ಹೊಸದಿಲ್ಲಿ: ಕೋವಿಡ್, ಕ್ವಾರಂಟೈನ್, ವಿದೇಶ ಪ್ರವಾಸ ಹಾಗೂ ಇನ್ನಿತರ ಕಾರಣಗಳಿಂದ ಶನಿವಾರದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭದಿಂದ ಒಟ್ಟು 9 ಕ್ರೀಡಾಪಟುಗಳು ದೂರ ಉಳಿಯಲಿದ್ದಾರೆ ಎಂದು ಸಾಯ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಒಟ್ಟು 74 ಕ್ರೀಡಾಪಟುಗಳು ಈ ವರ್ಷದ ವಿವಿಧ ಕ್ರೀಡಾ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. ಆದರೆ 65 ಮಂದಿ ಮಾತ್ರ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಅಂತರ್ಜಾಲ ಮೂಲಕ ನಡೆಯುವ “ಛಾಯಾ ಸಮಾರಂಭ’ (ವರ್ಚುವಲ್ ಸೆರಮನಿ) ಆಗಿರುತ್ತದೆ.
“ಒಟ್ಟು 7 ವಿಭಾಗಗಳಲ್ಲಿ 74 ಕ್ರೀಡಾಪಟುಗಳಿಗೆ ಈ ಬಾರಿ ಪ್ರಶಸ್ತಿ ಒಲಿದು ಬಂದಿದೆ. ಆದರೆ 9 ಮಂದಿ ಸಮಾರಂಭಕ್ಕೆ ಗೈರಾಗಲಿದ್ದಾರೆ. ಇವರಲ್ಲಿ 3 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಕೆಲವರು ವಿದೇಶ ಪ್ರವಾಸದಲ್ಲಿದ್ದಾರೆ. 65 ಮಂದಿ ಮಾತ್ರ ವಿವಿಧ ಸಾಯ್ ಕೇಂದ್ರಗಳಲ್ಲಿ ಉಪಸ್ಥಿತರಿರಲಿದ್ದಾರೆ’ ಎಂದು ಸಾಯ್ ತಿಳಿಸಿದೆ.
ಮೊದಲ ಛಾಯಾ ಸಮಾರಂಭ
ಸಂಪ್ರದಾಯದಂತೆ ಇದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭ. ಆದರೆ ಕೋವಿಡ್ ನಿಂದಾಗಿ ಈ ಸಲ “ಛಾಯಾ ಸಮಾರಂಭ’ವಾಗಿ ಮಾರ್ಪಟ್ಟಿದೆ. ಪ್ರಶಸ್ತಿ ಇತಿಹಾಸದಲ್ಲಿ ಇಂಥದೊಂದು ಸಮಾರಂಭ ನಡೆಯುತ್ತಿರುವುದು ಇದೇ ಮೊದಲು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಷ್ಟ್ರಪತಿ ಭವನದಲ್ಲಿ ಉಪಸ್ಥಿತರಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಲಿದ್ದಾರೆ. ಪ್ರಶಸ್ತಿ ವಿಜೇತ ಕ್ರೀಡಾಪಟುಗಳು ದೇಶದ ವಿವಿಧ ಸಾಯ್ ಕೇಂದ್ರಗಳಲಿದ್ದು, ಇದಕ್ಕೆ ಸ್ಪಂದಿಸಲಿದ್ದಾರೆ. ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತು ಇತರ ಅಧಿಕಾರಿಗಳು ವಿಜ್ಞಾನ ಭವನದಲ್ಲಿ ಉಪಸ್ಥಿತರಿರುತ್ತಾರೆ. ಸಮಾರಂಭ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ.