ರಾಮನಗರ: ಹೆದ್ದಾರಿ ಎರಡು ಬದಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯ ಕೂಡ ನಡೆ ಯು ತ್ತಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಬಿಡದಿಯ ಕಾಡುಮನೆ ಕ್ರಾಸ್ ಬಳಿಯ ರೈಲ್ವೆ ಬ್ರಿಡ್ಜ್ ಕೆಳಗೆ ಸರ್ವಿಸ್ ರಸ್ತೆ ಕಾಮ ಗಾರಿ ಮಾಡುವುದಿಲ್ಲ. ಕಾರಣ, ಪೂರ್ಣ ಪ್ರಮಾಣ ದಲ್ಲಿ ಸರ್ವಿಸ್ ರಸ್ತೆ ಮಾಡಿದರೆ ಎಲ್ಲ ವಾಹನ ಗಳು ಅಲ್ಲೆ ಸಂಚಾರ ಮಾಡುತ್ತವೆ. ಇದರಿಂದ ಟೋಲ್ ಸಂಗ್ರಹ ಆಗುವುದಿಲ್ಲ ಎಂದು ಬೆಂ.-ಮೈ. ರಾಷ್ಟ್ರೀಯ ದಶಪಥ ಹೆದ್ದಾರಿ ಯೋಜನಾ ನಿರ್ದೇಶಕ ಶ್ರೀಧರ್ ಸ್ಪಷ್ಟಪಡಿಸಿದರು.
ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆ ಮುಖಂಡರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದಶಪಥ ಹೆದ್ದಾರಿ ಅಲ್ಲ. 6 ಪಥದ ಹೆದ್ದಾರಿ ಎಂದು ಸ್ಪಷ್ಟಪಡಿಸಿದ ಅವರು, ಕೇಂದ್ರದ ಕ್ಯಾಬಿನೆಟ್‌ನಲ್ಲಿ 6 ಪಥದ ರಸ್ತೆಗೆ ಅನುಮೋದನೆ ಸಿಕ್ಕಿದೆ. ಈ 6 ಪಥದ ಜೊತೆಗೆ ಹೆಚ್ಚುವರಿಯಾಗಿ ಎರಡು ಬದಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುವುದನ್ನು ಸೇರಿಸಿಕೊಳ್ಳಲಾಗಿದೆ ಎಂದರು.
ಕಾಮಗಾರಿ ಪೂರ್ಣಗೊಂಡಿದೆ: ಬಹುಪಾಲು ನಿಡಘಟ್ಟವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಹಾಗಾಗಿ, ಹೆದ್ದಾರಿಯಲ್ಲಿ ಮಂಗಳವಾರದಿಂದ ಟೋಲ್ ಸಂಗ್ರಹ ಮಾಡಲು ಹಸಿರು ನಿಶಾನೆ ತೋರಲಾಗಿತ್ತು. ಈ ವಿಚಾರವಾಗಿ ಹಲವು ಹೋರಾಟಗಳು ಟೋಲ್ ಪ್ಲಾಜಾಗಳ ಮುಂದೆ ನಡೆದಿದ್ದವು. ಅಲ್ಲದೆ, ಸಮಸ್ಯೆಗಳನ್ನ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು. ಹಾಗಾಗಿ, ಕನ್ನಡಪರ ಹೋರಾಟಗಾರ ಜೊತೆಗೆ ಚರ್ಚೆ ಮಾಡಲು ಬಂದಿದ್ದೇನೆ ಎಂದರು.
ಅಗತ್ಯ ಸೇವೆ ಕಲ್ಪಿಸಿದೆ: ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲ ರೀತಿಯ ಅಗತ್ಯ ಸೇವೆಗಳನ್ನ ಕಲ್ಪಿಸಲಾಗಿದೆ. ಎರಡು ಟೋಲ್ ಪ್ಲಾಜಾಗಳ ಬಳಿ ಎರಡೆರಡು ಆ್ಯಂಬುಲೆನ್ಸ್, ಕ್ರೇನ್, ಹೈವೇ ಗಸ್ತು ವಾಹನಗಳು ಸಿದ್ಧವಾಗಿವೆ. ಅಲ್ಲದೆ, ಮಿನಿ ಕ್ಲಿನಿಕ್ ಕೂಡ ತೆರೆಯಲಾಗಿದೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ತದ ನಂತರ ಬೇರೆ ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಸಹ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ: ಹಲವು ಅಡೆತಡೆಗಳ ಹಾಗೂ ಹೋರಾಟದ ನಡುವೆಯು ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನಗಳಿಗೆ ಟೋಲ್ ಸಂಗ್ರಹ ಮಾಡುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಗಿತ್ತು. ಇದೇ ವಿಚಾರವಾಗಿ ಕನ್ನಡಪರ ಸಂಘಟನೆ ಹೋರಾಟಗಾರರು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಅವರನ್ನು ಕರೆಸಿ ಹೆದ್ದಾರಿಯಲ್ಲಿನ ಅನನುಕೂಲತೆಗಳನ್ನ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳ ಗಮನ ಸೆಳೆದು ಸಮಸ್ಯೆಗೆ ಅಧಿಕಾರಿಗಳಿಂದ ಕನ್ನಡಪರ ಸಂಘಟನೆಗಳ ಮುಖಂಡರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಿದರು.
ಉತ್ತಮ ಸೇವೆ ಅವಶ್ಯ ಇದ್ದಲ್ಲಿ ಹಣ ಕಟ್ಟುವುದು ಅನಿವಾರ್ಯ : ನಾನು ಯಾವುದೇ ಪ್ರತಿಕಾಗೋಷ್ಠಿ ಕರೆದಿರಲಿಲ್ಲ. ನನಗೆ ಕರೆಯುವ ಯಾವುದೇ ಅಧಿಕಾರವೂ ಇಲ್ಲ. ಕನ್ನಡ ಪರ ಹೋರಾಟಗಾರರು ಕರೆದರು ಅಂತ ಬಂದಿದ್ದೆ. ಅವರಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಕರ್ತವ್ಯವಾಗಿತ್ತು. ವಿವರಿಸಿದ್ದೇನೆ. ಅಷ್ಟಕ್ಕೂ ಸಂಪೂರ್ಣ ಸರ್ವಿಸ್ ರಸ್ತೆ ಮಾಡಿದರೆ ಟೋಲ್‌ನಲ್ಲಿ ಹಣ ಕೊಟ್ಟು ಯಾಕೆ ಓಡಾಡುತ್ತಾರೆ. ಇದರಿಂದ ಟೋಲ್ ರಸ್ತೆ ನಿರ್ಮಾಣದ ಉದ್ದೇಶವಾದರೂ ಏನಿದೆ?. ಸಾರ್ವಜನಿಕರಿಗೆ ವೇಗ ಮತ್ತು ಉತ್ತಮ ಸೇವೆ ಅವಶ್ಯಕತೆ ಇದ್ದಲ್ಲಿ ಹಣ ಕಟ್ಟುವುದು ಅನಿವಾರ್ಯವಾಗಿದೆ ಎಂದು ಬೆಂ.-ಮೈ. ರಾಷ್ಟ್ರೀಯ ದಶಪಥ ಹೆದ್ದಾರಿ ಯೋಜನಾ ನಿರ್ದೇಶಕ ಶ್ರೀಧರ್ ಹೇಳಿದರು.