ಉದ್ಯಾವರ ಆರೂರು ತೋಟ ಯು. ಶ್ರೀನಿವಾಸ ಭಟ್ ಅವರ ಪೂರ್ವಜರಿಂದಲೂ ಈ ಬೊಂಬೆ ಆರಾಧನೆಯ ಪದ್ಧತಿಯು ಆರಂಭಗೊಂಡಿದ್ದು, ಇದೀಗ ನಾಲ್ಕನೇ ಪೀಳಿಗೆಗೆ ಮುಂದುವರೆಯುತ್ತಿದೆ.
Advertisement
ಗೊಂಬೆಯಾರಾಧನೆಗೆ ಸುವರ್ಣ ವರ್ಷ- ಕನಕ ಗೋಪುರದಿಂದ ಶ್ರೀ ಕೃಷ್ಣನ ದರ್ಶನ ಸ್ಪೆಷಲ್:ಈ ಬಾರಿಯ ದಸರಾದಲ್ಲಿ ಗೊಂಬೆಯ ಆರಾಧನ ಪದ್ಧತಿ ಆರಂಭಿಸಿ 50 ವರ್ಷಗಳು ತುಂಬುತ್ತಿದ್ದು, ಅದಕ್ಕಾಗಿಯೇ ವಿಶೇಷವಾಗಿ ಕಲಾವಿದ ವಿಶ್ವೇಶ್ವರ ಪರ್ಕಳ ಅವರ ಮೂಲಕ ಕನಕ ಗೋಪುರ, ಕನಕನ ಕಿಂಡಿ, ಶ್ರೀ ಕೃಷ್ಣ ಮಠ, ರಥವನ್ನು ನಿರ್ಮಿಸಿ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣ ಮುಖ್ಯಪ್ರಾಣನ ದರ್ಶನ ಭಾಗ್ಯ ವಿಶೇಷ ಆಕರ್ಷಣೆಯಾಗಿದೆ. ಅದರ ಮುಂಭಾಗದಲ್ಲಿ ರಂಗವಲ್ಲಿ ಕಲೆಯ ಮೂಲಕ ಆಕರ್ಷಣೀಯವಾಗಿ ಸಂತ ಶ್ರೇಷ್ಠ ಆಚಾರ್ಯ ಮಧ್ವರು ಶ್ರೀ ಕೃಷ್ಣನ ವಿಗ್ರಹವನ್ನು ಹಿಡಿದ ಮಾದರಿಯು ನೋಡುಗರನ್ನು ಮತ್ತಷ್ಟು ಭಾವುಕರನ್ನಾಗಿಸುತ್ತಿದೆ.
ಗಣಪತಿ, ರಾಮ, ಸೀತೆ, ಲಕ್ಷ್ಮಣ, ಅಷ್ಟ ಲಕ್ಷ್ಮಿಯರು ಸಹಿತ ವಿಶೇಷವಾಗಿ ಧರ್ಮ ಸಂದೇಶವನ್ನು ಸಾರುವಂತಹ ವಿಶ್ವ ರೂಪ ದರ್ಶನ, ರಾವಣ ದರ್ಬಾರು, ಅರಗಿನ ಅರಮನೆ, ದಶಾವತಾರ, ಗಜೇಂದ್ರ ಮೋಕ್ಷ, ಶ್ರೀ ರಾಮನ ಪಟ್ಟಾಭಿಷೇಕ, ಆಚಾರ್ಯ ಭೀಷ್ಮರ ಶರಶಯ್ಯೆ ವಿಶೇಷವಾಗಿ ಗಮನ ಸೆಳೆಯುತ್ತಿದ್ದು, ರಷ್ಯಾ, ಕೌಲಾಲಂಪುರ, ಮಲೇಷ್ಯಾ, ದುಬೈ ಸಹಿತ ವಿದೇಶದಲ್ಲಿಯೂ ಖರೀದಿಸಿ ಗೊಂಬೆಗಳು ಆಕರ್ಷಿಸುತ್ತಿದೆ.
Related Articles
Advertisement
ಮನೆಯವರೆಲ್ಲರಿಗೂ ಗೊಂಬೆ ಖರೀದಿ ಹವ್ಯಾಸ:ಯು. ಶ್ರೀನಿವಾಸ ಭಟ್ ಅವರು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಸಂದರ್ಭ 1972ರಲ್ಲಿ ಹೈದರಾಬಾದ್ನಲ್ಲಿ ಆರಂಭಿಸಲಾಗಿದ್ದ ಈ ಗೊಂಬೆ ಆರಾಧನೆಯು ವರ್ಗಾವಣೆ ಪಡೆದು ತೆರಳಿದ ಊರುಗಳಲ್ಲಿಯೂ ಪೂಜೆಯನ್ನು ಮುಂದುವರೆಸುತ್ತಾ ಬಂದಿದ್ದು, ತೆರಳಿದ ಊರುಗಳಲ್ಲಿ ಮನೆಯವರೆಲ್ಲರಿಗೂ ಗೊಂಬೆಯನ್ನು ಖರೀದಿಸುತ್ತಾ ಬಂದಿದ್ದು ಸಂಗ್ರಹಿಸಲಾಗಿದೆ ಎನ್ನುತ್ತಾರೆ. ಮಣ್ಣು, ಮರದ ಗೊಂಬೆ:
ಗೇರು ಹಣ್ಣು ಕೂಡ ಸಂಗ್ರಹದಲ್ಲಿದ್ದು ಮರದಿಂದ, ಮಣ್ಣು, ಪಿಂಗಾಣಿ ಸಹಿತ ಇತರೇ ವಸ್ತುಗಳಿಂದ ಸಿದ್ಧಪಡಿಸಿದ ಗೊಂಬೆಗಳು ಇಲ್ಲಿ ಆರಾಧಿಸಲ್ಪಡುತ್ತಿದ್ದು, ಪೂಜಿಸಲ್ಪಟ್ಟ ದುರ್ಗೆಯ ಗೊಂಬೆಯನ್ನು ಅಡ್ಡಲಾಗಿ ಮಲಗಿಸಿ ವಿಸರ್ಜನೆಯ ಕ್ರಮವನ್ನು ಅನುಸರಿಸಿ ಈ ಬಾರಿಯ ದಸರಾ ಗೊಂಬೆಯ ಆರಾಧನೆಯು ಸಂಪನ್ನಗೊಳ್ಳಲಿದೆ.
ನವರಾತ್ರಿಯ ಸಂದರ್ಭ ಎಲ್ಲರೂ ಬ್ಯುಸಿ ಇರುವುದರಿಂದ 15 ದಿನಗಳ ಕಾಲ ಈ ಗೊಂಬೆಯ ಪೂಜೆ, ಪ್ರದರ್ಶನ ನಡೆಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಣೆಗೆ ಬರುತ್ತಿದ್ದಾರೆ ಎಂದು ಮನೆ ಮಂದಿ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಳೆ ಮೈಸೂರು, ಕೇರಳ, ತಮಿಳ್ನಾಡು, ಆಂದ್ರ ರಾಜ್ಯಗಳಲ್ಲಿ ಕಂಡು ಬರುವ ಗೊಂಬೆ ಆರಾಧನೆಯು ಉಡುಪಿ ಉದ್ಯಾವರದಲ್ಲಿ 50 ರ ಸಂಭ್ರಮ ಕಾಣುತ್ತಿರುವುದು ವಿಶೇಷ ಆಕರ್ಷಣೆಯೂ ಆಗಿದೆ. – ವಿಜಯ ಆಚಾರ್ಯ ಉಚ್ಚಿಲ