ಹೆಬ್ರಿ : ಕರಾವಳಿಯ ರಂಗಾಯಣ ಉಡುಪಿಯಲ್ಲೇ ಮತ್ತೆ ಆರಂಭವಾಗಬೇಕು. ನಾಟಕ ರಂಗಭೂಮಿ ಯಲ್ಲಿ ಹಗಲಿರುಳು ಸೇವೆ ಮಾಡುವ “ನಮ ತುಳುವೆರ್’ ಕಲಾ ಸಂಘಟನೆಯಂತಹ ರಂಗಸೇವೆ ಮಾಡುವ ಸಂಸ್ಥೆಗಳು ಹೋರಾಟದ ಮುಂದಾಳತ್ವ ವಹಿಸಬೇಕು ಎಂದು ಹಿರಿಯ ರಂಗನಿರ್ದೇಶಕ ಗೋಪಾಲಕೃಷ್ಣ ನಾಯರಿ ಹೇಳಿದರು.
ಅವರು ಮುದ್ರಾಡಿ “ನಮ ತುಳುವೆರ್’ ಕಲಾ ಸಂಘಟನೆಯ ವತಿಯಿಂದ ನಾಟ್ಕದೂರಿನ ಆರೂರು ಕೃಷ್ಣಮೂರ್ತಿ ರಾವ್ ಬಯಲು ರಂಗಸ್ಥಳದಲ್ಲಿ ನಡೆಯುತ್ತಿರುವ ನಾಟ್ಕಸ್ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮುದ್ರಾಡಿ ಎಂದರೆ ಕಲೆ ಆರಾಧನೆಯ ಉಪಾಸನೆ. ಎಲ್ಲ ಕೊರತೆಗಳ ನಡುವೆಯೂ ನಮ ತುಳುವೆರ್‌ಕಲಾ ಸಂಘಟನೆ ನಿರಂತರ ರಂಗ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರಿಗೆ ಗಿಡ ನೀಡುವ ಮೂಲಕ ಗೌರವಿಸಲಾಯಿತು.
ಮೇಕ್‌ಸಮ್ ವನ್ ಸ್ಮೈಲ್ ಸಂಸ್ಥೆ ಕಾರ್ಕಳ ಇವರಿಗೆ “ನಾಟ್ಕ ಸೇವಾ ಸಂಮಾನ್’ ಪ್ರದಾನ ಮಾಡಲಾಯಿತು. ಹಿರಿಯ ರಂಗ ನಿರ್ದೇಶಕ ಗುರುರಾಜ ಮಾರ್ಪಳ್ಳಿ, ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ಗಣಪತಿ ಮುದ್ರಾಡಿ, ಸಂಚಾಲಕ ಧರ್ಮಯೋಗಿ ಮೋಹನ್, ಉಮೇಶ್ ಕಲ್ಮಾಡಿ, ಸುರೇಂದ್ರ ಮೋಹನ್, ದೀಕ್ಷಾ, ಹೆಬ್ರಿ ಜೇಸಿಐ ಅಧ್ಯಕ್ಷ ಮಂಜುನಾಥ ಶಿವಪುರ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ರಂಗ ನಿರ್ದೇಶಕ ಗುರುರಾಜ ಮಾರ್ಪಳ್ಳಿ ನಿರ್ದೇಶನದ “ಅವ್ವ ನನ್ನ ಅವ್ವ’ ಕನ್ನಡ ನಾಟಕ ಪ್ರದರ್ಶನಗೊಂಡಿತು.