Advertisement
“ತೇಜಸ್ವಿಯವರು ನಿಮ್ಮ ಈ ತೋಟದ ಮನೆಗೆ ಬಂದಿದ್ದರೆ ತುಂಬಾ ಖುಷಿಪಡುತ್ತಿದ್ದರು’- ಎರಡು ವರ್ಷಗಳ ಹಿಂದೆ ನಮ್ಮನೆಗೆ ಬಂದಿದ್ದ ಶ್ರೀಮತಿ ರಾಜೇಶ್ವರಿಯವರು ಹೇಳಿದ ಈ ಮಾತು ನನ್ನ ಕೃಷಿಗಲ್ಲ, ಬದುಕಿನ ರೀತಿಗೆ ದೊರೆತ ಪ್ರಮಾಣಪತ್ರ ಎಂದೇ ಭಾವಿಸಿದ್ದೆ. ವರ್ತಮಾನದ ಅನುಮಾನಗಳಾಚೆಗೆ ತೀರಾ ಅಂತರ್ಮುಖೀಯಾಗಿ ಬದುಕಲು ನವನಾಗರಿಕ ಜಗತ್ತಿನಿಂದ ಹೊರಗುಳಿಯುವುದೊಂದೇ ಸರಿ ಎಂದು ನಂಬಿದವನು ನಾನು. ಈ ಎಳೆಯನ್ನು ನಾನು ದಕ್ಕಿಸಿಕೊಂಡಿದ್ದು ತೇಜಸ್ವಿಯವರ ಜೀವನದಾರಿಯಿಂದಲೇ.
Related Articles
Advertisement
ಭೂತನಕಾಡು, ಚಿತ್ರಕೂಟ, ನಿರುತ್ತರ – ಈ ಕಾಡುತೋಟಗಳಿಂದ ತೇಜಸ್ವಿ ಕಂಡುಂಡು ಬಡಿಸಿದ್ದನ್ನೇ ನಾವು ಉಂಡದ್ದು. ಭೂಮಿ-ಹಸಿರು, ತೇಜಸ್ವಿ ಸಾಹಿತ್ಯದ ಸ್ಥಾಯಿ. ಈ ಕಾಡುತೋಟಗಳ ನೆತ್ತಿಯಿಂದ, ಬರೀ ನಾನೂರು ಅಡಿ ಎತ್ತರದಿಂದ ಒಂದು ಫೋಟೊ ಕ್ಲಿಕ್ಕಿಸಿದರೆ ಕೆಳಗಡೆ ಬರೀ ಹಸಿರು ಕಾಣಿಸುತ್ತದೆಯೇ ಹೊರತು ಯಾವುದೇ ಜೀವಜಂತುಗಳು ಕಾಣಿಸಲಾರವು. ಅದು ಹಸಿರಿನ ಸಹಜಶಕ್ತಿ. ಅದು ಎಲ್ಲವನ್ನೂ ಮುಚ್ಚಿಕೊಳ್ಳುತ್ತದೆ. ಈ ಮುಚ್ಚಿಕೊಳ್ಳುವ ಪ್ರಕೃತಿಯ ಸವಾಲಿಗೆ ಬೆರಗಿನಿಂದಲೇ ಅಡ್ಡವಾಗುವ ತೇಜಸ್ವಿ ಎಲ್ಲವನ್ನೂ ಕುತೂಹಲ, ವಿಸ್ಮಯದಿಂದಲೇ ಬಗೆಯುತ್ತಾ ಹೋಗುತ್ತಾರೆ. ಬೆರಳಿಗಂಟಿದ ಚಿಟ್ಟೆಯ ರಂಗಿನ ಪ್ರತಿಯಾಗಿ ಅವರೊಳಗೆ ಒಂದು ಕತೆಯಾಗುತ್ತದೆ.
