Advertisement

ಜೀವನ ಶೈಲಿ ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ಕಲುಷಿತ

02:10 PM Mar 15, 2022 | Team Udayavani |

ಜಮಖಂಡಿ: ಪ್ರಕೃತಿ ಭೂಮಿ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗೂ ಶುಭ್ರ, ಹೇರಳವಾದ ಸಂಪನ್ಮೂಲ ನೀಡಿದೆ. ಆದರೆ ಇಂದಿನ ಮನುಷ್ಯನ ಜೀವನಶೈಲಿ, ಅಭಿವೃದ್ಧಿ ಹೆಸರಿನಲ್ಲಿ ಪ್ರಾಕೃತಿಕ ಸಂಪನ್ಮೂಲಗಳಾದ ಭೂಮಿ, ಗಾಳಿ, ನೀರು ಕಲುಷಿತವಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಪಿ.ಪುರುಷೋತ್ತಮ ಹೇಳಿದರು.

Advertisement

ತಾಲೂಕಿನ ತುಂಗಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಹೊಸಕೆರೆ ಹೂಳೆತ್ತುವ ಸಮಾರಂಭದಲ್ಲಿ ಮಾತನಾಡಿದರು.

ಪೂರ್ವಜರು ನಮಗೋಸ್ಕರ ನೀರಿಗಾಗಿ ಕೆರೆಗಳ ರಚನೆ ಮಾಡಿದ್ದು ರಾಜ್ಯದಲ್ಲಿ 36 ಸಾವಿರಕ್ಕೂ ಹೆಚ್ಚು ಕೆರೆಗಳಿವೆ. ಅವುಗಳ ನಿರ್ವಹಣೆ ಆಗದೆ ಹಿನ್ನೆಲೆಯಲ್ಲಿ ಹೆಚ್ಚಿನ ಕೆರೆಗಳಿಗೆ ಮಳೆಗಾಲದಲ್ಲಿ ನೀರಿನ ಶೇಖರಣೆ ಪ್ರಮಾಣ ಕಡಿಮೆ ಆಗುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿಗಳು ಗ್ರಾಮಸ್ಥರ ಸಹಕಾರದಿಂದ ಹಾಗೂ ಸ್ಥಳೀಯ ಆಡಳಿತ ಕಚೇರಿ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ ಕೆರೆ ಎಂಬ ಕಾರ್ಯಕ್ರಮದಡಿಯಲ್ಲಿ ಕೆರೆಯ ಹೂಳು ತೆಗೆಯಲು ಕಾರ್ಯಕ್ರಮ ನಡೆಸುತ್ತಿದೆ. ಈಗಾಗಲೆ ರಾಜ್ಯದಲ್ಲಿ 429 ಕೆರೆಗಳ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದ್ದು, ತುಂಗಳ ಕೆರೆ 430ನೇ ಕೆರೆಯ ಅಭಿವೃದ್ಧಿಗೆ 7.30 ಲಕ್ಷ ಸಹಾಯಧನ ನೀಡಲಾಗಿದೆ ಎಂದರು.

ಅಂತರ್ಜಲ ಅಭಿವೃದ್ಧಿಗೆ ಮುಂದಿನ 10 ವರ್ಷಗಳಲ್ಲಿ 3 ಸಾವಿರ ಕೆರೆಗಳ ಹೂಳೆತ್ತುವ ಗುರಿ ಹೊಂದಲಾಗಿದೆ. 430ನೇ ಕೆರೆ ಹೂಳೆತ್ತುವ ಕಾರ್ಯಕ್ರಮವನ್ನು ತುಂಗಳ ಹೊಸ ಕೆರೆಗೆ ಚಾಲನೆ ನೀಡಲಾಗಿದೆ. ಕೆರೆ ಹೂಳು ತೆಗೆಯುವುದರಿಂದ ಅಂತರ್ಜಲ ಹೆಚ್ಚುವುದರೊಂದಿಗೆ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ನೆರವು ಆಗಲಿದೆ. ಮುಂದಿನ 10 ವರ್ಷದಲ್ಲಿ 30 ಸಾವಿರ ಕೆರೆಯಲ್ಲಿ ಹೂಳು ತೆಗೆಯುವ ಗುರಿ ಹೊಂದಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಆರೋಗ್ಯರಕ್ಷಾ ಕಾರ್ಯಕ್ರಮದಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ಸದಸ್ಯರಾದ ರತ್ನವ್ವ ಜಾಧವ, ಯಶೋಧ ಮಾಳಿ ಅವರಿಗೆ ಆರೋಗ್ಯ ರಕ್ಷಾ ಸೌಲಭ್ಯದಡಿಯಲ್ಲಿ ಮಂಜೂರಾದ ಪರಿಹಾರ ಚೆಕ್‌ ವಿತರಿಸಲಾಯಿತು.

Advertisement

ಗ್ರಾಪಂ ಅಧ್ಯಕ್ಷ ಅನುಸೂಯಾ ಬಸಗೊಂಡ ಖನಾಳ ಮಾತನಾಡಿದರು. ವೇದಿಕೆಯಲ್ಲಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಪ್ಪ ಗೋಲಬಾವಿ, ಜಿಲ್ಲಾ ನಿರ್ದೇಶಕ ಎಂ.ಮಹೇಶ, ಗ್ರಾ.ಪಂ. ಉಪಾಧ್ಯಕ್ಷ ಸದಾಶಿವ ಹೊನವಾಡ, ತಾಪಂ ಮಾಜಿ ಸದಸ್ಯ ಸದಾಶಿವ ಶೇಗುಣಸಿ, ಸಮಿತಿ ಉಪಾಧ್ಯಕ್ಷ ಶವರುದ್ರಕಣಾಳ, ಗ್ರಾಪಂ ಸದಸ್ಯ ವಸಂತ ಗ್ರಾಮಸ್ಥರ ಒಕ್ಕೂಟದ ಅಧ್ಯಕ್ಷ ಮಹಾದೇವಿ ತೋರದರ, ವಲಯ ಸೇವಾ ಪ್ರತಿನಿಧಿಗಳು, ಕೃಷಿ ಮೇಲ್ವಿಚಾರಕರು ಇದ್ದರು.

ಯೋಜನಾಧಿಕಾರಿ ಬಿ.ಬಾಲಕೃಷ್ಣ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಪರಶುರಾಮ ನಿರೂಪಿಸಿದರು. ಸೇವಾ ಪ್ರತಿನಿಧಿ ಸಚಿನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next