Advertisement

ನೈಸರ್ಗಿಕ ಬುದ್ಧಿಮತ್ತೆ ಮತ್ತು ಹೊಣೆಗಾರಿಕೆ

01:54 AM Jun 28, 2021 | Team Udayavani |

ನಾವು ಈಗ ಧರಿಸಿರುವ ಈ ದೇಹದಲ್ಲಿ ತಾಯಿಯ ಉದರದಿಂದ ಹೊರ ಬಂದಾಗ ಇದ್ದುದು ಪ್ರಾಯಃ ಯಾವುದೂ ಇರಲಿಕ್ಕಿಲ್ಲ. ಇವತ್ತು ನಮ್ಮ ದೇಹದಲ್ಲಿ ಇರುವ ಎಲ್ಲವೂ ಭೂಮಿ ತಾಯಿಯಿಂದ ಬಂದದ್ದು. ಹಾಗೆ ನೋಡಿದರೆ, ನಮಗೆ ಜನ್ಮ ಕೊಟ್ಟ ತಾಯಿಯ ದೇಹವೂ ಆಕೆಯ ಗರ್ಭ ದಲ್ಲಿ ನಮ್ಮ ಉದಯಕ್ಕೂ ಕಾರಣ ವಾದದ್ದು ಭೂಮಿ ತಾಯಿಯೇ. ನಾವು ಈಗ ಎಷ್ಟು ಕಿಲೋ ಗ್ರಾಮ್‌ಗಳನ್ನು ಹೊಂದಿದ್ದೇವೆಯೋ ಅದು ಸೃಷ್ಟಿ ಯಾದದ್ದು ಭೂಮಿ ಯೆಂಬ ಇನ್ನೊಬ್ಬಳು ಅಮ್ಮನಿಂದ.

Advertisement

ಹೀಗಾಗಿ ಇಬ್ಬರು ತಾಯಂದಿರಿಗೂ ನಾವು ಕೃತಜ್ಞರಾಗಿರಬೇಕು ಮತ್ತು ನಮ್ಮ ಸೃಷ್ಟಿಗಾಗಿ ಇಬ್ಬರನ್ನೂ ಪ್ರೀತಿಸ ಬೇಕು. ನಮ್ಮ ಬದುಕಿ ನುದ್ದಕ್ಕೂ ಪ್ರತೀ ದಿನ ನಮ್ಮ ಇರುವಿಕೆಗೆ ಕೊಡುಗೆ ನೀಡಿದ ಪ್ರತಿಯೊಬ್ಬರನ್ನೂ ಸ್ಮರಿಸುವುದು ನಮ್ಮ ಕರ್ತವ್ಯ. ನಮ್ಮ ಒಳ್ಳೆಯ ಬಾಳುವೆಗೆ ಬೇಕಾದ ಎಲ್ಲವನ್ನೂ ಸೃಷ್ಟಿ ಒದಗಿಸುತ್ತದೆ. ನಾವು ಒಂದೊಂದು ಹೆಜ್ಜೆ ಇರಿಸುವಾಗ ಭೂಮಿ ಬಿರಿದು ನಮ್ಮನ್ನು ನುಂಗುವುದಿಲ್ಲ. ಪ್ರತೀ ಬಾರಿ ನಾವು ಉಸಿರು ಎಳೆದುಕೊಳ್ಳುವಾಗ ಪ್ರಾಣವಾಯು ನಮ್ಮಿಂದ ತಪ್ಪಿಸಿ ಕೊಂಡು ದೂರ ಓಡಿ ಹೋಗುವುದಿಲ್ಲ. ಈ ಭೂಮಿಯ ಮೇಲಿರುವ ತಾಯಿ- ತಂದೆ ಸಮಾನವಾದ ಕೋಟ್ಯಂತರ ಶಕ್ತಿಗಳು ಅನುಕ್ಷಣವೂ ನಮ್ಮ ಇರುವಿಕೆ ಯನ್ನು ಪೋಷಿಸುತ್ತ ಹೋಗುತ್ತಿವೆ. ನಾವು ಇದಕ್ಕಾಗಿ ಯಾರನ್ನೂ ಕೇಳ ಬೇಕಾಗಿಲ್ಲ; ಯಾವುದಕ್ಕೂ ಚಿಕ್ಕಾಸನ್ನು ಕೂಡ ಕೊಡಬೇಕಾಗಿಲ್ಲ. ಈ ಎಲ್ಲವನ್ನೂ ಸೃಷ್ಟಿ ನಮಗೆ ಅದಾಗಿಯೇ ಒದಗಿಸಿದೆ. ಹಾಗಾಗಿ ತಾನೇ ತಾನಾಗಿ ಸಿಗುತ್ತಿರುವ ಈ ಎಲ್ಲವನ್ನೂ ನೀಡುತ್ತಿರುವ ಎಲ್ಲರಿಗೂ ನಾವು ಅನುಕ್ಷಣವೂ ಕೃತಜ್ಞತೆಯಿಂದ ನಮಿಸಲೇ ಬೇಕು ತಾನೇ! ನಾವು ಬಯಸದೆಯೇ, ನಾವು ಕೇಳದೆಯೇ ದೊರಕುತ್ತಿರುವ ಇವೆಲ್ಲವೂ ಇಲ್ಲದೆ ನಮಗೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ಅತ್ಯಂತ ವಿನಮ್ರತೆಯಿಂದ ನಾವು ತಲೆಬಾಗಲೇ ಬೇಕು.

