Advertisement

ರಾಷ್ಟ್ರೀಕೃತ ಬ್ಯಾಂಕ್‌ ಸಾಲಮನ್ನಾ ನಾಡಿದ್ದು

05:15 AM Aug 14, 2018 | |

ಹಾಸನ: ರೈತರು ಸಹಕಾರಿ ಸಂಘಗಳಲ್ಲಿ ಮಾಡಿದ್ದ 10,734 ಕೋಟಿ ರೂ. ಬೆಳೆಸಾಲದ ಪೈಕಿ 9,448 ಕೋಟಿ ರೂ. ಮನ್ನಾ ಮಾಡಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಇನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲದಲ್ಲಿ 2 ಲಕ್ಷರೂ.ವರೆಗಿನ ಸಾಲವನ್ನು ಮನ್ನಾ ಮಾಡುವ ಆದೇಶವನ್ನು ಗುರುವಾರ(ಆ.16) ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಕಟಿಸಿದರು.

Advertisement

ಹರದನಹಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ
ಮಾಡಿರುವ ಕೃಷಿ ಸಾಲ 32,000 ಕೋಟಿ ರೂ. ಇದೆ. ಆ ಪೈಕಿ 2 ಲಕ್ಷ ರೂ.ವರೆಗೆ ಸುಸ್ತಿಸಾಲವನ್ನು ಮನ್ನಾ ಮಾಡಲು ನಿರ್ಧರಿಸಿರುವ ಸರ್ಕಾರ, ಸಾಲದ ಮೊತ್ತವನ್ನು 4 ಕಂತುಗಳಲ್ಲಿ ಬ್ಯಾಂಕುಗಳಿಗೆ ತುಂಬಿಕೊಡಲು ತೀರ್ಮಾನಿಸಿದೆ. ಮೊದಲ ಕಂತಿನ 6,500 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿಯೇ ತೆಗೆದಿರಿಸಲಾಗಿದೆ.ಮುಂದಿನ ವರ್ಷದ ಬಜೆಟ್‌ನಲ್ಲಿ ಇನ್ನುಳಿದ 3 ಕಂತುಗಳ ಮೊತ್ತವನ್ನು ತೆಗೆದಿರಿಸಲು ಚಿಂತನೆ ನಡೆಸಿದ್ದೇನೆ ಎಂದರು.

ಸಾಲಮನ್ನಾ ಮಾಡಲು ನಾನೇನು ಜಾದೂ ಮಾಡುತ್ತಿಲ್ಲ. ಸರ್ಕಾರದ ಆದಾಯ ಸೋರಿಕೆ ತಡೆಯುವ ಪ್ರಯತ್ನ ಮಾಡಿ
ಅದರಲ್ಲಿನ ಉಳಿತಾಯವನ್ನು ಸಾಲಮನ್ನಾಕ್ಕೆ ಬಳಸಲಾಗುವುದು ಎಂದ ಅವರು, ಅಬಕಾರಿ ತೆರಿಗೆಯಲ್ಲಿ ಶೇ.7.8 ಸಂಗ್ರಹ ಹೆಚ್ಚಳವಾಗಿದೆ. ಜಿಎಸ್‌ಟಿ ಪಾಲಿನಲ್ಲಿ ಎಷ್ಟು ಸಂಗ್ರಹವಾಗುತ್ತದೆ ಎಂಬುದರ ಬಗ್ಗೆ ಲೆಕ್ಕಾಚಾರ ಮಾಡಲಾಗುತ್ತಿದೆ. ಆರ್ಥಿಕ ಶಿಸ್ತಿಗೆ ಧಕ್ಕೆಯಾಗದಂತೆ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೋಢೀಕರಿಸಲಾಗುತ್ತಿದೆ ಎಂದು ಹೇಳಿದರು.

ಮರಳು ನೀತಿ ಬದಲಾವಣೆ: ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮರಳು ನೀತಿಯಲ್ಲಿ ಬದಲಾವಣೆ
ತರಲಾಗುವುದು. ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ನೀತಿ ರೂಪಿಸಿ, ಜನ ಸಾಮಾನ್ಯರು
ಮನೆ ನಿರ್ಮಿಸಿಕೊಳ್ಳಲು, ಆಶ್ರಯ ಮನೆ, ಶೌಚಾಲಯ ನಿರ್ಮಾಣಕ್ಕೆ ಸುಲಭವಾಗಿ ಮರಳು ಸಿಗುವಂತೆ ಮಾಡಲಾಗುವುದು ಎಂದರು.

ಆಲಮಟ್ಟಿಗೆ ಮುಂದಿನ ವಾರ ಭೇಟಿ: ಆಲಮಟ್ಟಿಗೆ ಮುಂದಿನವಾರ ಭೇಟಿ ನೀಡಿ ಬಾಗಿನ ಅರ್ಪಿಸುವೆ ಎಂದ ಅವರು, ಬೆಳಗಾವಿಗೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರ ಮಾಡುವ ಸಂಬಂಧ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ
ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದರು.

Advertisement

ದೇವೇಗೌಡರ ಪರಿವಾರದ ಪೂಜೆ
ಸಿಎಂ ಕುಮಾರಸ್ವಾಮಿ ದಂಪತಿ ಸಹಿತ ಮಾಜಿ ಪ್ರಧಾನಿ ಎಚ್‌. ಡಿ.ದೇವೇಗೌಡರ ಪರಿವಾರ ಹುಟ್ಟೂರು ಹರದನಹಳ್ಳಿ ಈಶ್ವರ ದೇವಾಲಯ ಹಾಗೂ ಹೊಳೆನರಸೀಪುರದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಲ್ಲಿ ಶ್ರಾವಣಮಾಸದ ಪ್ರಥಮ ಸೋಮವಾರದ ಪೂಜೆ ನೆರವೇರಿಸಿದರು.

ಭಾನುವಾರ ರಾತ್ರಿಯೇ ಹಾಸನಕ್ಕೆ ಬಂದು ತಂಗಿದ್ದ ದೇವೇಗೌಡ ದಂಪತಿ ಹಾಗೂ ಕುಮಾರಸ್ವಾಮಿ ದಂಪತಿ ಸೋಮವಾರ ಮುಂಜಾನೆ 7 ಗಂಟೆಗೆ ಹರದನಹಳ್ಳಿಯ ಈಶ್ವರ ದೇವಾಲಯಕ್ಕೆ ಆಗಮಿಸುವ ವೇಳೆಗೆ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ನೇತೃತ್ವದಲ್ಲಿ ಪೂಜಾ ಕಾರ್ಯದ ಸಿದ್ಧತೆ ನಡೆದಿತ್ತು. ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೂ ಎಚ್‌.ಡಿ.ದೇವೇಗೌಡ, ಚನ್ನಮ್ಮ, ಎಚ್‌.ಡಿ.ಕುಮಾರಸ್ವಾಮಿ, ಅನಿತಾ ಮತ್ತು ಎಚ್‌.ಡಿ.ರೇವಣ್ಣ ಪೂಜೆ ಸಲ್ಲಿಸಿದರು. ಬಳಿಕ ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಹರದನಹಳ್ಳಿಯ ದೇವಾಲಯದಲ್ಲಿ ರೇವಣ್ಣ, ನಗರ ಸ್ಥಳೀಯ ಸಂಸ್ಥೆಗಳ ಚುನಾವನೆಗೆ ಜೆಡಿಎಸ್‌ ವಿತರಿಸಲಿರುವ ಬಿ ಫಾರಂ ಮತ್ತು ಇತರೆ ದಾಖಲೆಗಳಿಗೂ ಪೂಜೆ ಮಾಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next