Advertisement

National Tourism Day: ಬಿಸಿಲನಗರಿಯಿಂದ ಕಡಲಿನೆಡೆಗೆ

04:08 PM Jan 25, 2024 | Team Udayavani |

ಅಂದು ನಾನು ಮನೆಯಲ್ಲಿ ಸಹೋದರರ ಮದುವೆ ಮುಗಿಸಿ ಕರಾವಳಿ ಕರ್ನಾಟಕದ ವಿಶ್ವವಿದ್ಯಾನಿಲಯದೆಡೆಗೆ ಪಯಣ ಬೆಳೆಸುತ್ತಿದ್ದೆ. ಮನೆಯಲ್ಲಿ ಸಡಗರದ ವಾತಾವರಣ ರುಚಿರುಚಿಯಾದ ತಿಂಡಿಗಳನ್ನು ಅಮ್ಮ ತಯಾರಿಸುತ್ತಿದ್ದರೆ ಬೆಳಗಿನ ಜಾವ ಎದ್ದು ಬಹುದೂರ ಹೊರಡವ ಅಣ್ಣನ ಗಾಡಿ ಸರಿಯಾಗಿ ಇದೆಯೇ ಎಂದು ತಮ್ಮ ಪರೀಕ್ಷೆ ಮಾಡುತ್ತಿದ್ದ.

Advertisement

ರಾತ್ರಿ ಎಲ್ಲಾ ನಾಳೆ ಹೊರಡಬೇಕು ಎನ್ನುವ ಆತಂಕದಲ್ಲಿ ನಿದ್ರೆಗೆ ಜಾರಿ ಬೆಳಗೆದ್ದು  ಮನೆಯಲ್ಲಿ ತಯಾರಿಸಿದ ತಿಂಡಿಯ ಪೊಟ್ಟಣಗಳನ್ನೆಲ್ಲ ಪ್ಯಾಕ್ ಮಾಡಿಕೊಂಡು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಬೈಕ್‌ನ ಕೀ ತಿರುಗಿಸಿ ಸ್ಟಾರ್ಟರ್ ಬಟನ್ ಒತ್ತಿ ಮನೆಯವರಿಗೆಲ್ಲ ಒಂದು ಸಣ್ಣ ನಗು ಚೆಲ್ಲಿ ಹೊರಟೆ.

ನಸು ಬೆಳಕಿನ ಮೈ ಹಿಂಡುವ ಚಳಿಯಲ್ಲಿ ದಪ್ಪನೆಯ ಜಾಕೆಟ್ ಧರಿಸಿ ಗದ್ದೆಯ ಬದಿಯಲ್ಲಿನ ಅಡ್ಡ ದಾರಿ ಹಿಡಿದು ಪಂಪ್ ಸೆಟ್ ಕಾಲುವೆ ಹಳ್ಳ ಎಲ್ಲವನ್ನೂ ದಾಟಿ ಗಂಗಾವತಿ ನಗರ ತಲುಪುವಾಗ ಬೆಳಗಿನ ಜಾವ ಆರಾಗಿತ್ತು. ಇನ್ನೇನು ಚಹಾ ಮಾರುವ ಅಂಗಡಿಗಳು ತೆರೆಯುತ್ತಿದ್ದ ಸಂದರ್ಭ ಹೋಗಿ ಒಂದು ಅಂಗಡಿ ಮುಂದೆ ನಿಂತು ಕೊಂಡೆ ಅಣ್ಣ ಒಂದು ಚಹಾ ಕೊಡಿ ಎಂದೆ. ತಡ್ಕರಿ ಸರ್ ಹಾಲು ಈಗ ಕೂದಲಿಕತ್ತದ ಎಂದು ಮಾತು ಆರಂಭಿಸಿದ ಅವನು ಮಾತು ಮುಗಿಯುವುದರೊಳಗೆ ಚಹಾ ನೀಡಿದ.

