Advertisement

ಸ್ಥಳೀಯರು, ಜನಪ್ರತಿನಿಧಿಗಳಿಲ್ಲದ ನೆರೆ ನಿರ್ವಹಣಾ ಸಮಿತಿ

06:00 AM Jul 01, 2018 | Team Udayavani |

ಉಡುಪಿ: ನೆರೆ ಬಂದರೆ  ಅಗತ್ಯ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವ ಉದ್ದೇಶದಿಂದ ಸ್ಥಳೀಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಪ್ರತಿವರ್ಷ ರಚಿಸಲಾಗುತ್ತಿತ್ತು. ಆದರೆ ಈ ಬಾರಿ ಇಂತಹ ಸಮಿತಿಯನ್ನೇ ರಚಿಸಿಲ್ಲ ಎಂದು ಜಿ.ಪಂ ಸದಸ್ಯರು ದೂರಿದ್ದಾರೆ.

Advertisement

ಜೂ.30ರಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರ ಅಧ್ಯಕ್ಷತೆಯಲ್ಲಿ ಜರಗಿದ ಜಿ.ಪಂ. ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಜನಾರ್ದನ ತೋನ್ಸೆ ಅವರು “ಮುಳುಗು ತಜ್ಞರು, ದೋಣಿಯವರು, ಸ್ಥಳೀಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಒಳಗೊಂಡ ಒಂದು ಸಮಿತಿಯನ್ನು ಗ್ರಾಮಮಟ್ಟದಲ್ಲಿ ರಚಿಸಲಾಗುತ್ತಿತ್ತು.  ಆದರೆ ಈ ಬಾರಿ ಇಂತಹ ಸಮಿತಿ ರಚಿಸಿಲ್ಲ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ ಶಿವಾನಂದ ಕಾಪಶಿ “ಸಮಿತಿ ರಚನೆ ಆಗಿದೆ’ ಎಂದರು. ಇದನ್ನು ಒಪ್ಪದ ತೋನ್ಸೆಯವರು “ಎಲ್ಲಿ ಸಮಿತಿ ಮಾಡಿದ್ದೀರಿ?’ ಎಂದು ಪ್ರಶ್ನಿಸಿದರು. ಆಗ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಅವರು ಮಾತನಾಡಿ “ಅಧಿಕಾರಿಗಳ ಸಮಿತಿ ರಚನೆಯಾಗಿದೆ’ ಎಂದು ಹೇಳಿದರು. 

ಇದರಿಂದ ತೀವ್ರ ಅಸಮಾಧಾನಗೊಂಡ ತೋನ್ಸೆಯವರು “ಜನಪ್ರತಿನಿಧಿಗಳನ್ನು ಕತ್ತಲೆಯಲ್ಲಿಟ್ಟು ಅಧಿಕಾರಿಗಳು ಸಭೆ ನಡೆಸಿದ್ದಾರೆ ಎಂದರು. ಇದಕ್ಕೆ ಇತರ  ಸದಸ್ಯರು ಕೂಡ ದನಿಗೂಡಿಸಿದರು. “ಎರಡು ದಿನಗಳಲ್ಲಿ ಹೊಸ ಸಮಿತಿ ರಚಿಸಿ’ ಎಂದು ಅಧ್ಯಕ್ಷ ದಿನಕರ ಬಾಬು ಅವರು ಅಧಿಕಾರಿಗಳಿಗೆ ಸೂಚಿಸಿ ಈ ಕುರಿತಾದ ಚರ್ಚೆಗೆ ತೆರೆ ಎಳೆದರು.

