ಗಂಗಾವತಿ: ತುಂಗಭದ್ರಾ ಡ್ಯಾಂನಲ್ಲಿ ಹೂಳಿನ ಪರಿಣಾಮ ಮಳೆಗಾಲದಲ್ಲಿ ನೀರು ನದಿ ಮೂಲಕ ಆಂಧ್ರ ಪ್ರದೇಶ ಮತ್ತು ಸಮುದ್ರ ಸೇರುವುದನ್ನು ತಡೆಯಲು ನವಲಿ ಹತ್ತಿರ ಸಮಾನಾಂತರ ಡ್ಯಾಂ ನಿರ್ಮಾಣಕ್ಕೆ ರಾಜ್ಯ ಸರಕಾರ ಪೂರ್ವಸಿದ್ಧತೆ ನಡೆಸಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ಜಲಸಂಪನ್ಮೂಲ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆದಿರುವುದರಿಂದ ನವಲಿ ಡ್ಯಾಂ ನಿರ್ಮಾಣದ ಕನಸು ಮತ್ತೂಮ್ಮೆ ಚಿಗುರೊಡೆದಿದೆ.
ತುಂಗಭದ್ರಾ ಡ್ಯಾಂ ನಿರ್ಮಾಣಕ್ಕೆ ಇಲ್ಲಿಂದ ಸ್ಪರ್ಧೆ ಮಾಡುವ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಪ್ರಣಾಳಿಕೆಯ ವಿಷಯವಾಗುತ್ತಿದ್ದು, ರಾಜ್ಯ ಬಿಜೆಪಿ ಸರಕಾರ ತನ್ನ ಬಜೆಟ್‌ನಲ್ಲಿ ನವಲಿ ಡ್ಯಾಂ ನಿರ್ಮಾಣ ಮಾಡುವ ಕುರಿತು ಪ್ರಸ್ತಾಪ ಮಾಡಿ ಕಳೆದ ವರ್ಷ ವಿಸ್ತೃತ ವರದಿ(ಡಿಪಿಆರ್) ಮಾಡಲು 14 ಕೋಟಿ ರೂ. ಮೀಸಲಿರಿಸಿ ವರದಿ ಸಿದ್ಧಪಡಿಸಿದೆ. ಡ್ಯಾಂ ಹಿಂಭಾಗದಿಂದ ಕೊಪ್ಪಳ ತಾಲೂಕಿನ ಬಗನಾಳ ಗ್ರಾಮದಿಂದ ನವಲಿವರೆಗೆ 22 ಸಾವಿರ ಕ್ಯೂಸೆಕ್ಸ್ ನೀರು ಹರಿಯುವಷ್ಟು ಗಾತ್ರದ ಕಾಲುವೆ ನಿರ್ಮಾಣ ಹಾಗೂ 25 ಸಾವಿರ ಎಕರೆ ಪ್ರದೇಶದಷ್ಟು ರೈತರ ಭೂಮಿ ಸ್ವಾಧೀನ ಮಾಡಿಕೊಂಡು 34 ಟಿಎಂಸಿ ಅಡಿಯಷ್ಟು ನೀರನ್ನು ಮಳೆಗಾಲದ ಸಂದರ್ಭದಲ್ಲಿ ಸಂಗ್ರಹ ಮಾಡಿ ಬೇಸಿಗೆ ಹಂಗಾಮಿನಲ್ಲಿ ಕೊನೆಯ ಭಾಗದ ರೈತರಿಗೆ ಹರಿಸುವ ಯೋಜನೆ ಹಾಗೂ ಮುಳುಗಡೆಯಾಗುವ 15 ಹಳ್ಳಿಗಳ ಪುನರ್ ವಸತಿ ಮನೆ ಮಠ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡುವ ವಿಸ್ತೃತ ವರದಿಯನ್ನು ತಯಾರಿಸಲಾಗಿದೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಸಂದರ್ಭದಲ್ಲಿ ಬೇಸಿಗೆ ಹಂಗಾಮಿನಲ್ಲಿ ಡ್ಯಾಂನಲ್ಲಿ ನೀರಿನ ಕೊರತೆಯುಂಟಾಗಿ ಅಚ್ಚುಕಟ್ಟು ಪ್ರದೇಶದ ಬೆಳೆ ನಾಶವಾಗುವುದನ್ನು ತಡೆಯಲು ನವಲಿ ಡ್ಯಾಂ ಹತ್ತಿರ ಸಮಾನಾಂತರ ಡ್ಯಾಂ ನಿರ್ಮಿಸಿ ಮಳೆಗಾಲದಲ್ಲಿ ಸುಮಾರು 34 ಟಿಎಂಸಿ ಅಡಿಯಷ್ಟು ನೀರನ್ನು ಸಂಗ್ರಹಿಸಿ ಕಾರಟಗಿಯಿಂದ ಕೆಳಗಿನ ಭೂಮಿ ಮತ್ತು ರಾಯಚೂರು ಭಾಗದ ಭೂಮಿಗೆ ನೀರನ್ನೊದಗಿಸಲು ಯೋಜನೆ ರೂಪಿಸಲಾಗಿದೆ. ನವಲಿ ಡ್ಯಾಂ ನಿರ್ಮಾಣ ಯೋಜನೆ ಅಂತರರಾಜ್ಯ ಯೋಜನೆಯಾಗಿದ್ದು, ಈಗಾಗಲೇ ಹಲವು ಸುತ್ತಿನ ಅಧಿಕಾರಿಗಳ ಮಾತುಕತೆ ನಡೆದಿದ್ದು, ಅ. 28 ರಂದು ಹೈದ್ರಾಬಾದ್‌ನಲ್ಲಿ ಮೂರು ರಾಜ್ಯಗಳ ಜಲಸಂಪನ್ಮೂಲ ಮತ್ತು ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಭೆ ಆಯೋಜಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಅವಧಿಯಲ್ಲೇ ಪ್ರಧಾನಿ ನರೇಂದ್ರ ಮೋದಿಯವರಿಂದ ನವಲಿ ಡ್ಯಾಂ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಕುರಿತು ಆಸಕ್ತಿ ಹೊಂದಿದ್ದಾರೆ. ರಾಜ್ಯದ ಜಲಸಂಪನ್ಮೂಲ ಇಲಾಖೆ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ನಿರಂತರ ಸಭೆ ನಡೆಸಿ ಯೋಜನೆಗೆ ಒಪ್ಪಿಗೆ ಪಡೆಯುವಂತೆ ಸೂಚನೆ ನೀಡಿದ್ದರಿಂದ ಅ ಧಿಕಾರಿಗಳ ಮಟ್ಟದ ಸಭೆ ಆಯೋಜಿಸಲಾಗಿದೆ.
ನವಲಿ ಹತ್ತಿರ ಸಮಾನಾಂತರ ಡ್ಯಾಂ ನಿರ್ಮಾಣ ಮಾಡುವ ಯೋಜನೆಯ ಪ್ರಕ್ರಿಯೆ ನಿರಂತರವಾಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಆಂಧ್ರ, ತೆಲಗಾಂಣ ಮತ್ತು ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ಅಧಿ ಕಾರಿಗಳು ನವಲಿ ಡ್ಯಾಂ ನಿರ್ಮಾಣದ ಸಾಧಕ-ಬಾಧಕ ಕುರಿತು ವ್ಯಾಪಕ ಚರ್ಚೆ ನಡೆಸಿದ್ದಾರೆ. ಮುಂದಿನ ಅ. 28ರಂದು ಆಂಧ್ರಪ್ರದೇಶದಲ್ಲಿ ಮೂರು ರಾಜ್ಯಗಳ ಅಧಿಕಾರಿಗಳ ಸಭೆ ನಿರ್ಣಾಯಕವಾಗಿದ್ದು, ಯೋಜನೆಗೆ ತಗಲುವ ವೆಚ್ಚ ಮತ್ತು ಇದನ್ನು ಭರಿಸುವ ಕುರಿತು ಮಾತುಕತೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವಲಿ ಡ್ಯಾಂ ನಿರ್ಮಾಣಕ್ಕೆ ಬಹಳ ಆಸಕ್ತಿ ವಹಿಸಿದ್ದು, ಪ್ರಧಾನಿ ಮೋದಿಯವರಿಂದ ಶಿಲಾನ್ಯಾಸ ಮಾಡಿಸುವ ಒಲವು ಹೊಂದಿದ್ದಾರೆ. ಈ ಯೋಜನೆಯಿಂದ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ. ಡ್ಯಾಂ ನಿರ್ಮಾಣಕ್ಕೆ ಹಣದ ಕೊರತೆಯಿಲ್ಲ. ವಿಪಕ್ಷದವರ ಟೀಕೆ ಸರಿಯಲ್ಲ. ರೈತರ ಹಿತದೃಷ್ಟಿಯಿಂದ ನವಲಿ ಡ್ಯಾಂ ನಿರ್ಮಾಣಕ್ಕೆ ಕೈ ಜೋಡಿಸಬೇಕು.
-ಬಸವರಾಜ ದಢೇಸುಗೂರು, ಕನಕಗಿರಿ ಶಾಸಕ
ಕೆ. ನಿಂಗಜ್ಜ