Advertisement

ಮಾವೋಲಿನಾಂಗ್‌ ಹಳ್ಳಿ ಮತ್ತು ಸಜೀವ ಸೇತುವೆ

11:24 AM Oct 21, 2019 | mahesh |

ಮೇಘಾಲಯ ರಾಜ್ಯವು ಹಿಮಾಲಯದ ವಿಶೇಷ ಅನುಗ್ರಹಕ್ಕೊಳಗಾದ ಸುಮಸುಂದರ ತರುಲತೆಗಳ ನಾಡು. ಈ ರಾಜ್ಯದ ಈಸ್ಟ್‌ ಖಾಸಿ ಹಿಲ್ಸ್‌ ಜಿಲ್ಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯೇ ಮಾವೋಲಿನಾಂಗ್‌. ಈ ಹಳ್ಳಿಯ ಜನಸಂಖ್ಯೆ ಐದುನೂರರ ಸುತ್ತಮುತ್ತ. ಇಂದು ಈ ಹಳ್ಳಿಯನ್ನು ಕಾಣಲು ಪ್ರವಾಸಿಗರು ದಂಡುಕಟ್ಟಿಕೊಂಡು ಬರುತ್ತಾರೆ. ಕಾರಣ- ಇದು ಏಷ್ಯಾದ ಅತಿ ಸ್ವಚ್ಛ ಹಳ್ಳಿ ಎಂದು ಡಿಸ್ಕವರ್‌ ಇಂಡಿಯಾ ಸಂಚಿಕೆಯಿಂದ 2003ರಲ್ಲಿ ಘೋಷಿಸಲ್ಪಟ್ಟಿದೆ. ನಿಸರ್ಗದ ಐಸಿರಿಗೆ ಈ ಹಳ್ಳಿಯ ಜನ ನೀಡಿರುವ ವಿಶಿಷ್ಟ ಕೊಡುಗೆಯ ಕುರಿತು ಇಡೀ ದೇಶವೇ ಕಲಿಯಬೇಕಾದ ಪಾಠ ಬಹಳಷ್ಟಿದೆ.

Advertisement

ಮಾವೋಲಿನಾಂಗ್‌ ಹಳ್ಳಿಯಲ್ಲಿರುವವರೆಲ್ಲ ಶ್ರಮಿಕರು. ಅಲ್ಲಿ ನಾವು ನೋಡುವುದು ಬಿದಿರಿನಿಂದ ನಿರ್ಮಿತವಾದ ಅಚ್ಚುಕಟ್ಟಾದ ಮನೆಗಳನ್ನು. ಕಲ್ಲು ಹಾಸಿನ ರಸ್ತೆಗಳ ಇಕ್ಕೆಲಗಳಲ್ಲೂ ಬಣ್ಣಬಣ್ಣದ ಹೂ ಹೊತ್ತ ಗಿಡಗಳು. ಅಲ್ಲಲ್ಲಿ ಕುಳಿತುಕೊಳ್ಳಲು ಕಲ್ಲಿನ ಕಟ್ಟೆಗಳು. ಚಕ್ಕೋತನ ಹಣ್ಣುಗಳು ತೂಗಾಡುತ್ತಿರುವ ಮರಗಳು. ಊರ ನಡುವಿನ ಚೌಕದಲ್ಲೊಂದು ಬಿದಿರು ಗಳದ ಬೇಲಿಯಿರುವ ವೃತ್ತಾಕಾರದ ಪುಟ್ಟ ಉದ್ಯಾನ.