ಹೆದ್ದಾರಿ: ಅಧಿಕಾರಿ- ಪರಿಹಾರ ಎರಡೂ ಇಲ್ಲ
ರಾಷ್ಟ್ರೀಯ ಹೆದ್ದಾರಿ 66ರ ದುಸ್ಥಿತಿ ಬಗ್ಗೆ ಸಭೆಯಲ್ಲಿ ಭಾರೀ ಆಕ್ರೋಶವೇ ವ್ಯಕ್ತವಾಯಿತು. “ಕಲ್ಯಾಣಪುರ ಸಂತೆಕಟ್ಟೆ ಜಂಕ್ಷನ್‌ ಅವ್ಯವಸ್ಥೆ,  ಪಾದಚಾರಿಗಳು ರಸ್ತೆ ದಾಟಲು ಫ‌ೂಟ್‌ ಓವರ್‌ ಬ್ರಿಡ್ಜ್  ಬೇಕು. ಸದ್ಯದ ಸಮಸ್ಯೆಗಳಿಗೆ ಪರಿಹಾರವೇನು?’ ಎಂದು ಜನಾರ್ದನ ತೋನ್ಸೆ ಪ್ರಶ್ನಿಸಿದರು. ಹಲವು ಸದಸ್ಯರು  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಹೆದ್ದಾರಿ ಇಲಾಖೆಯ ಅಧಿಕಾರಿಗಳ ಬದಲು ಕನ್ಸಲ್ಟೆಂಟ್‌(ಖಾಸಗಿ) ಎಂಜಿನಿಯರ್‌ ಸಭೆಗೆ ಆಗಮಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು.

Advertisement

ಮಾನಿಟರಿಂಗ್‌ ಕಮಿಟಿ 
ಜಿ.ಪಂ. ಸಿಇಒ ಪ್ರತಿಕ್ರಿಯಿಸಿ  ಹೆದ್ದಾರಿ ಅಧಿಕಾರಿಗಳ ಸಭೆಯಲ್ಲಿ ಎಸ್‌ಪಿ, ಡಿಸಿ, ಎಂಜಿನಿ ಯರ್‌ಗಳನ್ನು ಒಳಗೊಂಡ ಮಾನಿಟರಿಂಗ್‌ ಕಮಿಟಿಯನ್ನು ರಚಿಸಲಾಗಿದೆ. ಮೊದಲ ಕೆಲವು ಯೋಜನೆ ಪೂರ್ಣಗೊಳಿಸಿ ಸೂಚಿಸಿದ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.ಇದಕ್ಕೆ ಶಾಸಕರು, ಸದಸ್ಯರು ತೃಪ್ತರಾಗಲಿಲ್ಲ. ಕಾಮಗಾರಿ ಸಾಧ್ಯವಾಗದಿದ್ದರೆ ಟೋಲ್‌ ಸಂಗ್ರಹ ನಿಲ್ಲಿಸಲಿ ಎಂದರು. 
 
ರೇಷನ್‌ಕಾರ್ಡ್‌ ರಾಜ್ಯಮಟ್ಟದ ಸಮಸ್ಯೆ 
“ವಿಧಾನಸಭಾ ಚುನಾವಣೆ ಸಂದರ್ಭ ಸ್ಥಗಿತಗೊಂಡ ರೇಷನ್‌ ಕಾರ್ಡ್‌ನ ಎಲ್ಲಾ ಪ್ರಕ್ರಿಯೆ ಪುನರಾರಂಭಗೊಂಡಿಲ್ಲ’ ಎಂದು ಸದಸ್ಯರು ಸಭೆಯ ಗಮನ ಸೆಳೆದರು. ಇದಕ್ಕೆ ಸಾಫ್ಟ್ವೇರ್‌ ಕಾರಣ ವಿಳಂಬವಾಗಿದೆ ಎಂಬ ಉತ್ತರವನ್ನು ಅಧಿಕಾರಿಗಳು ನೀಡಿದರು. ಇದಕ್ಕೂ ಆಕ್ಷೇಪ ವ್ಯಕ್ತವಾಯಿತು. 

35ರ ಬದಲು 8 ಕೆಜಿ ಅಕ್ಕಿ
ಗೌರಿ ದೇವಾಡಿಗ ಅವರು ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕುಟುಂಬಕ್ಕೆ 35 ಕೆ.ಜಿ. ಅಕ್ಕಿ ಬದಲಿಗೆ  ಕೆಲ ಕುಟುಂಬಕ್ಕೆ 8 ಕೆ.ಜಿ ಮಾತ್ರ ದೊರೆಯುತ್ತಿದೆ ಎಂದರು. ಆ ಕುಟುಂಬದ ಮಾಹಿತಿ ನೀಡಲು ಅಧಿಕಾರಿಗಳು ತಿಳಿಸಿದರು. 

