Advertisement

ಪ್ರಕೃತಿ ವಿಕೋಪ: ಪ್ರತ್ಯೇಕ ಯೋಜನೆಗೆ ಚಿಂತನೆ

06:05 AM Aug 24, 2018 | Team Udayavani |

ಬಾಗಲಕೋಟೆ: ಕೊಡಗು ಜಿಲ್ಲೆಯಲ್ಲಿ ಮಹಾ ಮಳೆಯಿಂದ ಹಲವರು ಸಾವನ್ನಪ್ಪಿದ್ದಾರೆ. ಅವರ ಕುಟುಂಬಗಳಿಗೆ ಪರಿಹಾರ ಕೊಡುವ ಜತೆಗೆ ಪುನರ್‌ ವಸತಿ ಕಲ್ಪಿಸುವ ದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದೆ. ಸರ್ಕಾರದ ನಿಯಮಾವಳಿ ಪ್ರಕಾರ, ಪ್ರಕೃತಿ ವಿಕೋಪ ಸಂಭವಿಸಿದಾಗ ಕೇವಲ ಪರಿಹಾರಧನ ಕೊಡಲು ಮಾತ್ರ ಅವಕಾಶವಿದೆ. ಹೀಗಾಗಿ ರೈತ ಆತ್ಮಹತ್ಯೆ ಪ್ರಕರಣದಲ್ಲಿ ನೀಡುವ ಪರಿಹಾರ ಮಾದರಿಯಲ್ಲೇ ವಿಪತ್ತು ಸಂಭವಿಸಿದಾಗ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಒದಗಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

Advertisement

ಕಂದಾಯ ಇಲಾಖೆ ಅಧೀನದಲ್ಲಿ ಇರುವ ವಿಪತ್ತು ನಿರ್ವಹಣೆ ಕೋಶದಡಿ ಸದ್ಯ ಮಹಾ ಮಳೆ, ಸಿಡಿಲು ಬಡಿದು ಅಥವಾ ಇನ್ಯಾವುದೇ ರೀತಿಯ ಪ್ರಕೃತಿ ವಿಕೋಪದಿಂದ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲು ಮಾತ್ರ ಅವಕಾಶವಿದೆ. ಈ ಪರಿಹಾರ ಧನ ಬಿಟ್ಟರೆ ಬೇರ್ಯಾವ ಸೌಲಭ್ಯಗಳನ್ನೂ ಸರ್ಕಾರದಿಂದ ನೀಡಲು ಅವಕಾಶವಿಲ್ಲ. ಹೀಗಾಗಿ ವಿಪತ್ತು ನಿರ್ವಹಣೆ ಕೋಶದ ನಿಯಮಗಳ ಬದಲಾವಣೆ ಅಥವಾ ಪ್ರತ್ಯೇಕ ಯೋಜನೆ ರೂಪಿಸಲು ಸರ್ಕಾರ ಮುಂದಾಗಿದೆ.

ಹೊಸ ನಿಯಮ ಏನು?: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ, ಆ ಕುಟುಂಬ ಸ್ವಂತ ಮನೆ ಹೊಂದಿರದಿದ್ದರೆ ಮನೆ, ಮಾಸಿಕ 2 ಸಾವಿರ ಮಾಸಾಶನ, ಸುವರ್ಣ ಆರೋಗ್ಯ ಟ್ರಸ್ಟ್‌ನಿಂದ ಉಚಿತ ಆರೋಗ್ಯ ಸೇವೆಗೆ ಗುರುತಿನ ಚೀಟಿ, ಅವರ ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ ಸಂಪೂರ್ಣ ಉಚಿತ ಶಿಕ್ಷಣ ಕೊಡುವ ಕುರಿತು ನಿಯಮಾವಳಿಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ.

ಯೋಚನೆ ಹುಟ್ಟಿದ್ದು ಬಾಗಲಕೋಟೆಯಲ್ಲಿ
ಈ ಹೊಸ ಯೋಜನೆ ಹೊಳೆದದ್ದು ಬಾಗಲಕೋಟೆಯಲ್ಲಿ. ಸ್ವತಃ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು, ಬರ ಪರಿಹಾರ ಹಾಗೂ ಹಾನಿ ಕುರಿತ ಸಭೆ ನಡೆಸುತ್ತಿದ್ದ ವೇಳೆ ಹೊಸದಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಏನಾದರೂ ಸಲಹೆಗಳಿದ್ದರೆ ಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಈ ವೇಳೆ ಬಾಗಲಕೋಟೆಯ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಈ ಪ್ರಸ್ತಾಪವನ್ನಿಟ್ಟರು. ಇದೊಂದು ಅತ್ಯುತ್ತಮ ವಿಚಾರ, ಕೂಡಲೇ ರಾಜ್ಯಾದ್ಯಂತ ಜಾರಿಗೊಳಿಸುವ ಕುರಿತು ಗಂಭೀರವಾಗಿ ಪರಿಗಣಿಸಲಾಗುತ್ತದೆ. ತಕ್ಷಣ ಅದಕ್ಕೊಂದು ಪ್ರಸ್ತಾವನೆ ಸಿದ್ಧಪಡಿಸಿ ಕಳುಹಿಸಿ ಎಂದು ಸಚಿವರು ತಿಳಿಸಿದ್ದರು. ಹೀಗಾಗಿ ಅಧಿಕಾರಿಗಳು ಪ್ರಸ್ತಾವನೆ ಸಿದ್ಧಪಡಿಸಿ ರಾಜ್ಯ ವಿಪತ್ತು ನಿರ್ವಹಣೆ ಕೋಶಕ್ಕೆ ಕಳುಹಿಸಿದ್ದಾರೆ.

ಬಾಗಲಕೋಟೆಯ ಸಭೆಯಲ್ಲಿ ಅಧಿಕಾರಿಯೊಬ್ಬರು ಉತ್ತಮ ಸಲಹೆ ಕೊಟ್ಟಿದ್ದಾರೆ. ರಾಜ್ಯ ವಿಪತ್ತು ನಿರ್ವಹಣೆ ಕೋಶದ ಅಧ್ಯಕ್ಷ ನಾನೇ ಇರುವುದರಿಂದ ಈ ಕುರಿತು ಸಿಎಂ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಆರ್‌.ವಿ. ದೇಶಪಾಂಡೆ, ಕಂದಾಯ ಸಚಿವ

Advertisement

ರೈತ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ನೀಡುವ ಪರಿಹಾರ ಧನ ಮಾದರಿಯಲ್ಲಿ ಪ್ರಕೃತಿ ವಿಕೋಪದಿಂದ ಮೃತಪಟ್ಟ ಕುಟುಂಬಕ್ಕೂ ಪರಿಹಾರ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕಂದಾಯ ಸಚಿವರಿಗೆ ನೀಡಿದ್ದೇನೆ. ಅದಕ್ಕಾಗಿ ಪ್ರಸ್ತಾವನೆ ಸಿದ್ಧಪಡಿಸಿ ವಿಪತ್ತು ನಿರ್ವಹಣೆ ಕೋಶಕ್ಕೆ ಕಳುಹಿಸಲು ತಿಳಿಸಿದ್ದಾರೆ. ಕೂಡಲೇ ಪ್ರಸ್ತಾವನೆ ಸಲ್ಲಿಸಲಾಗುವುದು.
– ಅಶೋಕ ದುಡಗುಂಟಿ, ಅಪರ ಜಿಲ್ಲಾಧಿಕಾರಿ

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next