ಆಲೂರು: ಆಯುಧ ಪೂಜೆ ಅಂಗವಾಗಿ ಪಟ್ಟಣದಲ್ಲಿ ಹೂ, ಕುಂಬಳಕಾಯಿ, ತರಕಾರಿ ಅಧಿಕವಾಗಿ ಸಂಗ್ರಹವಾಗಿತ್ತು. ನಾಟಿ ಕೋಳಿ ದರ ಕುಸಿದಿತ್ತು. ರೈತರು ಜೋಳ, ಶುಂಟಿ ಬೆಳೆಯಲ್ಲಿ ಕೈ ಸುಟ್ಟುಕೊಂಡಿರುವುದರಿಂದ, ವಾರದ ಹಬ್ಬದ ಸಂತೆಯಲ್ಲಿ ಮಾರಾಟಗಾರರು ಅಧಿಕವಾಗಿದ್ದರೂ, ಕೊಳ್ಳುವವರ ಸಂಖ್ಯೆ ಕಡಿಮೆಯಾಗಿತ್ತು.
ಸಾಮಾನ್ಯವಾಗಿ ಪ್ರತಿ ವಾರ ಹಳ್ಳಿಗಳಿಂದ ನಾಟಿ ಕೋಳಿಗಳನ್ನು ಮಾರಾಟಕ್ಕೆ ತರುತ್ತಾರೆ. ಕೇವಲ ಒಂದೆರಡು ಗಂಟೆಗಳಲ್ಲಿ ವಹಿವಾಟು ಮುಗಿಯುತ್ತದೆ. ಹಬ್ಬದ ಸಂದರ್ಭದಲ್ಲಿ ನಾಟಿ ಕೋಳಿಗಳಿಗೆ ಬೇಡಿಕೆ ಹೆಚ್ಚಾಗಬಹುದೆಂದು ಮಾರಾಟಕ್ಕೆ ಬಂದಿದ್ದ ವರ್ತಕರಿಗೆ ಆಘಾತ ಕಾದಿತ್ತು. ನೂರಾರು ಕೋಳಿಗಳು ಸಂತೆಯಲ್ಲಿಯೇ ಇದ್ದು ಯಾರೂ ಕೊಳ್ಳುವವರಿಲ್ಲದಂತಾಗಿತ್ತು. ಒಂದು ಕೆ.ಜಿ. ತೂಕದ ಕೋಳಿ ಕೇವಲ 250-300 ರೂ. ಗಳಿಗೆ ಮಾರಾಟವಾಯಿತು.
ಇದನ್ನೂ ಓದಿ;- ಗಂಗಾವತಿ : ವೈಭವದಿಂದ ಜರುಗಿದ ಹೇಮಗುಡ್ಡದ ಅಂಬಾರಿ ಮೆರವಣಿಗೆ
ಬಹುತೇಕ ಮಾಂಸಹಾರಿಗಳು ಫಾರಂ, ಬ್ರಾಯ್ಲರ್ ಕೋಳಿಗಳನ್ನು ಉಪಯೋಗಿಸುವ ಕಾರಣ ನಾಟಿ ಕೋಳಿಗಳ ದರ ಕುಸಿದಿದೆ ಎನ್ನಲಾಗಿದೆ. ತರಕಾರಿ ಬೆಲೆ ದುಬಾರಿ: ತರಕಾರಿ ಬೆಲೆ ಬಲು ದುಬಾರಿಯಾಗಿತ್ತು. ಟೊಮಟೊ ಒಂದು ಕೆ.ಜಿ.ಗೆ 50-60 ರೂ., ಸೇವಂತಿಗೆ ಹೂ 60-100 ರೂ., ಕುಂಬಳಕಾಯಿ 50-100 ರೂ. ವರೆಗೂ ಮಾರಾಟವಾಯಿತು. ಸೇವಂತಿಗೆ ಹೂ, ಕುಂಬಳಕಾಯಿ ಅಧಿಕವಾಗಿ ಮಾರುಕಟ್ಟೆಗೆ ಬಂದಿದೆ.
ಕೈಯಲ್ಲಿ ಹಣವಿಲ್ಲದ ಕಾರಣ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಉಳಿದ ಕುಂಬಳಕಾಯಿಯನ್ನು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಕಳುಹಿಸಬೇಕಾಗುತ್ತದೆ ಎಂದು ಮಾರಾಟಗಾರ ಗಾಂಧಿ ತಿಳಿಸಿದರು. ಒಂದೂವರೆ ಕೆ.ಜಿ. ತೂಕದ ಹತ್ತು ಕೋಳಿಗಳನ್ನು ಸುಮಾರು ಮೂರು ತಿಂಗಳಿನಿಂದ ಸಾಕಿ ಮಾರಾಟಕ್ಕೆ ತಂದಿದ್ದರು. ಕನಿಷ್ಠ 8-9 ಸಾವಿರ ರೂ. ಸಿಗಬಹುದು. ಖುಷಿಯಾಗಿ ಹಬ್ಬ ಆಚರಿಸೋಣ ಎಂದಿದ್ದಾರೆ. ಆದರೆ ಬೆಲೆ ಕುಸಿದ ಕಾರಣ ಕೇವಲ 5 ಸಾವಿರ ರೂ. ದೊರಕಿತು.
-ಯಶೋಧಮ್ಮ, ಕಿರಳ್ಳಿ ಗ್ರಾಮದ ನಿವಾಸಿ