ಚಹಾ ಕುಡಿದು ಹೊರಟ ನನ್ನ ಪಯಣ ವಿಶ್ವವಿಖ್ಯಾತ ಹಂಪಿ ಅಂಜನಾದ್ರಿ ಬೆಟ್ಟ, ಉತ್ತರ ಕರ್ನಾಟಕದ ಆರಾಧ್ಯ ದೈವ ಹುಲಿಗೆಮ್ಮ ದೇವಿ ಆರು ಜಿಲ್ಲೆಗಳ ಜೀವನಾಡಿ ಹೊಸಪೇಟೆಯ ತುಂಗಭದ್ರ ಮಡಿಲು ಸೇರುವಾಗ ಗಂಟೆ ಹತ್ತಾಗಿತ್ತು. ಅಲ್ಲಿಯೇ ಡ್ಯಾಮ್ ಪಕ್ಕದಲ್ಲಿದ್ದ ಹೋಟೆಲೋಂದರಲ್ಲಿ ಬಿಸಿ ಬಿಸಿ ಇಡ್ಲಿ ಚಟ್ನಿ ಸವಿದು ಮುಂದೆ ಸಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದಕ್ಕಿಂತ ಒಂದು ದೊಡ್ಡ ಸರಕು ಸಾಗಿಸುವ  ಲಾರಿಗಳ ಕಂಡು ಒಂದು ವೇಳೆ ಇದರ ಅಡಿಗಳಲ್ಲಿ ನಾನು ಸಿಕ್ಕಿದರೆ ಏನಾಗಬಹುದು ಎಂಬುವ ಭಯದಲ್ಲಿಯೇ ಮೆಲ್ಲನೆ ಹೊರಟಿತು ನನ್ನ ಪಯಣ. ಮಧ್ಯಾಹ್ನದ ಊಟದ ಸಮಯವಾಗುವಷ್ಟರಲ್ಲಿ ದಾವಣಗೆರೆಯ ಬೆಣ್ಣೆ ದೋಸೆ ಘಮ್ ಎಂದು ಕೈಬಿಸಿ ಕರೆಯುತ್ತಿತ್ತು.

Advertisement

ಇನ್ನೇನು ಕೆಲವೇ ಗಂಟೆಗಳಲ್ಲಿ ಘಟ್ಟವನ್ನು ಪ್ರವೇಶಿಸುವ ನನ್ನ ಗಾಡಿ ಸರಿಯಾಗಿ ಇದೆಯೇ ಎಂದು ಪರೀಕ್ಷಿಸಲು ಮೆಕ್ಯಾನಿಕ್ ಬಳಿ ಹೋದೆ. ಒಂದು ತಾಸು ಮುಂದಿನ ಚಕ್ರ, ಹಿಂದಿನ ಚಕ್ರ, ಇಂಜಿನ್ ಎಲ್ಲವನ್ನೂ ಕಿತ್ತು ಮರಳಿ ಜೋಡಿಸಿ ಸರಿಯಾಗಿದೆ ಸರ್, ಕೊಡಿ ಒಂದು ಸಾವಿರ ಎಂದ ಅವನು ಮಾತು ಕೇಳಿ ತಬ್ಬಿಬ್ಬಾದೆ.

ಹಣ ಹೋದರೆ ಹೋಗಲಿ ನನ್ನ ಗಾಡಿ ಸರಿಯಾಗಿದೆಯಲ್ಲ ಎನ್ನುವುದೊಂದೇ ಈ ಮನಸ್ಸಿಗೆ ಖುಷಿ. ಸಾವಿರಾರು ಜನಗಳನ್ನು ನೂರಾರು ಅಂಗಡಿಗಳನ್ನು ಹತ್ತಾರು ನಗರಗಳನ್ನು ದಾಟಿ ನನ್ನಿಂದ ಸೂರ್ಯನ ಕಿರಣಗಳು ಬಹು ದೂರ ಸರಿದು ಮುಸ್ಸಂಜೆಯ ಗಾಳಿ ಹಕ್ಕಿಗಳ ಇಂಪಾದ ಧ್ವನಿ ಚಂದ್ರನ ಪಕ್ಕದಲ್ಲಿದ್ದ ನಕ್ಷತ್ರಗಳು ಕಂಗೊಳಿಸುತ್ತಿರುವಾಗ ನನಗನಿಸಿದ್ದು ನಾನಿರುವುದು ಕವಿಯ ಮನೆ ಮಲೆನಾಡ ಸೀಮೆಯ ಮುದ್ದಾದ ಪ್ರಕೃತಿಯ ಮಡಿಲಿನಲ್ಲಿ ಎಂದು.

