ಗದಗ: ನಗರ ಸೇರಿದಂತೆ ಜಿಲ್ಲಾದ್ಯಂತ ವಿವಿಧ ದೇವಿ ದೇವಸ್ಥಾನಗಳಲ್ಲಿ 9 ದಿನಗಳ ಕಾಲ ನಡೆಯುವ ನವರಾತ್ರಿ ವಿಶೇಷ ಪೂಜೆ ಹಾಗೂ ಶರನ್ನವರಾತ್ರಿ ಹಿನ್ನೆಲೆಯಲ್ಲಿ ಬುಧವಾರ ಘಟಸ್ಥಾಪನೆ ನೆರವೇರಿಸಲಾಯಿತು.
ಬುಧವಾರ ಬೆಳಗ್ಗೆಯಿಂದಲೇ ದೇವಸ್ಥಾನಗಳಲ್ಲಿ ದೇವಿ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಜಲಾಭಿಷೇಕ, ಕುಂಕು ಮಾರ್ಚನೆ, ಸಹಸ್ರ ನಾಮಾವಳಿ ಮತ್ತು ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ನವರಾತ್ರಿ ಉತ್ಸವದ ನಗರದ ವಿವಿಧ ದೇವಸ್ಥಾನಗಳನ್ನು ಹೂವು, ತಳಿರು ತೋರಣಗಳಿಂದ ಅಲಂಕಾರಿಸಲಾಗಿತ್ತು. ಘಟಸ್ಥಾಪನೆ ಮಾಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಲಾಯಿತು. ಭಕ್ತರು ದೇವತೆಗಳ ದರ್ಶನ ಪಡೆದು ಪುನೀತರಾದರು.
ಕೆಲವೆಡೆ ದೇವಿ ಮೂರ್ತಿಯೊಂದಿಗೆ ಕುಂಭ ಮೆರವಣಿಗೆ ನಡೆಯಿತು. ಸಂಜೆ ವೇಳೆ ಬಹುತೇಕ ದೇವಸ್ಥಾನಗಳಲ್ಲಿ ಘಟಸ್ಥಾಪನೆಯೊಂದಿಗೆ ಪುರಾಣ ಪ್ರವಚನ ಆರಂಭಗೊಂಡವು. ವಿವಿಧ ಮಠಾಧೀಶರು, ಕೀರ್ತನಕಾರರು, ಪ್ರವಚನಕಾರರು ಪುರಾಣ ಪ್ರವಚನ ಕಾರ್ಯಕ್ರಮಗಳು ಆರಂಭಗೊಂಡವು.
ದೇವಿ ಪ್ರಾಣ ಪ್ರತಿಷ್ಠಾಪನೆ: ಹಳೆ ಸರಾಫ್ ಬಜಾರ್‌ನ ಜಗದಂಬಾ ದೇವಸ್ಥಾನ, ಗಂಗಾಪುರ ಪೇಟೆಯ ದುರ್ಗಾ ದೇವಿ ದೇವಸ್ಥಾನ, ತುಳಜಾ ಭವಾನಿ ದೇವಸ್ಥಾನ, ರಾಮಕೃಷ್ಣ-ವಿವೇಕಾನಂದ ಆಶ್ರಮ, ಕಳಸಾಪುರ ರಸ್ತೆ ಶಾಂತಿನಾಥ ದಿಗಂಬರ ಜೈನ್ ಮಂದಿರ, ಮುಕ್ಕಣ್ಣೇಶ್ವರ ಮಠ, ಅಧ್ಯಾತ್ಮ ವಿದ್ಯಾಶ್ರಮ, ನಂದೀಶ್ವರಮಠ, ನಂದಿವೇರಿ ಮಠ, ಅಡವೀಂದ್ರಸ್ವಾಮಿ ಮಠ, ವಿಭೂತಿ ಓಣಿಯ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ, ರಾಜೀವಗಾಂಧಿ ನಗರದ ಬನ್ನಿಮಹಾಂಕಾಳಿ ದೇವಸ್ಥಾನ, ಬೆಟಗೇರಿ ಹಳೆ ಮತ್ತು ಹೊಸ ಬನಶಂಕರಿ ದೇವಸ್ಥಾನ, ಅಂಬಾ ಭವಾನಿ ದೇವಸ್ಥಾನ, ಶಿವಶರಣೆ ನೀಲಮ್ಮತಾಯಿ ಅಸುಂಡಿ ಅಧ್ಯಾತ್ಮ ವಿದ್ಯಾಶ್ರಮ, ಡೋಹರ ಗಲ್ಲಿಯ ಶ್ರೀದೇವಿ, ಅಮರೇಶ್ವರ ನಗರದ ಬನ್ನಿ ಮಹಾಂಕಾಳಿ ದೇವಸ್ಥಾನ, ಅಕ್ಕನ ಬಳಗದಲ್ಲಿ ಆದಿಶಕ್ತಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಘಟಸ್ಥಾಪನೆ ಮಾಡಲಾಯಿತು.
ಅ.19ರ ವರೆಗೆ ದೇವಸ್ಥಾನಗಳಲ್ಲಿ ಆದಿಶಕ್ತಿಗೆ ವಿಶೇಷ ಪೂಜೆ ನೆರವೇರಲಿದ್ದು, ಲಲಿತ ಸಹಸ್ರನಾಮಾವಳಿ ಪಾರಾಯಣ, ದುರ್ಗಾಷ್ಟಮಿ, ನವದುರ್ಗೆಯರ ಪೂಜೆ, ಅನ್ನದಾಸೋಹ, ಸಾಂಸ್ಕೃತಿಕ ಕಾರ್ಯಕ್ರಮ, ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ. ಅ.19ರಂದು ವಿಜಯದಶಮಿ, ಪ್ರವಚನ ಮಂಗಲ, ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ.