Advertisement

ನವರಾತ್ರಿ ಸಂಭ್ರಮ ಇಮ್ಮಡಿಗೊಳಿಸಿದ ನವರೂಪ: ಪ್ರವೀತಾ ಅಶೋಕ್‌

06:44 PM Oct 12, 2022 | Team Udayavani |

ಕುಂದಾಪುರ: ಉದಯವಾಣಿಯ ನವರೂಪವು ಮಹಿಳೆಯರ ನವರಾತ್ರಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಜನರ ಬದುಕನ್ನು ವರ್ಣಮಯಗೊಳಿಸುವಲ್ಲಿ, ಕ್ರಿಯಾಶೀಲರನ್ನಾಗಿಸುವಲ್ಲಿ ಈ ಹೊಸ ಪರಿಕಲ್ಪನೆ ಯಶಸ್ವಿಯಾಗಿದೆ. ಮೊದಲ ದಿನ 9 ಮಂದಿ ಮಹಿಳಾ ಸಾಧಕರನ್ನು ಗುರುತಿಸಿ, ಚಿತ್ರವನ್ನು ಪ್ರಕಟಿಸಿರುವುದು ಒಳ್ಳೆಯ ಕಲ್ಪನೆ ಎಂದು ಕುಂದಾಪುರದ ವಸಂತ ನಾಟ್ಯಾಲಯದ ನಿರ್ದೇಶಕಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪ್ರವೀತಾ ಅಶೋಕ್‌ ಹೇಳಿದರು.

Advertisement

ಅವರು ಕುಂದಾಪುರದ ಕಲಾಕ್ಷೇತ್ರ ಕಚೇರಿಯಲ್ಲಿ ಬುಧವಾರ ಉದಯವಾಣಿಯ ವತಿಯಿಂದ ಹಮ್ಮಿಕೊಂಡಿದ್ದ ನವರೂಪದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ, ಮಾತನಾಡಿದರು.

ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಕಿಶೋರ್‌ ಕುಮಾರ್‌ ಮಾತನಾಡಿ, ಸಮಾಜದಲ್ಲಿ ಶಾಂತಿ, ಸಾಮರಸ್ಯ ಉಳಿಬೇಕಾದರೆ ಅದು ಕಲಾ ಪ್ರಕಾರಗಳನ್ನು ಪ್ರೀತಿಸಿದಾಗ ಮಾತ್ರ ಸಾಧ್ಯ. ದೇಶದಲ್ಲಿ ಶಾಂತಿ, ಸಾಮರಸ್ಯ ಉಳಿದಿದೆ ಅಂದರೆ ಅದಕ್ಕೆ ಕಲೆಯೇ ಕಾರಣ. ಇದೊಂದು ಒಳ್ಳೆಯ ಕಾರ್ಯಕ್ರಮ. ಎಲ್ಲರನ್ನೂ ಭಾಗವನ್ನಾಗಿಸಿ ಮಾಡಿಕೊಂಡಿರುವ ಇದು ಅರ್ಥಪೂರ್ಣವಾದ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಹಾರೈಸಿದರು.

ಉದಯವಾಣಿ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ(ಮ್ಯಾಗಜಿನ್ಸ್‌ ಆ್ಯಂಡ್‌ ಸ್ಪೆಶಲ್‌ ಪ್ರಾಜೆಕ್ಟ್ಸ್) ರಾಮಚಂದ್ರ ಮಿಜಾರು ಸ್ವಾಗತಿಸಿ, ಪ್ರಸ್ತಾವನೆಗೈದು, ಉದಯವಾಣಿಯು ನವರೂಪ, ರೇಷ್ಮೆ ಜತೆ ದೀಪಾವಳಿ, ಯಶೋದಾ- ಕೃಷ್ಣಾ, ಚಿಣ್ಣರ ಬಣ್ಣ ಹೀಗೆ ವಿನೂತನ ಪರಿಕಲ್ಪನೆಗಳ ಮೂಲಕ ಓದುಗರೊಂದಿಗೆ ಹಬ್ಬಗಳನ್ನು ಸಂಭ್ರಮಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಬಾರಿಯ ನವರೂಪಕ್ಕೆ ಎಲ್ಲ ಕಡೆಗಳಿಂದಲೂ ನಿರೀಕ್ಷೆಗೂ ಮೀರಿ ಸಹಸ್ರಾರು ಸಂಖ್ಯೆಯಲ್ಲಿ ಫೋಟೋಗಳು ಬಂದಿವೆ. ಇದು ನವರೂಪಕ್ಕೆ ಓದುಗ ಸಮೂಹದಿಂದ ಸಿಕ್ಕ ಸ್ಪಂದನೆಗೆ ಸಾಕ್ಷಿ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಸಂಪಾದಕ ಅರವಿಂದ ನಾವಡ ಮಾತನಾಡಿ, ನಮ್ಮದು ಆಲೋಚನೆ ಮಾತ್ರ. ಆಕೃತಿ ನಿಮ್ಮದು ಅನ್ನುವಂತೆ ನಮ್ಮ ಈ ಪರಿಕಲ್ಪನೆಗೆ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಓದುಗರಿಂದ ವ್ಯಕ್ತವಾಗಿದೆ. ನವರೂಪಕ್ಕೆ ಕಳುಹಿಸಿದ ಚಿತ್ರಗಳ ಆಯ್ಕೆ, ಬಹುಮಾನಿತರ ಆರಿಸುವಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿದ್ದೇವೆ. ಹಿಂದಿನ ದಿನಗಳಂತೆ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದವರು ಹೇಳಿದರು.

ಬಹುಮಾನಿತರ ಪರವಾಗಿ ಮಯ್ಯಾಡಿಯ ಭಾಗ್ಯಲಕ್ಷ್ಮಿ ಮಾತನಾಡಿ, ಮಹಿಳೆಯರಿಗೆ ನವರೂಪವೊಂದು ಉತ್ತಮ ಅವಕಾಶವನ್ನು ಕಲ್ಪಿಸಿದೆ. ನವರೂಪವು ಅಕ್ಕ-ಪಕ್ಕದ ಮನೆಯವರೆಲ್ಲ ಒಟ್ಟು ಸೇರುವಂತೆ ಮಾಡಿದೆ ಎಂದರು.

ಬಹುಮಾನ ವಿಜೇತರು
ಸಹನಾ ಯುವತಿ ಮಂಡಲ ಗೋಪಾಡಿ, ಮಹಾಸತಿ ಸದಸ್ಯರು ಮಯ್ಯಾಡಿ, ಗಾಯತ್ರಿ ಮತ್ತು ಬಳಗ ತಲ್ಲೂರು, ಆರ್‌. ಪೂರ್ಣಿಮಾ ಮತ್ತು ಗೆಳತಿಯರು ನಾವುಂದ ಅವರಿಗೆ ಬಹುಮಾನಗಳನ್ನು ಪ್ರದಾನ ಮಾಡಲಾಯಿತು.

ಕಲಾವಿದರ ಪತ್ರಿಕೆ
ಉದಯವಾಣಿಯು ತಮ್ಮ ಓದುಗರಿಗೆ ಹೊಸ ಹೊಸ ಪರಿಕಲ್ಪನೆಯ ಮೂಲಕ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮುಂಚೂಣಿಯಲ್ಲಿದೆ. ಯಶೋದಾ – ಕೃಷ್ಣ, ಮಕ್ಕಳ ಚಿತ್ರ ಸ್ಪರ್ಧೆ, ನವರೂಪ ಹೀಗೆ ಹತ್ತಾರು ಹೊಸ ಕಾರ್ಯಕ್ರಮಗಳನ್ನು ಓದುಗರಿಗೆ ನೀಡುತ್ತಿದೆ. ಅಷ್ಟೇ ಉತ್ತಮವಾಗಿ ಓದುಗರು ಸಹ ಸ್ಪಂದಿಸುತ್ತಿರುವುದು ಬಹಳ ಮುಖ್ಯ. ಉದಯವಾಣಿಯು ಇಂತಹ ಒಳ್ಳೊಳ್ಳೆಯ ಪರಿಕಲ್ಪನೆಯೊಂದಿಗೆ ಓದುಗರನ್ನು ಇನ್ನಷ್ಟು ಆಕರ್ಷಿಸಲಿ. ಈ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದ ಅವರು, ಉದಯವಾಣಿಯು ಕಲಾವಿದರ ಪತ್ರಿಕೆ. ಕಲೆ, ಸಂಸ್ಕೃತಿಗೆ ಹೆಚ್ಚಿನ ಒತ್ತು ಕೊಡುತ್ತಿದೆ ಎಂದು ಪ್ರವೀತಾ ಅಶೋಕ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಉದಯವಾಣಿ ಉಪ ಮುಖ್ಯ ವರದಿಗಾರ ಲಕ್ಷ್ಮೀ ಮಚ್ಚಿನ ಕಾರ್ಯಕ್ರಮ ನಿರೂಪಿಸಿ, ವರದಿಗಾರ ಪ್ರಶಾಂತ್‌ ಪಾದೆ ವಂದಿಸಿದರು. ಮಾರುಕಟ್ಟೆ ವಿಭಾಗದ ಸೀನಿಯರ್‌ ಎಕ್ಸಿಕ್ಯೂಟಿವ್‌ ಕೃಷ್ಣಮೂರ್ತಿ ಹೊಳ್ಳ, ಎಕ್ಸಿಕ್ಯೂಟಿವ್‌ ಹರೀಶ್‌ ಜಾಲಾಡಿ, ಪ್ರಸರಣ ವಿಭಾಗದ ಎಕ್ಸಿಕ್ಯೂಟಿವ್‌ ವಿಶ್ವನಾಥ್‌ ಬೆಳ್ವೆ ಸಹಕರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next