ಇದೇ ತುಂಡು ಭೂಮಿಯೊಳಗೆ ತೇಜಸ್ವಿ, ಕಿವಿ ಎಂಬ ಸಾಕುನಾಯಿಯ ಬೆನ್ನಿಗೆ ಬಿದ್ದು ಅಲೆಯುತ್ತಾರೆ. ಮೀನಿಗಾಗಿ ಗಾಳ ಹಿಡಿದು ಹೊಂಚುತ್ತಾ, ಕ್ಯಾಮರಾ ಹಿಡಿದು ಪಕ್ಷಿಗಳ ಬರುವಿಕೆಗಾಗಿ ಕಾಯುತ್ತಾರೆ. ಕಿವಿ, ಗಾಳ, ಕೋವಿ, ಕ್ಯಾಮರಾ ತೇಜಸ್ವಿ ಪಾಲಿಗೆ ಪರಿಸರ ಅಧ್ಯಯನಕ್ಕಿದ್ದ ದಾರಿಗಳು. ತೇಜಸ್ವಿ ಬರೆದ ಅಷ್ಟೂ ಪುಸ್ತಕಗಳೊಳಗೆ ಈ ಮೇಲಿನ ಪರಿಕರಗಳಿಂದ ದಕ್ಕಿಸಿಕೊಂಡ ಪ್ರಮೇಯಗಳಿವೆ, ಅನುಭವಗಳಿವೆ.
ಪಡೆದ ಪದವಿ, ಹಿರಿಯರ ಹೆಸರನ್ನು ಬಳಸಿ ತೇಜಸ್ವಿ ನಗರ ಸೇರಿ ಯಾವುದಾದರೊಂದು ಅಧಿಕಾರ ಹಿಡಿದು ಪೀಠಸ್ಥರಾಗಿರುತ್ತಿದ್ದರೆ, ಕೃಷಿ ಕೇಂದ್ರಿತ ತೇಜಸ್ವಿ ಬರೆಯುವ ಮತ್ತು ಬರೆಯದಿರುವ ಎರಡು ಸುಖದಿಂದ ವಂಚಿತರಾಗುತ್ತಿದ್ದರು. ಕೈ ಕಾಲಿನ ಕೆಸರು ತೊಳೆದು ಕಂಪ್ಯೂಟರ್ ಎದುರು ಅಕ್ಷರ ಕುಟ್ಟುವುದು ಒಂದು ಸುಖವಾದರೆ, ಬರವಣಿಗೆ ಬೋರಾದಾಗ ಕತ್ತಿ ಹಿಡಿದು ತೋಟಕ್ಕಿಳಿಯುವುದು ಮತ್ತೂಂದು ಸುಖ. ಆದರೆ ಈ ಸುಖದ ಮಿತಿ ಏನೆಂದರೆ ಎಷ್ಟೋ ಬಾರಿ ತೋಟದೊಳಗೆ ದುಡಿಯುತ್ತಿರುವಾಗ ಬರೆಯಬೇಕೆನ್ನಿಸುವುದು. ಬರೆಯುತ್ತಿರುವಾಗ ತೋಟದ ಕೆಲಸ ನೆನಪಾಗುವುದು.
ಜಪಾನಿನ ಫುಕುವೋಕಾ ಅವರ ಸಹಜಕೃಷಿ, ನೆಲಕ್ಕಿಂತಲೂ ತೇಜಸ್ವಿಯವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿತ್ತು. ಅದು ಕೇವಲ ಒಂದು ಬೆಳೆ ತೆಗೆಯುವ ಪದ್ಧತಿ ಮಾತ್ರವಲ್ಲದೆ ಒಂದು ಜಾಗದ ಮಾರ್ಗವನ್ನೇ ಬೋಧಿಸುವ ತಣ್ತೀ ಚಿಂತನೆ ಎಂದು ಅವರು ಭಾವಿಸಿದ್ದರು. ಆ ಪ್ರಕಾರ ಮನಸ್ಸಲ್ಲಾಗಲೀ, ನೆಲದಲ್ಲಾಗಲೀ ನೀನು ಪದ್ಯವನ್ನಾದರೂ ಬರಿ, ಭತ್ತವನ್ನಾದರೂ ಬೆಳಿ, ನಿನ್ನ ಮನಸ್ಸು- ಪರಿಸರದಲ್ಲಿ ನೀನೇ ಸಾಕ್ಷಾತ್ಕಾರವನ್ನು ಕಂಡುಕೊಳ್ಳಬೇಕೆಂಬುದು ತೇಜಸ್ವಿಯ ಇರಾದೆಯಾಗಿತ್ತು. ಈ ಕಾರಣಕ್ಕಾಗಿ ಸಹಜಕೃಷಿಯನ್ನು ತೇಜಸ್ವಿ ಬದುಕಿನ ಮೂಲಮಂತ್ರ ಎಂದೇ ಭಾವಿಸಿದ್ದರು.