ಈ ಹಳ್ಳಿಯ ಜನರು ಸ್ವತ್ಛತೆಯ ಕುರಿತು ಯಾವುದೇ ಪ್ರಚಾರ, ಪ್ರದರ್ಶನಗಳು, ಘೋಷಣೆಗಳನ್ನು ಮಾಡಿದವರಲ್ಲ. ಸ್ವಚ್ಛತೆ ಇವರ ಜೀವನ ಶೈಲಿ. ಸಂಗ್ರಹವಾದ ಕಸದ ತ್ಯಾಜ್ಯವನ್ನು ಗುಂಡಿಯಲ್ಲಿ ಸಂಗ್ರಹಿಸಿ ಗೊಬ್ಬರವಾಗಿ ಪರಿವರ್ತಿಸುವ ವಿಧಾನ ರೂಪಿಸಿಕೊಂಡಿದ್ದಾರೆ. ಊರಿನ ಜನರಿಗೆ ತಮ್ಮ ಮನೆಯಂತೆ ಊರಿನ ರಸ್ತೆಗಳನ್ನು ಶುಚಿಯಾಗಿಡುವುದೂ ಪ್ರೀತಿಯ ಕರ್ತವ್ಯ. ರಸ್ತೆಯ ಮೇಲೆ ಕಸವೊಂದು ಬಿದ್ದಿರುವುದು ಕಂಡುಬಂದಲ್ಲಿ ಮಕ್ಕಳಿಂದ ಮುದುಕರವರೆಗೆ ಪ್ರತಿಯೊಬ್ಬರೂ ಅದನ್ನೆತ್ತಿ ಸಮೀಪದ ಕಸದ ಬುಟ್ಟಿಗೆ ಹಾಕುತ್ತಾರೆ.

ಅತಿ ಸ್ವತ್ಛ ಹಳ್ಳಿ ಎಂದು ಘೋಷಣೆಯಾದ ನಂತರ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದ್ದು ಇದರಿಂದಾಗಿ ಹಳ್ಳಿಗರ ಕುಟುಂಬದ ಆದಾಯವೂ ಹೆಚ್ಚಿದೆ. ಆದರೆ, ಪ್ರವಾಸಿಗಳನ್ನು ಕೂಗಿ ಕರೆದು ಕೊಳ್ಳಲು ಒತ್ತಾಯಿಸುವ ಚಿತ್ರಣ ಇಲ್ಲವೇ ಇಲ್ಲ. ಇದು ಇವರ ಸ್ವಾಭಿಮಾನದ ದ್ಯೋತಕ.

ಮಾವೋಲಿನಾಂಗ್‌ನಿಂದ ಸ್ವಲ್ಪ ದೂರದಲ್ಲೇ ಮುಂದುವರಿದು ಹೋದರೆ ಈ ಭಾಗದ ಜನರ ಸೃಜನಶೀಲತೆಯ ಒಂದು ಅದ್ಭುತ ಸೃಷ್ಟಿ ಕಾಣುತ್ತೇವೆ. ಅದೇ ಜೀವಂತ ಸೇತುವೆ. ಮರದ ಬೇರುಗಳಿಂದ ಆದ ಸೇತುವೆಯು ಬೇರುಗಳ ಬೆಳವಣಿಗೆಯೊಂದಿಗೆ ತಾನೂ ಬೆಳೆಯುತ್ತ ಮತ್ತಷ್ಟು ಸದೃಢವಾಗುತ್ತ ಹೋಗುವ ವಿಸ್ಮಯಕಾರಿ ವಿದ್ಯಮಾನವೊಂದು ಇಲ್ಲಿದೆ. ಇಲ್ಲಿನ ಥೈಲಾಂಗ್‌ ನದಿಯಲ್ಲಿ (ಪವಿತ್ರ ನದಿ ಎಂದು ಅರ್ಥ) ತಕ್ಕಷ್ಟು ಪ್ರಮಾಣದ ನೀರು ಇದ್ದು, ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಕಾಡಿನ ನಡುವಿನ ಈ ನದಿಯ ಎರಡು ಬದಿಗಳ ಹಳ್ಳಿಗಳವರಿಗೆ ಮಳೆಗಾಲದಲ್ಲಿ ಈ ನದಿಯನ್ನು ದಾಟುವುದಕ್ಕೆ ಈ ಸೇತುವೆಯಲ್ಲದೆ ಬೇರೆ ಮಾರ್ಗಗಳಿಲ್ಲ. ಆವಶ್ಯಕತೆಯೇ ಸಂಶೋಧನೆಯ ತಾಯಿ ಎಂಬ ಮಾತಿನಂತೆ ಖಾಸಿ ಬುಡಕಟ್ಟು ಜನರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಈ ಸೇತುವೆ ರೂಪಿಸಿದ್ದಾರೆ. ಈ ಸೇತುವೆ ಇರುವ ಹಳ್ಳಿಯ ಹೆಸರು ನಾಹ್ವಟ್‌ ಹಳ್ಳಿ.

