ನೃತ್ಯ ನಿರ್ದೇಶಕ ಮಾಲೂರು ಶ್ರೀನಿವಾಸ್ ಈ ಹಿಂದೆ ನೃತ್ಯ ತರಬೇತಿ ಶಾಲೆ ನಡೆಸುತ್ತಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು, ಸಿನಿಮಾ ನಟನ ತರಬೇತಿ ಸಂಸ್ಥೆ ಆರಂಭಿಸಿದ್ದಾರೆ. ಅದಕ್ಕೆ ಅವರಿಟ್ಟ ಹೆಸರು ನವರಸ ನಟನಾ ಅಕಾಡೆಮಿ ಚಲನಚಿತ್ರ ತರಬೇತಿ ಸಂಸ್ಥೆ. ಇತ್ತೀಚೆಗೆ ಈ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮತ್ತು ನಟಿ ತಾರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾಲೂರು ಶ್ರೀನಿವಾಸ್ ಅವರ ಡ್ಯಾನ್ಸ್ ಸ್ಕೂಲ್‌ಗೆ ಒಮ್ಮೆ ಭೇಟಿ ನೀಡಿದ ಶಿವರಾಜಕುಮಾರ್, ಕೇವಲ ಡ್ಯಾನ್ಸ್ ಕ್ಲಾಸಿಗೆ ಮೀಸಲಿರಿಸದೆ ನಟನೆ ತರಬೇತಿಯನ್ನು ಶುರು ಮಾಡುವಂತೆ ಸಲಹೆ ನೀಡಿದರಂತೆ.
ಅದರಂತೆ ಈಗ ನಟನಾ ತರಬೇತಿ ಸಂಸ್ಥೆಯನ್ನು ಆರಂಭಿಸಿದ್ದಾಗಿ ಹೇಳುತ್ತಾರೆ ಮಾಲೂರು ಶ್ರೀನಿವಾಸ್. ಇಲ್ಲಿ ಸಿನಿಮಾಕ್ಕೆ ಸಂಬಂಧಿಸಿದಂತೆ 24 ವಿಭಾಗಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿಸಲಾಗುತ್ತದೆ. ಕಥೆಯ ಚರ್ಚೆ ಹೇಗೆ ನಡೆಯುತ್ತದೆ, ಕಥೆ ಹೇಗೆ ಕಟ್ಟಬೇಕು, ಚಿತ್ರಕಥೆ ಮಾಡುವುದು ಹೇಗೆ ಎಂಬಲ್ಲಿಂದ ಹಿಡಿದು, ಸಿನಿಮಾ ಮಾರುಕಟ್ಟೆಗೆ ತರುವವರೆಗೂ ಹೇಳಿಕೊಡಲಾಗುತ್ತದೆ.
ಅದರಲ್ಲಿ ಪೋಸ್ಟರ್ ಹಚ್ಚುವವನಿಂದ ಹಿಡಿದು, ಎಲ್ಲಾ ವಿಭಾಗ ಬಗ್ಗೆಯೂ ಪಾಠ ಮತ್ತು ಪ್ರಯೋಗ ಕುರಿತು ಹೇಳಲಾಗುತ್ತದೆ. ಶಾಲೆಗೆ ಎಲ್ಲಾ ವಿಭಾಗದ ನುರಿತರನ್ನು ಆಹ್ವಾನಿಸಿ, ವಿದ್ಯಾರ್ಥಿಗಳಿಗೆ ಅವರಿಂದ ಪಾಠ ಮಾಡಿಸಲಾಗುತ್ತದೆ. ಅದು ಸ್ಟಂಟ್ ಮಾಸ್ಟರ್, ಗೀತಸಾಹಿತಿಗಳು, ಕಾಸ್ಟೂéಮ್ ಡಿಸೈನರ್, ಕಲಾನಿರ್ದೇಶನ ಸೇರಿದಂತೆ ಇತರೆ ವಿಭಾಗಗಳ ಕುರಿತು ಅಲ್ಲಿ ಹೇಳಿಕೊಡಲಾಗುತ್ತದೆ. ಒಬ್ಬ ನಟನಾಗುವವನಿಗೆ ಏನೆಲ್ಲಾ ಅರ್ಹತೆಗಳಿರಬೇಕು.
ಕೇವಲ ದೇಹ ಸೌಂದರ್ಯ ಇದ್ದ ಮಾತ್ರಕ್ಕೆ ಹೀರೋ ಆಗೋಕೆ ಸಾಧ್ಯವಿಲ್ಲ. ಆದರೆ, ಅಭಿನಯ ಹೇಗೆ ಕಲಿಯಬೇಕು. ಡೈಲಾಗ್ ಹೇಗೆ ಹೇಳಬೇಕು. ನವರಸವನ್ನು ಹೇಗೆಲ್ಲಾ ವ್ಯಕ್ತಪಡಿಸಬೇಕೆಂಬುದು ಶಾಲೆಯಲ್ಲಿ ಹೇಳಿಕೊಡಲಾಗುತ್ತದೆ. ಅದರೊಂದಿಗೆ ಹೀರೋ ಆಗುವವರಿಗೆ ವಾಯ್ಸ ಡಬ್ಬಿಂಗ್ ಮಾಡುವುದು ಹೇಗೆ, ನಟರು ಹೇಗೆಲ್ಲಾ ನಟನೆ ಮಾಡ್ತಾರೆ, ಡಬ್ಬಿಂಗ್ ಮಾಡ್ತಾರೆ ಎಂಬುದನ್ನು ತಿಳಿದುಕೊಳ್ಳಲು ಸ್ಟುಡಿಯೋ ಭೇಟಿ ಕೂಡ ಮಾಡಲಾಗುತ್ತದೆ ಎಂದು ಸಂಸ್ಥೆಯ ಬಗ್ಗೆ ವಿವರ ನೀಡಿದರು.
ಆರು ತಿಂಗಳ ಅವಧಿಯ ಕೋರ್ಸ್‌ಗೆ 20 ಹುಡುಗಿಯರು ಸೇರಿದಂತೆ 110 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಪ್ರತಿಭಾವಂತ ವಿದ್ಯಾರ್ಥಿಗಳಿಂದ ಕತೆ, ಸಾಹಿತ್ಯ, ಚಿತ್ರಕತೆಯನ್ನು ಬರೆಸಿ ಅವರಿಂದಲೇ ಕಿರುಚಿತ್ರವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಡುವ ಉದ್ದೇಶವೂ ಇದೆಯಂತೆ. ಸಂಸ್ಥೆಯ ಪ್ರಾಂಶುಪಾಲರಾಗಿ ನಿರ್ದೇಶಕ ಎಸ್.ನಾರಾಯಣ್ ಹಾಗೂ ಪ್ರಧಾನ ನಿರ್ದೇಶಕರಾಗಿ ಎಸ್.ಮಹೇಂದರ್ ಇದ್ದಾರೆ.