ಮಹಾನಗರ: ವಿದ್ಯೆ ಹಾಗೂ ಅನ್ನದಾನವು ಶ್ರೇಷ್ಠ ದಾನವಾಗಿದ್ದು, ಅಷ್ಟೇ ಪ್ರಾಮುಖ್ಯತೆಯನ್ನು ಮತದಾನವೂ
ಹೊಂದಿದೆ. ಮತದಾನದ ಮೂಲಕ ರಾಜ್ಯ-ದೇಶ ಸುಸ್ಥಿತಿಗೆ ಬರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ
ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಬೀಳಗಿ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಮಂಗಳೂರು ಪುರಭವನದಲ್ಲಿ ಗುರುವಾರ ಆಯೋಜಿಸಲಾದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜಾತಿ, ಧರ್ಮ ಸೇರಿದಂತೆ ವೈಯಕ್ತಿಕ ಹಿತಾಸಕ್ತಿಯನ್ನು ಪರಿಗಣಿಸದೆ ಯೋಗ್ಯರನ್ನು ಆಯ್ಕೆ ಮಾಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಸದೃಢ ರಾಜ್ಯ ಹಾಗೂ ದೇಶ ಕಟ್ಟುವ ನೆಲೆಯಲ್ಲಿ ನಾವು ಮಾಡುವ ಮತದಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ದೇಶದ ಒಟ್ಟು ಅಭಿವೃದ್ಧಿಗೆ ವೇದಿಕೆ ಒದಗಿಸುವ ಮತದಾನದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್.ರವಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾರರ ದಿನಾಚರಣೆ ಹಿನ್ನೆಲೆಯಲ್ಲಿ ಈ ಹಿಂದೆ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ, ಮಂಗ ಳೂರು ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್, ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ಹೆಬ್ಟಾರ್ ಸಿ. ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಸಹಾಯಕ ಆಯುಕ್ತ ಎ.ಸಿ.ರೇಣುಕಾ ಪ್ರಸಾದ್ ವಂದಿಸಿದರು. ಉಮೇಶ್ ನಿರೂಪಿಸಿದರು.
ವ್ಯವಸ್ಥೆ ಸರಿಪಡಿಸಲು ಪ್ರಯತ್ನಿಸಿ
ಒಟ್ಟು ವ್ಯವಸ್ಥೆ ಸರಿ ಇಲ್ಲ. ಅದು ಹಾಗಾಬೇಕು-ಹೀಗಾಗಬೇಕು ಎಂದು ಪ್ರತಿನಿತ್ಯ ಮಾತನಾಡುವವರು ಮತದಾನ ಮಾಡುವ ಮೂಲಕ ವ್ಯವಸ್ಥೆ ಸರಿಪಡಿಸುವ ನೆಲೆಯಲ್ಲಿ ಪ್ರಯತ್ನಿಸಬೇಕು. ಬೂತ್ ಮಟ್ಟದ ಅಧಿಕಾರಿಯು ಮತದಾರರನ್ನು ಸಂಪರ್ಕಿಸುವ ನೆಲೆಯಲ್ಲಿ ಯಶಸ್ವಿ ಸೇವೆ ಸಲ್ಲಿಸುತ್ತಿದ್ದಾರೆ.
– ಡಾ| ಶಶಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