ಎಲ್ಲಿದ್ದರೇನು.. ಬಂತು ಹೊಟ್ಟೆಗೆ ಹಸಿವು ಬಂತು ಪಟ್ಟನೆ ಕನ್ನಂಗಿಯ ಡಾಬಾ ಒಂದರಲ್ಲಿ ಗಾಡಿಯನ್ನು ನಿಲ್ಲಿಸಿ ಮಲೆನಾಡಿನ ಹಕ್ಕಿ ರೊಟ್ಟಿ ಕಾಳು ಅನ್ನ ಸಾಂಬಾರ್ ಹಪ್ಪಳ ಎಲ್ಲವನ್ನೂ ತಿಂದು ಸರ್ಕಾರಿ ಆಸ್ಪತ್ರೆಗೆ ನುಗ್ಗಿದೆ.

ಕಾರಣವೇನೆಂದರೆ ಬೆಳಗ್ಗೆನಿಂದ ಸಂಜೆಯವರೆಗೆ ಎಲ್ಲವನ್ನು ಸವಿಯುತ್ತಿದ್ದ ನನ್ನ ಕಣ್ಣುಗಳು ಕರಾವಳಿ ತಲುಪುವ ಮುನ್ನ ಕೆಲ ಕಾಲವಾದರೂ ವಿರಾಮಿಸಬೇಕೆಂದು.

ಆದರೆ ಅಲ್ಲಿಯ ಸಿಬ್ಬಂದಿಗಳು ನನಗಿಂತ ಮುಂಚಿತವಾಗಿ ನಿದ್ರಿಸಿದ್ದಾರೆ ಎಂದು ತಿಳಿದು ಪಕ್ಕದ ಮನೆಯೊಂದರಲ್ಲಿ ಇಂದು ಒಂದು ದಿನ ನಿದ್ರೆ ಮಾಡಲು ಜಾಗ ಸಿಗಬಹುದೇ ಎಂದು ಕೇಳಿದೆ. ಆದರೆ ಅವರು ನೇರವಾಗಿ ಉತ್ತರಿಸಿಬಿಟ್ಟರು. ನೀನು ಯಾರೆಂದು ನನಗೆ ತಿಳಿಯದು. ಗುರುತು ಪರಿಚಯ ಇಲ್ಲದವರನ್ನು ಇಲ್ಲಿ ಮಲಗಿಸಿದರೆ ಬೆಳಗಾಗುವುದರೊಳಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ.. ದಯ ಮಾಡಿ ಇಲ್ಲೆಲ್ಲೂ ನಿಲ್ಲಬೇಡಿ ಹೊರಟುಬಿಡಿ ಎಂದರು.

ಹಾಗೆ ಅವರು ಹೇಳುವುದಕ್ಕೆ ಕಾರಣ ಬಹುಶಃ ಇತ್ತೀಚೆಗೆ ನಡೆಯುತ್ತಿರುವ ರಾತ್ರಿ ದರೋಡೆ.. ಕಳ್ಳತನ.. ಮಹಿಳೆಯರ ಮೇಲಿನ ದೌರ್ಜನ್ಯಗಳು.. ಅವರನ್ನು ನನ್ನ ಮೇಲೆ ನಂಬಿಕೆ ಬರದಂತೆ ಮಾಡಿರಬಹುದು. ಏನೇ ಆಗಿದ್ದರು ನಾನಂತೂ ಪಯಣ ಮುಂದುವರಿಸುವ ಸ್ಥಿತಿಯಲ್ಲಿರಲಿಲ್ಲ. ಆದರೂ ಅನಿವಾರ್ಯವಾಗಿ ತೀರ್ಥಹಳ್ಳಿಯ ಲಾಡ್ಜ್ ಒಂದರಲ್ಲಿ ರೂಮ್ ಮಾಡಿಕೊಂಡು ಮಲಗುವಾಗ ಮಧ್ಯರಾತ್ರಿ ಹನ್ನೆರಡು ಗಂಟೆ. ಮನಸ್ಸಿನಲ್ಲಿ ಏನೇನೋ ಭಾವನೆಗಳು ಬೆಳಗಾಗುವುದರೊಳಗೆ ಏನು ಆಗದಿರಲಿ ಎಂದು ಭಗವಂತನ ಮೇಲೆ ಮೊರೆಯಿಟ್ಟು ಮಲಗಿ ಕಣ್ಣರಳಿಸಿದಾಗ  ಬೆಳಗಿನ ಜಾವ ಎಂಟಾಗಿತ್ತು.

