Advertisement
ಅಸ್ತಮಾಕ್ಕೆ ಅನುವಂಶೀಯ ಹಿನ್ನೆಲೆ ಇರುವುದು ಗೊತ್ತಿರುವ ವಿಚಾರವೇ ಆಗಿದೆ. ಅಧ್ಯಯನಗಳ ವೇಳೆ ಅಸ್ತಮಾದೊಂದಿಗೆ ಅನೇಕ ಜೀನ್‌ಗಳು ತಳಕು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಹೀಗಿದ್ದರೂ ಬಹುಸಂಖ್ಯೆಯಲ್ಲಿ ಅಸ್ತಮಾವು ಕುಟುಂಬದಲ್ಲಿ ವರ್ಗಾವಣೆ ಹೊಂದುವು ದನ್ನು ವಂಶವಾಹಿಗಳು ವಿವರಿಸಲಾರವು. ಈ ಕಾಯಿಲೆಯು ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಇರುವುದಕ್ಕೆ ಕಾರಣವನ್ನು ಕೂಡ ವಂಶವಾಹಿಗಳ ಸ್ಥಿತ್ಯಂತರ ವಿವರಿಸಲಾರದು. ಬಹುಶಃ ಒಂದೇ ಒಂದು ತಲೆಮಾರಿನಲ್ಲಿ ನಮ್ಮ ವಂಶವಾಹಿಗಳಲ್ಲಿ ಅಷ್ಟೊಂದು ಬದಲಾವಣೆ ಆಗಿರಲಾರದು. ಆದ ಕಾರಣ ಪರಿಸರದಲ್ಲಿನ ಪರಿವರ್ತಿತ ಅಂಶಗಳು ಇವೆಲ್ಲದಕ್ಕೆ ಪ್ರಭಾವಿ ಕಾರಣಗಳಿರಬಹುದು.
Related Articles
Advertisement
ಹೊಲಗಳಲ್ಲಿ ಅಧಿಕ ವೈವಿಧ್ಯದ ಸೂಕ್ಷ್ಮಾಣುಗಳಿವೆ. ದನದ ಕೊಟ್ಟಿಗೆಗಳಲ್ಲಿನ ಸೂಕ್ಷ್ಮಾಣುಗಳು ಕೂಡ ಮನೆಯ ಒಳಗಡೆ ಪ್ರವೇಶ ಪಡೆದಿರುತ್ತವೆ. ಈ ಎರಡು ಅಂಶಗಳು ಸೇರಿ ಬಹಳ ಪ್ರಬಲವಾದ ರಕ್ಷಣೆ ಯನ್ನು ಅಸ್ತಮಾದಿಂದ ನೀಡುತ್ತವೆ. ತಾಯಿಯ ಹೊದಿಕೆಯಲ್ಲಿನ ಸೂಕ್ಷ್ಮಾಣುಗಳ ಸಂಖ್ಯೆಯು ಹೆಚ್ಚಾ ಗಿದ್ದಾಗ ಅವಳ ಮಕ್ಕಳಲ್ಲಿ ಅಸ್ತಮಾದೊಂದಿಗೆ ಹೆಚ್ಚಾಗಿ ತಳಕು ಹಾಕಿಕೊಳ್ಳುವ ಎಕ್ಸೆಮಾ ಚರ್ಮರೋಗ ಉಂಟಾಗುವ ಸಾಧ್ಯತೆಯೂ ಕಡಿಮೆ ಎಂಬುದು ಇನ್ನೊಂದು ಅಧ್ಯಯನದಲ್ಲಿ ಸಾಬೀತಾಗಿದೆ. ಹೊಲದಲ್ಲಿನ ಸೂಕ್ಷ್ಮಾಣುಗಳು ಬಾಲ್ಯದಲ್ಲಿಯೇ ಮಾನವನ ದೇಹದ ಸಂಪರ್ಕಕ್ಕೆ ಬಂದಲ್ಲಿ ಈ ರೋಗ ಗಳು ಅಂಥವರನ್ನು ಬಾಧಿಸುವ ಸಾಧ್ಯತೆ ಕಡಿಮೆ.
ಅಷ್ಟೇ ಅಲ್ಲದೆ ಇನ್ನೊಂದು ಅಧ್ಯಯನದ ಪ್ರಕಾರ, ಹೊಲಗದ್ದೆಗಳ ಸಂಪರ್ಕಕ್ಕೆ ಬಂದ ನವಜಾತ ಶಿಶುಗಳು ಬಹಳ ವಿಶೇಷವಾದ ರೋಗನಿರೋಧಕ ಶಕ್ತಿಯ ಸಾಮರ್ಥ್ಯವನ್ನು ಹೊಂದಿರುತ್ತವೆ. ಹೊಲ ಗಳಲ್ಲಿ ಕೆಲಸ ಮಾಡಿ ಜೀವಿಸುವ ತಾಯಂದಿರ ಹೊಕ್ಕುಳ ಬಳ್ಳಿಯ ಮಾದರಿಯನ್ನು ಪರಿಶೀಲಿಸಿದಾಗ ರಕ್ಷಣಾತ್ಮಕ T ECELLS ಅಧಿಕವಾಗಿ ಇದ್ದದ್ದು ಕಂಡು ಬಂತು. ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಅವುಗಳ ಪಾತ್ರವೂ ಮಹತ್ವದ್ದು. ಅಸ್ತಮಾ ಹಾಗೂ ಅಲರ್ಜಿಗಳನ್ನು ಬಾರದಂತೆ ತಡೆಗಟ್ಟುವಲ್ಲಿಯೂ ಅವುಗಳ ಪಾತ್ರ ಪ್ರಮುಖ.
