Advertisement

ಪ್ರಕೃತಿ-ಸಂಸ್ಕೃತಿ ರಕ್ಷಣೆ ಎಲ್ಲರ ಹೊಣೆ

04:32 PM Mar 14, 2022 | Team Udayavani |

ಚಿತ್ರದುರ್ಗ: ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸುವಲ್ಲಿ ಮಹಿಳೆಯರ ಪಾತ್ರ ದೊಡ್ಡದು ಎನ್ನುವುದಕ್ಕೆ ನಮ್ಮ ವೇಷಭೂಷಣಗಳೇ ಸಾಕ್ಷಿಯಾಗಿವೆ. ಪುರುಷರು ಸಂಸ್ಕೃತಿಯಿಂದ ವಿಮುಖರಾಗಿ ಐವತ್ತು ವರ್ಷಗಳು ಕಳೆದಿವೆ ಎಂದು ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ಹಾಗೂ ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್‌ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ಮಹಿಳಾ ಸಮನ್ವಯ ವೇದಿಕೆ ಹಮ್ಮಿಕೊಂಡಿದ್ದ ತ್ಯಾಜ್ಯ ರಹಿತ ಅಡುಗೆಮನೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕೃತಿ ರಕ್ಷಣೆಯ ಜವಾಬ್ದಾರಿಯನ್ನು ಯಾರೂ ನಮಗೆ ಹೇರಿಲ್ಲ. ಬದಲಾಗಿ ಅದನ್ನು ನಾವೇ ಪಾಲನೆ ಮಾಡುತ್ತಿದ್ದೇವೆ. ಪ್ರಕೃತಿ ಮತ್ತು ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ಜವಾಬ್ದಾರಿಯನ್ನು ನಿಭಾಯಿಸಿದಾಗ ಮಾತ್ರ ರಾಷ್ಟ್ರದ ಪುನರ್‌ ನಿರ್ಮಾಣ ಮತ್ತು ಭಾರತದ ವಿಶ್ವಗುರು ಸ್ಥಾನಕ್ಕೆ ತಲುಪಲು ಸಾಧ್ಯ. ಇಂದು ಮಹಿಳೆ ಅಸಾಮಾನ್ಯವಾದುದನ್ನು ಸಾಧಿಸುವ ಹಂತದಲ್ಲಿದ್ದಾಳೆ. ಪುರುಷ ಮಾಡುವ ಕೆಲಸವನ್ನು ಮಹಿಳೆ ಮಾಡಬಲ್ಲಳು. ಆದರೆ ಮಹಿಳೆ ಮಾಡುವ ಕೆಲಸಗಳನ್ನು ಪುರುಷ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಬೆಂಗಳೂರು ಒಂದರಲ್ಲೇ 208 ಮಹಿಳಾ ವಿಜ್ಞಾನಿಗಳಿದ್ದಾರೆ. ಮಂಗಳಯಾನವನ್ನು ಯಶಸ್ವಿಗೊಳಿಸಿದ್ದು ಬೆಂಗಳೂರಿನ ಮಹಿಳೆಯರೇ ಆಗಿದ್ದಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಇದನ್ನು ಉಡಾವಣೆ ಮಾಡಲಾಗಿದೆ. ಮಹಿಳೆಗೆ ಮಹತ್ವದ ಜವಾಬ್ದಾರಿ ನೀಡಬಹುದು ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ. ಆದರೆ ಭಾರತೀಯ ಮಹಿಳೆಯನ್ನು ಅನಕ್ಷರಸ್ಥೆ, ಹಿಂದುಳಿದವರು ಎಂಬ ತಪ್ಪು ಕಲ್ಪನೆ ಬೆರೆಸಲಾಗಿದೆ. ಸಾಧನೆಗಳ ಮೂಲಕವೇ ಈ ಅಭಿಪ್ರಾಯವನ್ನು ಸುಳ್ಳು ಮಾಡಲಾಗಿದೆ. ಇಂದು ಹೆಣ್ಣು ಭ್ರೂಣ ಹತ್ಯೆ ಪಿಡುಗು ಕಡಿಮೆಯಾಗಿದೆ. ಆದರೆ ಹೊಸ ಹೊಸ ಶೋಷಣೆಗಳು ಮಹಿಳೆಯನ್ನು ಕಾಡುತ್ತಿವೆ. ಸಮಾಜದಲ್ಲಿ ಹೆಚ್ಚು ಅವಮಾನ, ತಿರಸ್ಕಾರ, ಅತ್ಯಾಚಾರ ಮಹಿಳೆ ಮೇಲೆ ನಡೆಯುತ್ತಲೇ ಇವೆ. ಈ ಸಮಸ್ಯೆಗಳಿಗೆ ಸಮಾಜ ಪರಿಹಾರ ಕಂಡುಕೊಂಡಾಗ ಮಾತ್ರ ಅಭಿವೃದ್ಧಿಯತ್ತ ಮುಖ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಕ್ಷಯ ಗೋಖಲೆ “ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯ ಪಾತ್ರ’ ಕುರಿತು ಮಾತನಾಡಿದರು. ಜಿಲ್ಲಾ ಮಹಿಳಾ ಸಮನ್ವಯ ವೇದಿಕೆ ಸಂಚಾಲಕಿ ನಾಗರತ್ನ ಬದರಿನಾಥ್‌, ಪದಾಧಿಕಾರಿಗಳಾದ ಗಾಯತ್ರಿ ಶಿವರಾಂ, ಜ್ಯೋತಿ ಲಕ್ಷ್ಮಣ್‌, ವೀಣಾ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Advertisement

ಮನೆಗಳಲ್ಲಿ ಕಸದ ಬುಟ್ಟಿ ಭಾರತದ ಸಂಸ್ಕೃತಿ ಅಲ್ಲ: ಅಡುಗೆ ಮನೆ ಒಂದು ವಿಶ್ವವಿದ್ಯಾಲಯ ಇದ್ದಂತೆ. ಮಹಿಳೆಗೆ ಅಡುಗೆ ಮನೆಯೇ ಮೊದಲ ಪಾಠಶಾಲೆ. ಮನೆಗಳಲ್ಲಿ ಹೆಚ್ಚು ತ್ಯಾಜ್ಯ ಸೃಷ್ಟಿಯಾಗುವುದು ಅಡುಗೆ ಮನೆಯಲ್ಲಿ ಮಾತ್ರ. ಆದರೆ ತರಕಾರಿ ಸಿಪ್ಪೆಯಂತಹ ವಸ್ತುಗಳನ್ನು ಗೊಬ್ಬರವಾಗಿ ಪರಿವರ್ತನೆ ಮಾಡುವ ಅವಕಾಶವಿದೆ. ಆಹಾರ ಪದಾರ್ಥಗಳನ್ನು ಜೈವಿಕ ಇಂಧನವಾಗಿಯೂ ಬಳಕೆ ಮಾಡಬಹುದು ಎಂದು ತೇಜಸ್ವಿನಿ ಅನಂತಕುಮಾರ್‌ ತಿಳಿಸಿದರು.

ನಿತ್ಯ 80 ಸಾವಿರ ಮಕ್ಕಳಿಗೆ ಊಟ ಪೂರೈಸುವ ನಮ್ಮ ಅದಮ್ಯ ಚೇತನ ಸಂಸ್ಥೆಯಲ್ಲಿ ಕ್ವಿಂಟಾಲ್‌ ಗಳ ಲೆಕ್ಕದಲ್ಲಿ ಹಸಿ ತ್ಯಾಜ್ಯ ಉತ್ಪಾದನೆಯಾಗುತ್ತಿತ್ತು. ಇದನ್ನು ಬಿಬಿಎಂಪಿಗೆ ನೀಡದೆ ನಾವೇ ಪುನರ್‌ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಕಳೆದ 11 ವರ್ಷಗಳಿಂದ ನಮಗೆ ಎಲ್‌ಪಿಜಿ ಅಗತ್ಯ ಬಂದಿಲ್ಲ. ನಮ್ಮ ಆಲೋಚನೆ ಹಾಗೂ ಜೀವನಕ್ರಮ ಬದಲಾವಣೆ ಮಾಡಿಕೊಂಡರೆ ಸುಸ್ಥಿರ ಬದುಕು ನಮ್ಮದಾಗುತ್ತದೆ ಎಂದು ಸಲಹೆ ನೀಡಿದರು.

ಮನೆಗಳಲ್ಲಿ ಕಸದ ಬುಟ್ಟಿ ಇಡುವ ಸಂಸ್ಕೃತಿ ಭಾರತದ್ದಲ್ಲ. ಮನೆ ಸಮೀಪದಲ್ಲಿ ತಿಪ್ಪೆಗುಂಡಿ ನಿರ್ಮಿಸಿ ಕಸವನ್ನು ಅಲ್ಲಿ ಹಾಕಿ ನೈಸರ್ಗಿಕವಾಗಿ ಪುನರ್‌ ಬಳಕೆ ಮಾಡುವುದು ನಮ್ಮ ಹಿರಿಯರು ಹಾಕಿ ಕೊಟ್ಟಿರುವ ಮಾರ್ಗ. ಆದರೆ ಮನೆಗಳಿಗೆ ಕಸದ ಬುಟ್ಟಿ ಬಂದು ಪ್ಲಾಸ್ಟಿಕ್‌ ಹೆಚ್ಚಾಗಿ ಸಮುದ್ರ ಸೇರಿ ಉಪ್ಪಿನಲ್ಲೂ ಸೇರಿ ಹೋಗಿದೆ. ಆಹಾರ ಪದಾರ್ಥಗಳಲ್ಲೂ ಮೈಕ್ರೋ ಪ್ಲಾಸ್ಟಿಕ್‌ ಅಂಶ ಕಂಡುಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next