ಸೃಷ್ಟಿಯನ್ನು ಕೊಂಡಾಡಲು ನಮಗೆ ಮನಸ್ಸು ಬಾರದೆ ಇದ್ದರೆ ನಮ್ಮ ಮನಸ್ಸು, ಭಾವನೆಗಳು ಸತ್ತಿವೆ ಎಂದರ್ಥ. ನಮ್ಮ ತಲೆಯಲ್ಲಿ ತುಂಬಿಕೊಂಡಿರುವ ಮೂರ್ಖತನದಲ್ಲಿ ನಾವು ಮುಳುಗಿ ಹೋಗಿದ್ದೇವೆ ಎಂದರ್ಥ.

ನಮ್ಮ ಬದುಕಿಗೆ ಕಾರಣವಾದ ಸಮಸ್ತ ಸೃಷ್ಟಿಯ ಬಗ್ಗೆ ವಿನಯ, ಕೃತಜ್ಞತೆ ಇಲ್ಲ ಎನ್ನುವುದಾದರೆ ಅದು ಇದೊಂದೇ ಕಾರಣ ದಿಂದ. ನಿನ್ನೆ ಅಪ್ಪಂದಿರ ದಿನ ವಾಗಿರಬಹುದು, ಇವತ್ತು ಅಮ್ಮಂದಿರ ದಿನವಾಗಿರಬಹುದು, ನಾಳೆ ತಾಯಿ ನದಿಯ ದಿನವಾಗಿರ ಬಹುದು, ನಾಡಿದ್ದು ಬೆಟ್ಟ ತಾಯಿಯ ದಿನವಾಗಿರಬಹುದು. ಇಂತಹ ದಿನಾಚರಣೆಗಳು ಏಕೆ ಹುಟ್ಟಿಕೊಳ್ಳುತ್ತವೆ ಎಂದರೆ, ಹಾಗೆ ಮಾಡದೆ ಇದ್ದರೆ ಜನರು ಈ ವಿವಿಧ ತಾಯಿ-ತಂದೆಯಂದಿರನ್ನು ಮರೆತು ಬಿಡುತ್ತಾರೆ.

ಭಾರತೀಯ ಸಂಸ್ಕೃತಿಯಲ್ಲಿ ಮರ ಗಿಡಗಳು, ಕಲ್ಲು ಮಣ್ಣು, ನದಿಗಳು, ಗಾಳಿ, ನೀರು ಪೂಜ್ಯವಾಗಿರುವುದು ಇದೇ ಕಾರಣದಿಂದ. ಅವೆಲ್ಲವೂ ನಮ್ಮ ಬದುಕಿಗೆ ಕೊಡುಗೆ ನೀಡುತ್ತಿವೆ. ಸೃಷ್ಟಿ ಯಲ್ಲಿರುವ ಪ್ರತಿಯೊಂದು ಕೂಡ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಮ್ಮ ಬದುಕನ್ನು, ಜೀವವನ್ನು ಆಧರಿಸಿ ಮುನ್ನಡೆಸುತ್ತಿದೆ. ನಾವು ಹುಟ್ಟಲು, ಬೆಳೆಯಲು ಎಲ್ಲವೂ ಕೊಡುಗೆ ನೀಡಿವೆ. ಇಲ್ಲಿ ಬದುಕಿ ಬಾಳಿದ ಅನಂತರ ಕೊನೆಗೆ ಸೇರುವುದು ಕೂಡ ಈ ಸೃಷ್ಟಿಯ ಗರ್ಭವನ್ನೇ ಅಲ್ಲವೆ!
ನಾವು ಸ್ವಲ್ಪ ಸೂಕ್ಷ್ಮ ಮನಸ್ಕರಾದರೆ ಪ್ರತಿಯೊಂದು ಕೂಡ ನಮ್ಮ ಜೀವ ಧಾರಕವಾಗಿರುವುದನ್ನು ಗುರುತಿಸಲು ಸಾಧ್ಯ. ಒಂದು ಮರವನ್ನು “ಇದು ನನಗೆ ಆಮ್ಲಜನಕ ಒದಗಿಸುತ್ತ ಉಪಕಾರ ಮಾಡುತ್ತಿದೆ’ ಎಂದು ಯೋಚಿಸುತ್ತ ಕಾಣಲು ಸಾಧ್ಯವಿಲ್ಲವೆ? ನಮ್ಮ ಪ್ರತೀ ಹೆಜ್ಜೆಯಲ್ಲೂ ಈ ಗುರುತಿಸುವಿಕೆ ಸಾಧ್ಯವಾದರೆ ಹೊಸ ಅರಿವು ನಮ್ಮಲ್ಲಿ ಉದಯಿಸುತ್ತದೆ.
( ಸಾರ ಸಂಗ್ರಹ)

Advertisement
Advertisement

Udayavani is now on Telegram. Click here to join our channel and stay updated with the latest news.

Next