ಸಂಶೋಧಕರು ತುಲನಾತ್ಮಕ ಅಧ್ಯಯನಕ್ಕೆ ಆರಿಸಿಕೊಂಡ ಎರಡು ಗುಂಪುಗಳು ಕೂಡ ಸಮಾನ ಸಾಮುದಾಯಿಕ ಮೂಲವನ್ನು ಹೊಂದಿದ್ದು, ವ್ಯತ್ಯಾಸವಿರುವುದು ಕೇವಲ ಅವರ ಬದುಕಿನ ಪರಿಸರದಲ್ಲಿ ಮಾತ್ರ. ಗರ್ಭಿಣಿಯರು ಹೊಲಗಳ, ದನದ ಹಟ್ಟಿಗಳ ಸಂಪರ್ಕಕ್ಕೆ ಬಂದಲ್ಲಿ ಸಹಜ ರೀತಿಯಲ್ಲಿ ಗರ್ಭದಲ್ಲಿನ ಶಿಶುವಿನ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ದನ ಇತ್ಯಾದಿ ಸಾಕುಪ್ರಾಣಿಗಳ ಹಾಗೂ ಕೊಳೆಯ ಸಂಪರ್ಕಕ್ಕೆ ಬರುವುದರ ಮೂಲಕ ತಾಯಂದಿರು ತಮ್ಮ ಮಕ್ಕಳಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ಊರ್ಜಿತಗೊಳಿಸುತ್ತಾರೆ. ಆ ಮೂಲಕ ಭವಿಷ್ಯ ದಲ್ಲಿ ಅಲರ್ಜಿ ಉಂಟುಮಾಡುವ ಯಾವುದೇ ಸಂಗತಿಗಳನ್ನು ತಾಳಿಕೊಳ್ಳುವುದಕ್ಕೆ ಶಕ್ತರಾಗುವಂತೆ ಮಾಡುತ್ತಾರೆ. ನಮ್ಮ ಪೂರ್ವಜರು ಪ್ರಾಣಿಗಳ ಮತ್ತು ನಿಸರ್ಗದ ಸ್ಪರ್ಶದೊಂದಿಗೆ ಬದುಕಿದ್ದರು. ಆಧುನೀಕರಣದ ಧಾವಂತದಲ್ಲಿ ಗರ್ಭಿಣಿಯರಿಗೆ ಈ ರೀತಿಯ ಪರಿಸರದ ಸ್ಪರ್ಶ ಇಂದು ದೂರವಾಗಿದೆ. ಇದುವೇ ಅತ್ಯಂತ ತೀವ್ರಗತಿಯಲ್ಲಿ ಅಸ್ತಮಾ ಹಾಗೂ ಅಲರ್ಜಿಗಳು ಅಪಾಯಕಾರಿ ಮಟ್ಟವನ್ನು ತಲುಪುವುದಕ್ಕೆ ಕಾರಣ.
ನಮ್ಮ ಹಿರಿಯರು ಮನೆಯ ಅಂಗಳದಲ್ಲಿ ಮತ್ತು ಮನೆಯ ಒಳಗೆ ಗೋಮಯ ಅಂದರೆ ಸೆಗಣಿ ಸಾರಿಸುವುದನ್ನು ರೂಢಿಸಿಕೊಂಡಿದ್ದರು. ಅದು ಕೇವಲ ಅಲಂಕಾರಕ್ಕೋ ಮಡಿವಂತಿಕೆಗೋ ಆಗಿರದೆ ಆರೋಗ್ಯ ರಕ್ಷಣೆಯ ವೈಜ್ಞಾನಿಕತೆ ಅದರಲ್ಲಿ ಅಡಗಿದೆ. ಈವರೆಗೆ ನಡೆಸಲಾದ ಹಲವಾರು ಅಧ್ಯಯನಗಳು ಇಂತಹ ಆಚರಣೆಗಳ ಧನಾತ್ಮಕ ಪರಿಣಾಮವನ್ನು ಸಾರಿ ಹೇಳುತ್ತಿವೆ. ಆದರೆ ನಮ್ಮತನ, ನಮ್ಮ ಸಂಸ್ಕೃತಿಯ ಹಿಂದಿನ ಮಹತ್ವ, ಶ್ರೇಷ್ಠತೆಯನ್ನು ನಾವು ವಿದೇಶಿಯರಿಂದ ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಎದುರಾಗಿರುವುದು ವಿಪರ್ಯಾಸವೇ ಸರಿ.
-ಡಾ| ಆರ್.ಪಿ. ಬಂಗಾರಡ್ಕ, ಪುತ್ತೂರು