Advertisement

ಬೋನ್ಸಾಯ್‌ ಕೃಷಿಯಲ್ಲಿ ನವಗ್ರಹ ವನ

10:53 AM Jan 07, 2019 | |

ಕುಮಟಾ: ಇಂದಿನ ಆಧುನಿಕ ಯುಗದಲ್ಲಿ ವನ ಮಹೋತ್ಸವ ಎಂಬುದು ಪ್ರಚಾರದ ವಸ್ತುವಾಗಿದೆ. ಕಾಟಾಚಾರಕ್ಕೆ ಗಿಡಗಳನ್ನು ನೆಟ್ಟು, ಪೋಷಿಸದೆ ಅವುಗಳನ್ನು ಕಡಿಯುವವರ ಸಂಖ್ಯೆಯೇ ಹೆಚ್ಚಿರುವಾಗ ಅರಣ್ಯ ಬೆಳೆಸುವುದು ದೂರದ ಮಾತಾಗಿದೆ. ಆದರೆ ಪರಿಸರ ಪರ ಕಾಳಜಿ ಮೆರೆಯುತ್ತಿರುವ ತಾಲೂಕಿನ ಮೂರೂರು ನಿವೃತ್ತ ಆರ್‌ಎಫ್‌ಒ ಎಲ್‌.ಆರ್‌. ಹೆಗಡೆ ಬೋನ್ಸಾಯ್‌ ಪದ್ಧತಿ ಮೂಲಕ ಗಿಡ ಮರಗಳನ್ನು ಬೆಳೆಸಿ, ವಿದ್ಯಾರ್ಥಿಗಳಲ್ಲಿ ಬೋನ್ಸಾಯ್‌ ಕೃಷಿ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

Advertisement

ಪಟ್ಟಣ ಬೆಳೆದಂತೆ ಸ್ಥಳಾವಕಾಶದ ಕೊರತೆಯಿಂದ ಗಿಡಮರಗಳನ್ನು ಬೆಳೆಸುವವರ ಸಂಖ್ಯೆ ಕಡಿಮೆಯಾಗಿದೆ. ಲಭ್ಯ ಸ್ಥಳಾವಕಾಶದಲ್ಲೆ ಬೃಹದಾಕಾರವಾಗಿ ಬೆಳೆಯುವ ಮರಗಳನ್ನು ಕುಬ್ಜವಾಗಿ ಬೆಳೆಸಬಹುದು. ಇದರಿಂದ ಶುದ್ಧ ಆಮ್ಲಜನಕ ಪಡೆಯುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಿಕೊಳ್ಳಬಹುದಾಗಿದೆ. ಅಂತಹ ಬೋನ್ಸಾಯ್‌ ಪದ್ಧತಿಯಲ್ಲಿ ಆಸಕ್ತಿ ಹೊಂದಿರುವ ನಿವೃತ್ತ ವಲಯ ಅರಣ್ಯಾಧಿಕಾರಿ ಎಲ್‌.ಆರ್‌ ಹೆಗಡೆ ಅವರು ಈ ಬೋನ್ಸಾಯ್‌ ಕೃಷಿಯ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅವರು ತಮ್ಮ ಮನೆಯ ಆವಾರದ ಚಿಕ್ಕ ನೆರಳು ಪರದೆಯಲ್ಲಿ ಸುಮಾರು 27 ಪ್ರಭೇದದ 217 ಗಿಡಗಳನ್ನು ಬೆಳೆಸಿದ್ದಾರೆ. ಅದರಲ್ಲಿ ನವಗ್ರಹ ವನ ವಿಶೇಷವಾಗಿದೆ.

ನೂರಾರು ವರ್ಷ ಬದುಕುವ ಹಾಗೂ ಬೃಹದಾಕಾರವಾಗಿ ಬೆಳೆಯುವ ಆಲ, ಅರಳಿ, ಅತ್ತಿ ಮರಗಳನ್ನು ಕುಬ್ಜವಾಗಿ ಬೆಳೆಸಿದ್ದಾರೆ. ಈ ವನವನ್ನು ದೇವಸ್ಥಾನಗಳಲ್ಲಿ ನಿರ್ಮಿಸುವ ಮೂಲಕ ಭಕ್ತರ ಧಾರ್ಮಿಕ ಭಾವನೆಗೆ ಪೂರಕ ವಾತಾವರಣ ಕಲ್ಪಿಸಲು ಸಾಧ್ಯ. ಇನ್ನು ಮನೆಯ ಸುತ್ತಮುತ್ತಲೂ ಬೆಳೆಯುವ ಯಾವುದೇ ಜಾತಿಯ ಗಿಡಗಳನ್ನು ಬೋನ್ಸಾಯ್‌ ಪದ್ಧತಿ ಮೂಲಕ ಅಲಂಕಾರಿಕವಾಗಿ ಬೆಳೆಸಬಹುದು. ಇದರಿಂದ ಮನೆಯ ಸೌಂದರ್ಯ ವೃದ್ಧಿಯಾಗುತ್ತದೆ. ಬಹುಮಳಿಗೆ ಕಟ್ಟಡಗಳಲ್ಲಿ ವಾಸಿಸುವವರು ಕೂಡ ತಮ್ಮ ಮನೆಯೊಳಗೆ ಅಥವಾ ಮೇಲ್ಛಾವಣಿ ಮೇಲೆ ಗಿಡಗಳನ್ನು ಬೆಳೆಸಬಹುದು. ಔಷಧ ಗಿಡಗಳನ್ನು ಬೆಳೆಸುವ ಮೂಲಕ ಮನೆಯಲ್ಲಿಯೇ ಚಿಕ್ಕಪುಟ್ಟ ಕಾಯಿಲೆಗಳಿಗೆ ಔಷಧ ಸಿದ್ಧಪಡಿಸಬಹುದಾಗಿದೆ.

ಅಲ್ಲದೇ ಹಣ್ಣು, ತರಕಾರಿ, ಹೂವು ಮತ್ತು ಬೆಲೆಬಾಳುವ ಶ್ರೀಗಂಧ ಸೇರಿದಂತೆ ಇತರೆ ಮರಗಳನ್ನು ಬೆಳೆಯಬಹುದಾಗಿದೆ. ಮರ ಕುಬ್ಜವಾಗಿದ್ದರೂ ಅದಕ್ಕೆ ಬೀಡುವ ಫಲ-ಪುಷ್ಪಗಳ ಬೆಳವಣಿಗೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದರಿಂದ ಸಾವಯವ ತರಕಾರಿ ಹಾಗೂ ಹಣ್ಣುಗಳನ್ನು ಮನೆಯಲ್ಲೆ ಬೆಳೆದುಕೊಳ್ಳುವ ಜತೆಗೆ ಆರೋಗ್ಯಕ್ಕೆ ಹಿತಕರವಾಗಿದೆ. ಅಲ್ಲದೆ ಬೆಲೆ ಬಾಳುವ ಮರಗಳನ್ನು ವಾಣಿಜ್ಯ ಉ¨್ದೇಶಕ್ಕಾಗಿ ಬೆಳೆಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದಾಗಿದೆ.

ಹಾಗಂತ ಎಲ್‌.ಆರ್‌. ಹೆಗಡೆ ಅವರು ಮಾತ್ರ ಆರ್ಥಿಕ ಮಟ್ಟ ಹೆಚ್ಚಿಸಲು ಈ ಕುಬ್ಜ ವೃಕ್ಷ ಪಾಲನಾಲಯ ನಿರ್ಮಿಸಿಲ್ಲ. ಇದು ಅವರ ಹವ್ಯಾಸದ ಒಂದು ಭಾಗ ಅಷ್ಟೆ. ಆದರೆ ಈ ಬಗೆಗೆ ಆಸಕ್ತಿ ಇದ್ದವರಿಗೆ ಮಾರ್ಗದರ್ಶನ ನೀಡುತ್ತಾರೆ.

Advertisement

ಈ ಬೋನ್ಸಾಯ್‌ ಪದ್ಧತಿಯಿಂದ ಅತೀ ಚಿಕ್ಕ ಜಾಗದಲ್ಲಿ ದೊಡ್ಡ ದೊಡ್ಡ ಪ್ರಮಾಣದ ಗಿಡಗಳನ್ನು ಬೆಳೆಸಬಹುದು. ಆ ನಿಟ್ಟಿನಲ್ಲಿ ಕುಬ್ಜ ವೃಕ್ಷ ಕಲಾನಿಕೇತನ ಬೋನ್ಸಾಯ್‌ ಕಲ್ಲಬ್ಬೆ ಎಂಬ ಟ್ರಸ್ಟ್‌ನ್ನು ನಿರ್ಮಿಸಿಕೊಂಡಿದ್ದೇವೆ. ಇದರಲ್ಲಿ ನೂರಕ್ಕಿಂತಲೂ ಹೆಚ್ಚು ವರ್ಷ ಬದುಕಬಲ್ಲ ಮರಗಳನ್ನು, ಕುಬ್ಜವಾಗಿ ಮಾರ್ಪಡಿಸಿಕೊಂಡು ಬೇಕಾದ ಸ್ಥಳಗಳಲ್ಲಿ ಬೆಳೆಸಬಹುದಾದ ಪದ್ಧತಿ ಹಾಗೂ ಅಂತಹ ಗಿಡಗಳ ಬಗ್ಗೆ ವಿವರಣೆಯನ್ನೂ ನೀಡುತ್ತೇವೆ. ಬೋನ್ಸಾಯ್‌ ಕೃಷಿ ಬಗ್ಗೆ ಆಸಕ್ತಿ ಹೊಂದಿದವರಿಗೆ ನಮ್ಮನ್ನು ಸಂಪರ್ಕಿಸಿದರೆ ಗಿಡಗಳನ್ನೂ ಸಹ ನೀಡುತ್ತೇವೆ. ದೂ.ಸಂ: 9480746716 – ಎಲ್‌.ಆರ್‌ ಹೆಗಡೆ, ನಿವೃತ್ತ ಆರ್‌ಎಫ್‌ಒ.

Advertisement

Udayavani is now on Telegram. Click here to join our channel and stay updated with the latest news.

Next