Advertisement
ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸ ಬೇಕೆಂಬುದು ಇತ್ತೀಚೆಗೆ ಪ್ರಬಲವಾಗುತ್ತಿರುವ ಧ್ವನಿ. ಹಬ್ಬಗಳ ವೈಭವ ಹೆಚ್ಚೆಚ್ಚು ಆಗತೊಡಗಿದಂತೆ ಈ ಧ್ವನಿಯೂ ಅಷ್ಟೇ ದಟ್ಟವಾಗಿ ಕೇಳಿ ಬರತೊಡಗಿದೆ. ವಿಶೇಷವಾಗಿ ಗಣಪತಿ ಉತ್ಸವ, ದೀಪಾವಳಿಯಂಥ ಸಂದರ್ಭದಲ್ಲಿ ಈ ಬಾರಿ ಪರಿಸರ ಪೂರಕವಾಗಿ ಆಚರಿಸೋಣ ಎಂಬ ಪ್ರತಿಜ್ಞೆಗಳನ್ನೂ ಕೈಗೊಳ್ಳಲಾಗು ತ್ತಿದೆ. ಇವೆಲ್ಲವೂ ಭವಿಷ್ಯದ ದೃಷ್ಟಿಯಿಂದ ಸೂಕ್ತವಾದ ಹೆಜ್ಜೆಗಳು ಎನ್ನುವುದಕ್ಕಿಂತ ವರ್ತಮಾನಕ್ಕೇ ಬಹಳ ಪ್ರಮುಖವಾದುದು ಎನ್ನಬಹುದು.
Related Articles
Advertisement
ಬಣ್ಣ ಬೇಡ, ಬಣ್ಣದಂತಿರಬೇಕು ಎಂದುಕೊಂಡರೆ ಬೇರೆ ಉಪಾಯಗಳುಂಟು. ನಾವು ಬಳಸುವ ಅಡುಗೆ ಮನೆಯ ಉಗ್ರಾಣವನ್ನು ಹೊಕ್ಕರೆ ಎಷ್ಟು ಬಣ್ಣ ಬೇಕು? ಅಂದರೆ ಎಷ್ಟು ವೈವಿಧ್ಯಮಯವಾದ ಧಾನ್ಯಗಳು, ಕಾಳುಗಳು ಇವೆಯಲ್ಲವೇ? ಪಚ್ಚ ಹಸುರಿನ ಹೆಸರುಕಾಳಿದೆ, ಕಪ್ಪು ಬೇಕೆಂದರೆ ಉದ್ದಿನಕಾಳು, ಗೋಧಿ ಕಾಳಿನದ್ದೇ ಮತ್ತೂಂದು ಬಣ್ಣ, ರಾಜ್ಮಾ, ಕಡಲೆ ಕಾಳು, ಕೆಂಪು ಕಡಲೆ..ಒಂದೇ ಎರಡೇ. ತಿಳಿ ಕೆಂಪಿನ ಬಣ್ಣ ಬೇಕೆಂದರೆ ಕಡಲೆ ಬೀಜ ಇದ್ದೇ ಇದೆ. ಇವುಗಳನ್ನು ಬಳಸಿದರೆ ಅಲಂಕಾರಿಕವಾಗಿಯೂ ಗಣಪ ಚಿತ್ತಾ ಕರ್ಷಕ. ಹೀಗೆ ವಿವಿಧ ಎಲೆಗಳಿಂದಲೂ ಗಣಪನನ್ನು ಬಣ್ಣದಂತೆಯೇ ಸಿಂಗರಿಸಬಹುದು. ಮರದ ಒಣಗಿದ ಎಲೆಗಳಿಗೂ ಅದ್ಭುತವಾದ ಬಣ್ಣವಿದೆ.
ಹಬ್ಬವೆಂದರೆ ಹೂವುಗಳಿಗೆ ಸ್ಥಾನ ಖಾಯಂ. ಪೂಜೆ ಮುಗಿದ ಮೇಲೆ ರಾಶಿ ರಾಶಿ ಹೂವುಗಳಿದ್ದರೆ ಅಗರಬತ್ತಿ ಕಂಪೆನಿಗೋ, ಸುಗಂಧ ದ್ರವ್ಯ ಮಾಡುವವರಿಗೋ ನೀಡಬಹುದು. ಆದರೆ ಮನೆ ಸಂದರ್ಭ ಎಂದುಕೊಂಡರೆ ಅದಕ್ಕೂ ಉಪಾಯಗಳಿವೆ. ಪೂಜೆ ಮುಗಿದು ವಿಸರ್ಜನೆಗೆ ವಿಗ್ರಹವನ್ನು ಕೊಂಡೊಯ್ಯುವ ಮೊದಲು ಎಲ್ಲ ಹೂವುಗಳನ್ನು ಒಂದೆಡೆ ತೆಗೆದಿಟ್ಟು ಒಣಗಿಸಿ. ಬಳಿಕ ಅವೆಲ್ಲವನ್ನೂ ಒಣಗಿಸಿ ಪುಡಿ ಮಾಡಿಡಿ. ಸಂಜೆ ಹೊತ್ತಿಗೆ ಸೊಳ್ಳೆ ನಿಯಂತ್ರಣಕ್ಕೋ, ಶುಭ ಲಕ್ಷಣಕ್ಕೋ ಲೋಬಾನ ಹೊಗೆ ಹಾಕುತ್ತೀರಿ. ಆಗ ಅದರೊಂದಿಗೆ ಈ ಪುಡಿಯನ್ನೂ ಒಂದೆರಡು ಚಮಚ ಹಾಕಿ. ಕೆಲವೇ ಕ್ಷಣಗಳಲ್ಲಿ ಮನೆ ಸುಗಂಧದಲ್ಲಿ ಮುಳುಗುತ್ತದೆ.
