ಒಂದು ಕಡೆ ಶಾಂತವಾಗಿ ಹರಿಯುವ ನದಿ, ಇನ್ನೊಂದೆಡೆ ಸಮುದ್ರ. ನಡುವೆ ತೆಂಗಿನ ತೋಟದೊಳಗೆ ಮನೆಗಳ ಸಾಲು. ಅದರ ಮಧ್ಯದಲ್ಲಿ ಕಾಂಕ್ರೀಟ್ ರೋಡ್. ಇದು ಉಡುಪಿಯ ಕೋಡಿಬೇಂಗ್ರೆ ಬೀಚ್‌ನ ಸೌಂದರ್ಯ ವೈಶಿಷ್ಟ್ಯ. ಉಡುಪಿ ಜಿಲ್ಲೆಯಲ್ಲಿ ಹಲವು ಬೀಚ್‌ಗಳಿವೆ. ಕಾಪು, ಮಲ್ಪೆ ಮಟ್ಟು ಮುಂತಾದ ಬೀಚ್‌ಗಳು ಸಾಮಾನ್ಯವಾಗಿ ತಿಳಿದಿರುವ ಬೀಚ್‌ಗಳೇ. ಆದರೆ ಅಷ್ಟೊಂದು ಜನಪ್ರಿಯತೆ ಹೊಂದಿರದ ಕೋಡಿಬೇಂಗ್ರೆ ಬೀಚ್‌ಗೆ ಒಮ್ಮೆ ಭೇಟಿ ನೀಡಲೇಬೇಕು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲಲೇಬೇಕು.
ಈ ಕೋಡಿಬೇಂಗ್ರೆ ಬೀಚ್ ಸುವರ್ಣ ನದಿ ಮತ್ತು ಅರಬ್ಬೀ ಸಮುದ್ರದ ಸಂಗಮ ಸ್ಥಳವಾಗಿದೆ. ನದಿಯೂ ಕಡಲೂ ಶಾಂತವಾಗಿರುವ ಈ ರಮಣೀಯ, ಸುಂದರ ಪ್ರದೇಶದಲ್ಲಿ ಮಧ್ಯದಲ್ಲಿರುವ ಕಾಂಕ್ರೀಟ್ ರೋಡಿನಲ್ಲಿ ಕಾಲು ನಡಿಗೆಯಲ್ಲಿ ಸಾಗಿ ಕೋಡಿಬೇಂಗ್ರೆ ಸಂಗಮ ಸ್ಥಳಕ್ಕೆ ಹೋಗುವುದೇ ಒಂದು ರೋಮಾಂಚನ.
ಏಕಾಂತ ಬಯಸುವವರಿಗೆ ಈ ಬೀಚ್ ಉತ್ತಮ ಸ್ಥಳ. ಅಷ್ಟೊಂದು ಸದ್ದುಗದ್ದಲ ಇಲ್ಲದ ಈ ಪ್ರದೇಶದಲ್ಲಿ ಹಕ್ಕಿಗಳ ಚಿಲಿಪಿಲಿ, ದೂರದಲ್ಲಿ ಬಲೆ ಬೀಸುತ್ತಿರುವ ಮೀನುಗಾರರು, ಇನ್ನೊಂದು ಕಡೆಯಲ್ಲಿ ಏಕಾಗ್ರತೆಯಿಂದ ಮೀನಿಗೆ ಗಾಳ ಹಾಕುವ ಮಂದಿ, ಹಸುರು ಪರಿಸರ- ಇವೆಲ್ಲ ಬದುಕಿಗೆ ಜೀವನೋಲ್ಲಾಸವನ್ನು ತಂದು ಕೊಡುತ್ತದೆ. ಇನ್ನೂ ಮಧ್ಯಾಹ್ನದ ಹೊತ್ತಿಗೆ ಸಮಯವನ್ನು ಶಾಂತಿಯುತವಾಗಿ ಕಳೆಯಲು ಇಷ್ಟಪಡುವುದಾದರೆ ಈ ಸ್ಥಳ ಅದ್ಭುತವಾಗಿದೆ.
ಮಂಗಳೂರಿನಿಂದ ಉಡುಪಿಗೆ ಬಂದು ಅಲ್ಲಿನದ ಕೋಡಿಬೇಂಗ್ರೆ ಬೀಚ್ ಉಡುಪಿಯಿಂದ 18 ಕಿ.ಮೀ. ದೂರದಲ್ಲಿದೆ. ಖಾಸಗಿ ವಾಹನದಲ್ಲಾದರೆ ಉಡುಪಿಯಿಂದ ಅರ್ಧ ಗಂಟೆ ಪ್ರಯಾಣ. ಬಸ್‌ಗಳು ಕೂಡ ಇವೆ. ಮಲ್ಪೆ ಬೀಚ್‌ನಿಂದ ಹೋಗುವುದಾರೆ 10 ಕಿ.ಮೀ. ದೂರವಿದೆ.
ಬೋಟ್ ಹೌಸ್
ಇನ್ನು ನೀವು ಬೋಟ್ ಹೌಸ್‌ನಲ್ಲಿ ಸಂಚರಿಸಲು ಕೇರಳಕ್ಕೆ ಹೋಗಬೇಕಾಗಿಲ್ಲ. ಇಲ್ಲಿ ಅದಕ್ಕೆ ವ್ಯವಸ್ಥೆ ಇದೆ. ಬೋಟ್ ಹೌಸ್‌ನಲ್ಲಿ ಪ್ರಯಾಣಿಸಿ ನದಿ ಮಧ್ಯದಲ್ಲಿರುವ ಕುದ್ರು (ದ್ವೀಪ) ಗಳನ್ನು ನೋಡಬಹುದು. ನೀವು ಒಂದು ವೇಳೆ ಮೀನು ಪ್ರಿಯರಾಗಿದ್ದರೆ ಇಲ್ಲಿ ನಿಮಗೆ ವಿವಿಧ ಬಗೆಯ ರುಚಿಕರ ಮೀನಿನ ಖಾದ್ಯಗಳು ಸವಿಯಲು ಲಭ್ಯ. ಹತ್ತಿರದಲ್ಲಿ ಕೆಮ್ಮನ್ನು ಹ್ಯಾಂಗಿಂಗ್ ಬ್ರಿಜ್ ಇದೆ. ಇದು ಕೂಡ ಪ್ರಕೃತಿ ಮಧ್ಯದಲ್ಲಿ ಸುಂದರವಾಗಿ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಪೋಟೋಗ್ರಫಿ ಮಾಡಬಯಸುವವರಿಗೆ ಈ ಹ್ಯಾಂಗಿಂಗ್ ಬ್ರಿಜ್ ಹೇಳಿ ಮಾಡಿಸಿದ ಸ್ಥಳ. ಒಟ್ಟಿನಲ್ಲಿ ನಿಮ್ಮ ಒಂದು ದಿನದ ರಜೆಯನ್ನು ಎಂಜಾಯ್ ಮಾಡಲು ಇದು ಸೂಕ್ತ ಸ್ಥಳ.
ಪೂರ್ಣಿಮಾ ಪೆರ್ಣಂಕಿಲ