ಖಾಸಗಿ ನಿರ್ವಹಣೆಗೆ  ಆ.ಕೇಂದ್ರ: ಸಲಹೆ 
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ವೈದ್ಯರು, ಆರೋಗ್ಯ ಸಿಬಂದಿಯ ಕೊರತೆ ಇದೆ. ಜನರಿಗೆ ತೀವ್ರ ತೊಂದರೆಯಾಗಿದೆ. ಇಂತಹ ಸಮಸ್ಯೆಗೆ ಕೆಎಂಸಿಯಂತಹ ಸಂಸ್ಥೆಗಳಿಗೆ ವಹಿಸಿಕೊಡಬಹುದು.ನಿರ್ವಹಣೆಯನ್ನು ಅವರು ಸಾಮಾಜಿಕ ಜವಾಬ್ದಾರಿಯ ನೆಲೆಯಲ್ಲಿ ಮಾಡಬಹುದು ಎಂದು ರಘುಪತಿ ಭಟ್‌ ಹೇಳಿದರು.ಈ ಕುರಿತು ನಿರ್ಣಯ ತೆಗೆದುಕೊಳ್ಳಲು ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು. 

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಶಶಿಕಾಂತ ಪಡುಬಿದ್ರಿ ಉಪಸ್ಥಿತರಿದ್ದರು. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌ ಸಭೆ ನಿರ್ವಹಿಸಿದರು. ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಅವರನ್ನು, ನೂತನ ಶಾಸಕರನ್ನು ಸಮ್ಮಾನಿಸಲಾಯಿತು.  

ಮಳೆಹಾನಿ ಪರಿಹಾರ ಮೊತ್ತ ಹೆಚ್ಚಿಸಿ
ತೆಂಗಿನ ಮರ ಮನೆ ಮೇಲೆ ಬಿದ್ದರೆ “ಕೇವಲ ಹೆಂಚುಗಳು ಹಾನಿಯಾಗಿವೆ’ ಎಂದು ಅಧಿಕಾರಿಗಳು ವರದಿ ನೀಡಬಾರದು. ಒಂದು ಮರ ಬಿದ್ದರೆ ಇಡೀ ಮನೆಯ ಗೋಡೆಗೆ ಹಾನಿಯಾಗುತ್ತದೆ. ಇದರಿಂದ ಮನೆಗೆ ಪೂರ್ಣ ಹಾನಿಯಾದಂತೆ ಎಂದು ಜನಾರ್ದನ ತೋನ್ಸೆ ಹೇಳಿದರು. ಇಂತಹ ಸಂದರ್ಭದಲ್ಲಿ ಮನೆಗೆ ಪೂರ್ಣ ಹಾನಿಯಾಗಿದೆ ಎಂಬುದಾಗಿಯೇ ವರದಿ ನೀಡಬೇಕು ಎಂದು ಶಾಸಕ  ರಘುಪತಿ ಭಟ್‌ ಹಾಗೂ ಇತರ ಹಲವು ಮಂದಿ ಸದಸ್ಯರು ಒತ್ತಾಯಿಸಿದರು. ಮನೆಯ ಆವರಣ ಗೋಡೆ ಹಾನಿಯಾದರೂ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಮಳೆಹಾನಿಯಿಂದ ಆಗುವ ನಷ್ಟಕ್ಕೆ ಗರಿಷ್ಠ ಪರಿಹಾರ ನೀಡಬೇಕು ಎಂದು ಸದಸ್ಯರು ಹೇಳಿದರು.

ಕಾರ್ಕಳ ಮುಂಡ್ಲಿ ಜಲಾಶಯದಿಂದ ನೆರೆಯುಂಟಾಗಿ ನಷ್ಟ ಆದವರಿಗೆ ಕೂಡಲೇ ಪರಿಹಾರ ನೀಡಬೇಕು. ಹಾನಿಯಾದ ರಸ್ತೆಯನ್ನು ಶಾಶ್ವತವಾಗಿ ಪುನರ್‌ ನಿರ್ಮಿಸಬೇಕು ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next