ಹುಣಸೂರು: ಜನರ ಆರಾಧ್ಯದೇವತೆ ಶ್ರೀ ಮುತ್ತು ಮಾರಮ್ಮ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ಧನ್ಯತಾ ಭಾವ ಮೆರೆದರು.
ದೇವಾಲಯದಲ್ಲಿ ಆ.15ರ ಭಾನುವಾರ ಬೆಳಗ್ಗೆ ಅರ್ಚಕ ಪಾರ್ತಿವನ್ ಸಹೋದರರು ವಿವಿಧ ಅಭಿಷೇಕ ನಡೆಸಿದರು. ನವರಾತ್ರಿ ಅಂಗವಾಗಿ ದೇವಾಲಯದ ಪ್ರಾಂಗಣವನ್ನು ಹೂವುಗಳಿಂದ ಶೃಂಗರಿಸಿದ್ದರಲ್ಲದೆ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ಬೊಂಬೆ ಪ್ರದರ್ಶನ ಆಯೋಜಿಸಿದ್ದರು.
ಸಂಜೆ ಆಯೋಜಿಸಿದ್ದ ಸಾಂಸೃತಿಕ ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತೆ ಎಂ.ಮಾನಸ ಉದ್ಘಾಟಿಸಿ ಮಾತನಾಡಿ, ದೇವಾಲಯ, ಮಠ, ಮಂದಿರಗಳು ಇಂದಿನ ಯುವ ಸಮೂಹಕ್ಕೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ತಿಳಿಸಿಕೊಡುವ ಸೇವಾ ಕೇಂದ್ರಗಳಾಗಬೇಕೆಂದು ಆಶಿಸಿದರು.
ಈ ವೇಳೆ ದೇವಾಲಯ ಸಮಿತಿ ಅಧ್ಯಕ್ಷ ಮಹದೇವ್, ಅಶೋಕ್ ರಾಜಲಿಂಗಯ್ಯ, ಗುಂಡುಮಣಿ, ಈಶ್ವರಯ್ಯ ಸೇರಿದಂತೆ ಪದಾಧಿಕಾರಿಗಳಿದ್ದರು.