Advertisement

ನವರಾತ್ರಿ: ಎಲ್ಲೆಡೆ ಹಬ್ಬದ ಚೈತನ್ಯ

10:52 AM Oct 10, 2018 | |

ಪುತ್ತೂರು: ನವರಾತ್ರಿ ಹಿಂದೂ ಬಾಂಧವರಿಗೆ ಹಬ್ಬಗಳ ಸಂಭ್ರಮ. ಮನೆಗಳಲ್ಲಿ, ಶ್ರದ್ಧಾ ಕೇಂದ್ರಗಳಲ್ಲಿ, ವ್ಯಾಪಾರ ಮಳಿಗೆಗಳಲ್ಲೂ ಸಂಭ್ರಮ ಕಂಡುಬರುತ್ತಿದೆ. ನವರಾತ್ರಿ ದಿನಗಳಲ್ಲಿ ಲಲಿತಾಪಂಚಮಿ, ಶಾರದಾ ಪೂಜೆ, ದುರ್ಗಾಷ್ಟಮಿ, ಆಯುಧ ಪೂಜೆ, ವಿಜಯದಶಮಿ, ದೀಪಾವಳಿ, ನರಕ ಚತುರ್ದಶಿ, ಧನಲಕ್ಷ್ಮೀ ಪೂಜೆ, ಬಲಿಪಾಡ್ಯಮಿ – ಹಬ್ಬಗಳ ಸಾಲೇ ಇದೆ. ಆಸ್ತಿಕ ವರ್ಗಕ್ಕಿದು ಆರಾಧನೆಯ ಕಾಲ.

Advertisement

ನವರಾತ್ರಿಯಲ್ಲಿ ಗಣಪತಿ, ಶಾರದೆಯ ಸಹಿತ ನವದುರ್ಗೆಯರಾದ ಚಂದ್ರಘಂಟಾ, ಶೈಲಪುತ್ರಿ, ಬ್ರಹ್ಮಚಾರಿಣಿ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ದೇವದೂತಿಯರ ಆರಾಧನೆಯಲ್ಲಿ ಭಕ್ತಸಮೂಹ ತೊಡಗಿಸಿಕೊಂಡಿದೆ. ರಕ್ಷಣೆಗೆ ದುರ್ಗೆ, ಸಮೃದ್ಧಿಗೆ ಲಕ್ಷ್ಮೀ, ಜ್ಞಾನಕ್ಕೆ ಸರಸ್ವತಿ ಸೇರಿ ಉತ್ಕಟಗೊಳ್ಳುವ ಆದಿಶಕ್ತಿಯ ಆರಾಧನೆಯೊಂದಿಗೆ 10ನೆಯ ದಿನ ದುಷ್ಟಶಕ್ತಿ ನಿರ್ಮೂಲನೆ ಮಾಡುವ ವಿಜಯದಶಮಿಯನ್ನು ದಸರಾ ಹಬ್ಬವಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ.

ಉತ್ತಮ ವ್ಯಾಪಾರದ ನಿರೀಕ್ಷೆ
ಆರಾಧನೆ ಹಾಗೂ ಸಂಭ್ರಮದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ, ಖರೀದಿ ಚುರುಕುಗೊಂಡಿದೆ. ಚಿನ್ನ, ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮಳಿಗೆ, ವಸ್ತ್ರ ಮಳಿಗೆ, ಹೂವು -ಹಣ್ಣುಗಳ ಮಾರುಕಟ್ಟೆ ಮುಂತಾದವುಗಳಲ್ಲಿ ವ್ಯಾಪಾರ, ವ್ಯವಹಾರ ಪ್ರಕ್ರಿಯೆಗಳಲ್ಲಿ ಚುರುಕು ಕಾಣಿಸಿಕೊಂಡಿದೆ. ಹಬ್ಬಕ್ಕಾಗಿ ವಿಶೇಷ ಮಾರಾಟ, ಕೊಡುಗೆ ಘೋಷಿಸಲಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯುತ್ತಿದ್ದಾರೆ.

ನವರಾತ್ರಿಯ ದೇವಿಯರ ಆರಾಧನೆಯಿಂದ ಹಿಡಿದು ಆಯುಧ ಪೂಜೆಯವರೆಗೆ ಹೂವು, ಹಣ್ಣುಗಳು, ಸಿಹಿ ತಿಂಡಿಗಳಿಗೆ, ತರಕಾರಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ವ್ಯಾಪಾರಿಗಳು ಹೆಚ್ಚಿನ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಮಳಿಗೆಗಳಲ್ಲಿ ಗ್ರಾಹಕರಿಗೆ ಬೇಕಾದ ವಸ್ತುಗಳನ್ನು ಶೇಖರಣೆ ಮಾಡಿಕೊಂಡಿದ್ದಾರೆ. ತಾತ್ಕಾಲಿಕ ಹೂವಿನ ವ್ಯಾಪಾರ ತಲೆ ಎತ್ತಿದೆ.

ವಾಹನ, ಕೃಷಿ ಸಲಕರಣೆ ಸಹಿತ ಮನುಷ್ಯ ಜೀವನದಲ್ಲಿ ಯಂತ್ರ, ಆಯುಧಗಳ ಬಳಕೆ ಅನಿವಾರ್ಯವಾಗಿರುವುದರಿಂದ ಆಯುಧ ಪೂಜೆಯನ್ನಂತೂ ಎಲ್ಲಾ ಕಡೆ ಆಚರಿಸುತ್ತಾರೆ. ಆಯುಧ ಪೂಜೆಗಾಗಿ ವಾಹನಗಳನ್ನು ಸುಸ್ಥಿತಿಗೆ ತರಲು ಎಲ್ಲರೂ ಬಯಸುವುದರಿಂದ ಸಂಬಂಧಿಸಿದ ಶೋ ರೂಂನವರಿಗೂ ಇದು ಸುಗ್ಗಿಯ ಕಾಲ.

Advertisement

ತಾತ್ಕಾಲಿಕ ಹೊರ ಮಾರುಕಟ್ಟೆಯಲ್ಲಿ ಚೆಂಡು ಹೂವು ಮಾರು ಒಂದರ 80 ರೂ., ಸೇವಂತಿಗೆ 100 ರೂ., ಮುಗುಡಿ 100 ರೂ., ಬಟನ್ಸ್‌ 60 ರೂ., ಗೊಂಡೆ ಹೂವು ಮಾಲೆಗೆ 80 ರೂ., ಸೇಬು ಕೆ.ಜಿ.ಗೆ 120 ರೂ., ಲಿಂಬೆ 120, ಕದಳಿ ಬಾಳೆ ಹಣ್ಣು 60 ರೂ. ದರವಿದೆ. ಮಹಾನವಮಿ, ವಿಜಯದಶಮಿಗಳಂದು ಈ ದರಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಉತ್ಸವ  
ಶ್ರೀ ಮಹಾಮಾಯ ದೇವಸ್ಥಾನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಭಾಭವನ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನ, ಲಕ್ಷ್ಮೀ ದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಶ್ರೀ ಶಾರದಾ ಮಂದಿರ, ಬೊಳುವಾರು ಶ್ರೀ ಆಂಜನೇಯ ದೇವಸ್ಥಾನ, ಕೆಯ್ಯೂರು ಮಹಿಮರ್ದಿನಿ ದೇವಸ್ಥಾನ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಹಿತ ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next