ತಕ್ಷಣ ತಡ ಮಾಡದೆ ರೆಡಿಯಾಗಿ ರೂಮ್ ನಿಂದ ಹೊರಗಡೆ ಬರುವಾಗ ಮನೆಯಿಂದ ನಾನು ತಂದಿದ್ದ ತಿಂಡಿಯ ಪೊಟ್ಟಣಗಳು, ನಾಲ್ಕೈದು ಜೊತೆ ಬಟ್ಟೆಗಳು, ಮೂರು ಜೊತೆ ಬೂಟ್ಗಳು, ಮಧ್ಯರಾತ್ರಿಯಲ್ಲಿ ಯಾರೋ  ಕುಡುಕರು ಒದ್ದುಕೊಂಡು ಹೋಗಿದ್ದಾರೆ ಎಂದು ತಿಳಿದದ್ದು ಲಾಡ್ಜ್ ಪಕ್ಕದಲ್ಲಿದ್ದ ಬಾರ್ ನೋಡಿದಾಗ.

ಅಂತೂ ಇಂತೂ ನನ್ನ ವಸ್ತುಗಳು ಇನ್ಯಾರದ್ದು ಸಂಭ್ರಮವಾಗಿರಬಹುದು ಎಂದು ಸಂಕಟದಿಂದಲೇ ಅಲ್ಲಿಂದ ಹೊರಟೆ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ಮರಗಳು ವಾಹನಗಳ ದಟ್ಟಣೆ ಇಲ್ಲ ಅಲ್ಲಲ್ಲಿ ಕುಳಿತಿರುವ ಮಂಗಗಳು ನೋಡುತ್ತಲೇ ಆಗುಂಬೆ ಘಾಟು ತಲುಪಿಯೇ ಬಿಟ್ಟೆ. ಮೂವತ್ತೇಳು ತಿರುಗುಗಳನ್ನ ಸುತ್ತಿ ಬೆಟ್ಟದ ಮೇಲಿಂದ ಕೆಳಗಿಳಿಯುವಾಗ ನನಗನಿಸಿದ್ದು, ಪ್ರಕೃತಿಯ ಮಡಿಲು ಅದೆಷ್ಟು ಸುಂದರ ಎಂದು.

ಇನ್ನೇನು ಕೆಲವೇ ಸಮಯದಲ್ಲಿ  ನನ್ನಯ ಗುರಿ ತಲುಪಿ ಬಿಡುತ್ತೇನೆ ಎನ್ನುವ ಹುಮ್ಮಸ್ಸಿನಿಂದಲೇ ಹೊರಟವನಿಗೆ ಎದುರಾದದ್ದು ಗುಂಗರು ಕೂದಲಿನ ಮುದ್ದಾದ ಹುಡುಗಿ. ನಾ ಮುಂದು ತಾ ಮುಂದು ಎಂದು ನನ್ನ ಗಾಡಿಯನ್ನು ಅವಳು ಹಿಂಬಾಲಿಸುತ್ತಿದ್ದಾಳೋ ಅಥವಾ ನಾನೇ ಅವಳನ್ನು ಹಿಂಬಾಲಿಸುತ್ತಿದ್ದೇನೋ ತಿಳಿಯದಾಯಿತು.

ನುಸುನಗುತ್ತಲೆ ಸಾಗಿದ ನಮ್ಮ ಪಯಣ ಕಾರ್ಕಳ ತಲುಪಿದಾಗ ಅವಳು ಹಿಂದೆ ತಿರುಗಿ ಕಿರುನಗೆಯನ್ನು ಚೆಲ್ಲಿ ಮನೆಯ ದಾರಿ ಹಿಡಿದಳು. ನಾನು ಅವಳ ಕುಂಗಿನಲ್ಲಿಯೇ ಕರಾವಳಿಯ  ಮಂಗಳೂರು ವಿಶ್ವವಿದ್ಯಾನಿಲಯವನ್ನು ತಲುಪಿಯೇ ಬಿಟ್ಟೆ.

ಶಂಕರ್ ಓಬಳಬಂಡಿ

ದ್ವಿತೀಯ ಎಂ ಎ ವಿದ್ಯಾರ್ಥಿ

ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next