ಗೊಂಡೆ ಹೂವು (ಚೆಂಡು ಹೂ)ಗೊಂಡೆ ಹೂವುಗಳು ಜಾಸ್ತಿ ಇದ್ದರೆ, ಒಣಗಿಸಿ, ಬೀಜ ಹಾಕಿದರೆ ಗಿಡಗಳು ಬೆಳೆಯತ್ತವೆ. ಇದೂ ಸಾಧ್ಯವಾಗದಿದ್ದರೆ ಉಳಿದ ಹೂವುಗಳನ್ನು ಡಬ್ಬದಲ್ಲಿ ಹಾಕಿ, ಅಡಿಯಲ್ಲಿ ತೆಂಗಿನ ಸಿಪ್ಪೆ ಹಾಕಿ. ಬಳಿಕ ಸಗಣಿ ನೀರು ಹಾಕಿ ಹೂವುಗಳನ್ನು ಹಾಕಿ, ಒಂದು ಮುಷ್ಟಿ ಮಣ್ಣು ಹಾಕಿ, ಜತೆಗೆ ಒಂದು ಎರೆಹುಳು ಹಾಕಿ. ಮತ್ತೆ ಸ್ವಲ್ಪ ತೆಂಗಿನಕಾಯಿ ಸಿಪ್ಪೆ ಹಾಕಿ. 15 ದಿನದಲ್ಲಿ ಗೊಬ್ಬರ ಸಿದ್ಧ. ಅದನ್ನು ಹೂವು ಗಿಡ, ಹಣ್ಣಿನ ಗಿಡಕ್ಕೂ ಹಾಕಬಹುದು. ಇಷ್ಟೆಲ್ಲ ಸಮಯವಿಲ್ಲ ಎಂದುಕೊಳ್ಳೋಣ. ಆಗ ಯಾವುದಾದರೂ ಒಂದು ಗಿಡದ ಬುಡಕ್ಕೆ ಹಾಕಿ. ನಿಧಾ ನವಾಗಿ ಗೊಬ್ಬರವಾಗುತ್ತದೆ.
ಉತ್ಸವಗಳಲ್ಲಿ ಹೆಚ್ಚು ಆಹಾರ ಉಳಿದರೆ ಕೆಲವು ಆಶ್ರಮ, ಕಾಲನಿಗಳಿಗೆ ನೀಡಿದರೆ ಬಳಸುವವರಿದ್ದಾರೆ. ಆದರೆ ಮೊದಲೇ ಇವುಗಳನ್ನು ಪತ್ತೆ ಹಚ್ಚಿಟ್ಟು ಕೊಂಡಿರಬೇಕು ಮೊದಲೇ ಅವರೊಂದಿಗೆ ಮಾತನಾಡುವುದು ಸೂಕ್ತ. ಆದರೆ ಕೊಡುವಾಗ ಬಿಸಿ ಮಾಡಿ ಕೊಟ್ಟರೆ ಉತ್ತಮ. ಇದರೊಂದಿಗೆ ಆಲಂಕಾರಕ್ಕೆ ಬಣ್ಣದ ಕಾಗದ ಕಟ್ಟುವ ಬದಲು ಬಟ್ಟೆಯನ್ನು ಬಳಸಿದರೆ, ಅವುಗಳನ್ನು ಮುಂದಿನ ವರ್ಷವೂ ಬಳಸಬಹುದು. ರವಿಕೆ ಬಟ್ಟೆಯಲ್ಲಿ ತೋರಣ ಇತ್ಯಾದಿ ಮಾಡಬಹುದು. ಕಸೂತಿ ಕಲೆಯನ್ನೂ ಇದಕ್ಕೆ ಬಳಸಿದರೆ ಇನ್ನೂ ಸುಂದರ.ಅವುಗಳನ್ನು ನಾವು ಮುಂದಿನ ವರ್ಷಕ್ಕೂ ಬಳಸಬಹುದು. ಎರಡು ದಿನದೊಳಗೆ ಹಬ್ಬ ಹತ್ತಿರವಾಗುತ್ತದೆ. ವರ್ಷಪೂರ್ತಿ ಹಬ್ಬಗಳು. ಪರಿಸರ ಸ್ನೇಹಿಯಾಗಿ ಆಚರಿಸಿಕೊಳ್ಳುವ ಮೂಲಕ ಹಬ್ಬಗಳಿಗೇ ಬಣ್ಣ ತುಂಬೋಣ.
ಪ್ರಮೀಳಾ, ಮಂಗಳೂರು