Advertisement

ಈ ನದಿಯ ಎರಡು ಬದಿಗಳಲ್ಲಿ ಎರಡು ಬೃಹತ್‌ ರಬ್ಬರ್‌ ಮರಗಳಿವೆ. ಅವುಗಳ ಬೇರುಗಳನ್ನು ಬಟ್ಟೆ ನೇಯ್ದಂತೆ ಹೆಣೆದು ಖಾಸಿ ಹಳ್ಳಿಗರು ಈ ಸೇತುವೆ ನಿರ್ಮಿಸಿದ್ದಾರೆ. ಫೈಕಸ್‌ ಇಲ್ಯಾಸ್ಟಿಕಾ (ಭಾರತೀಯ ರಬ್ಬರ್‌ ಮರ) ನೂರಾರು ವರ್ಷ ಬಾಳುವಂಥಾದ್ದು. ಸೂಕ್ತ ಪರಿಸರದಲ್ಲಿ ಮರವು ಆರೋಗ್ಯಕರವಾಗಿ ಬೆಳೆಯುತ್ತಿದ್ದಲ್ಲಿ ಅದರ ಬೇರುಗಳು ಕೂಡ ಸದೃಢವಾಗಿರುತ್ತವೆ ಎಂಬ ಸಾಮಾನ್ಯ ಜ್ಞಾನದ ಆಧಾರದಲ್ಲಿ ಹಳ್ಳಿಗರು ಸುಮಾರು ಮೂವತ್ತು ಮೀ.ಉದ್ದದ ಈ ಸೇತುವೆಯನ್ನು 1840ರಲ್ಲಿ ಹೆಣೆದು ನಿರ್ಮಿಸಿದ್ದಾರೆ. ಬೇರುಗಳ ಬೆಳವಣಿಗೆಯನ್ನು ಅನುಸರಿಸುತ್ತ ಈ ಸೇತುವೆಯನ್ನು ನೇಯ್ದು ಮುಗಿಸಲು ಹದಿನೈದು ವರ್ಷಗಳು ಹಿಡಿಯಿತಂತೆ. ಈ ಸೇತುವೆಯನ್ನು ಸಾಕಾರಗೊಳಿಸುವುದರ ಹಿಂದೆ ಹಳ್ಳಿಗರ ಪರಿಸರ ಪ್ರೀತಿ, ದೂರದೃಷ್ಟಿ, ಸಾಮಾನ್ಯ ಜ್ಞಾನ ಹಾಗೂ ತಾಳ್ಮೆ ಕೆಲಸ ಮಾಡಿರುವುದು ಕಾಣು ತ್ತದೆ.

ಪಥದರ್ಶಿ : ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ ಮಾವೋಲಿನಾಂಗ್‌ 90ಕಿ.ಮೀ. ದೂರದಲ್ಲಿ ಭಾರತ-ಬಾಂಗ್ಲಾ ಗಡಿಯ ಸಮೀಪದಲ್ಲಿದೆ. ಶಿಲ್ಲಾಂಗ್‌ನಿಂದ ರಸ್ತೆ ಪ್ರಯಾಣದ ಮೂಲಕವೇ ಇಲ್ಲಿಗೆ ಬರಬೇಕು. ಆದರೆ, ರಸ್ತೆಯ ಮಾರ್ಗ ಉತ್ತಮವಾಗಿದ್ದು ದಾರಿಯುದ್ದಕ್ಕೂ ಹಸಿರು ವನಸಿರಿ ಕಣ್ಣು ತಂಪಾಗಿಸುತ್ತದೆ.

ಕೆ. ಆರ್‌. ಉಮಾದೇವಿ ಉರಾಳ

Advertisement

Udayavani is now on Telegram. Click here to join our channel and stay updated with the latest news.

Next