿ ಅ.14 ಪಂಚಮಿಯಿಂದ ಆರಂಭವಾಗಿದ್ದ ಶತಚಂಡಿಯಾಗ ಸಂಪನ್ನಗೊಂಡಿತು. ತಾಯಿ ಶಾರದೆಯು ಸಿಂಹವಾಹನವನ್ನೇರಿ ಕೈಯಲ್ಲಿ ತ್ರಿಶೂಲ ಧರಿಸಿ, ಚಂಡ ಮುಂಡಾದಿ ದುಷ್ಟ ದೈತ್ಯರನ್ನು ಸಂಹರಿಸಿ, ಶಿಷ್ಟ ರಕ್ಷಣೆಗಾಗಿ ಚಾಮುಂಡಿ ಅವತಾರದಲ್ಲಿ ಭಕ್ತರನ್ನು ಅನುಗ್ರಹಿಸಿದಳು. ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಗುರುಪಾದುಕೆ ಶ್ರೀ ಚಕ್ರಕ್ಕೆ ಪೂಜೆ ಸಲ್ಲಿಸಿ ಶ್ರೀ ಶಾರದಾಂಬೆಗೆ ಶ್ರೀ ಸೂಕ್ತ ಪುಷ್ಪಾರ್ಚನೆ ಸಲ್ಲಿಸಿದರು. ನಂತರ, ಮಠದ ಯಾಗಶಾಲೆಯಲ್ಲಿ ಐದು ದಿನದಿಂದ ನಡೆಯುತ್ತಿರುವ ಶತಚಂಡಿ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಶತಚಂಡಿಯಾಗದ ಭಾಗವಾಗಿ ಶ್ರೀಮಠದ ಅರ್ಚಕರಾದ ನಾಗರಾಜ ಭಟ್ ನೇತೃತ್ವದ ಹತ್ತು ಜನ ಋತ್ವಿಜರು ದುರ್ಗಾ ಸಪ್ತಶತಿ ಪಾರಾಯಣ ಪಠಿಸಿದರು.