ಕನ್ನಡದ ಬೇರೆ ಲೇಖಕರಂತೆ ತೇಜಸ್ವಿಯವರಿಗೆ ವೇದಿಕೆಯ ವ್ಯಸನ ಹೆಚ್ಚಿರಲಿಲ್ಲ. ಬರಹದ ಮೂಲಕ ಎಲ್ಲದಕ್ಕೂ ಪ್ರತಿಕ್ರಿಯಿಸುವ ಕ್ರಮ ಅವರದ್ದಾಗಿತ್ತು. ತೋಟದೊಳಗೆಯೇ ಹೆಚ್ಚು ಉಳಿಯುವ ಮೌನ ಭಾರತದ ನಿಜವಾದ ಕೃಷಿಕನ ಮೌನವೂ ಹೌದು. ಇದಕ್ಕೆ ಮುಖ್ಯ ಕಾರಣ ಸಮಯದ, ದುಡಿಮೆಯ ಅಗತ್ಯ. ಈ ಕಾರಣಕ್ಕಾಗಿಯೇ ರೈತರು ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದು, ಹಸಿರುಶಾಲು ಹಾಕಿ ಪ್ರತಿಭಟಿಸುವುದು ಮುಂತಾದ ಹಕ್ಕೊತ್ತಾಯದ ವಿಧಾನಗಳು ಬದಲಾಗಬೇಕೆಂದು ಅವರು ಆಶಿಸುತ್ತಿದ್ದರು.
ಕೃಷಿ ನಮಗೆ ಸುಖವಾಗುವುದು ಅದು ನಮಗೆ ಸುರಿಸುವ ದುಡ್ಡಿಗಾಗಿ ಅಲ್ಲವೇ ಅಲ್ಲ, ಅದೊಂದು ಬೇರೆಯ ಬಂಧ-ಸಂಬಂಧ ಎಂದು ಭಾವಿಸಿದವರು ತೇಜಸ್ವಿ. ಈ ಕಾರಣಕ್ಕಾಗಿಯೇ ತೇಜಸ್ವಿ ಕಾಫಿಗಿಡಗಳಿಗೆ, ಮೆಣಸಿನ ಬಳ್ಳಿಗಳಿಗೆ ಹೆಚ್ಚು ಹೂವು ಬಿಡುವ, ಕಾಯಿಕಟ್ಟುವ ಕ್ರಮ-ಶಿಸ್ತುಗಳನ್ನು ಕಲಿಸಿರಲಿಲ್ಲ. ಅವುಗಳ ಬುಡಗಳನ್ನು ಅಗೆದು ಬಗೆದು ರಂಗೋಲಿ ಇಟ್ಟಿರಲಿಲ್ಲ. ಚೋದಕಗಳನ್ನು ಕೊಟ್ಟಿರಲಿಲ್ಲ. ಈ ಕಾರಣಕ್ಕಾಗಿಯೇ ಅವರಿಗೆ ಕಾಫಿಗೆ ನೆರಳು ಕೊಡುವ ಮರಗಳನ್ನು ಸವರುವುದು ಇಷ್ಟವಾಗುತ್ತಿರಲಿಲ್ಲ. ತೇಜಸ್ವಿ ಇಲ್ಲಿ ನಿರಂತರ ಪ್ರಕೃತಿಯೊಂದಿಗೆ ಒಂದಾಗಿದ್ದಾರೆ. ಪ್ರಕೃತಿ ವಿಸ್ಮಯದ ಸೂಕ್ಷ್ಮತೆಯನ್ನು ಕಂಡು ಆನಂದಿಸಿದ್ದಾರೆ.
– ನರೇಂದ್ರ ರೈ ದೇರ್ಲ