Advertisement

Karnataka: ಭ್ರೂಣಹತ್ಯೆ ತಡೆಗೆ ತ.ನಾಡು ಮಾದರಿ ಕಾರ್ಯಪಡೆ?

12:59 AM Dec 13, 2023 | Team Udayavani |

ಬೆಳಗಾವಿ: ಹೆಣ್ಣುಭ್ರೂಣ ಹತ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಭ್ರೂಣಹತ್ಯೆ ನಿಯಂ ತ್ರಣಕ್ಕೆ ತಮಿಳುನಾಡು ಮಾದರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸಮನ್ವಯದ ಕಾರ್ಯಪಡೆ ರಚಿಸಲು ನಿರ್ಧರಿಸಿದೆ.

Advertisement

ಈ ಕುರಿತು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ವಿಧಾನ ಪರಿಷತ್ತಿನಲ್ಲಿ ಮಾಹಿತಿ ನೀಡಿದರು. ಭ್ರೂಣಹತ್ಯೆ ನಿಯಂತ್ರಣಕ್ಕೆ ಕಠಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ ಈಗಿರುವ ಐಪಿಸಿ ಕಾನೂನಿಗೆ ತಿದ್ದುಪಡಿ ತರುವುದರ ಜತೆಗೆ ಮೊದಲ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ ಎರಡನೇ ಬಾರಿ ಗರ್ಭವತಿಯಾದಾಗ ಆಕೆಯ ಮೇಲೆ ನಿಗಾ ಇರಿಸಲಾಗುವುದು ಎಂದಿದ್ದಾರೆ. ಜತೆಗೆ ಈಗಿರುವ ಪಿಸಿಪಿಎನ್‌ಡಿಟಿ ಕಾಯ್ದೆಯನ್ನು ಮತ್ತಷ್ಟು ಬಿಗಿಯಾಗಿ ಜಾರಿಗೊಳಿಸಲಾಗುವುದು ಎಂದೂ ಸಚಿವರು ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಮಂಗಳವಾರ ನಿಯಮ 72ರಡಿ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಬಿ.ಎಂ. ಫಾರೂಖ್‌, ಟಿ.ಎ. ಶರವಣ, ಸಿ.ಎನ್‌. ಮಂಜೇ ಗೌಡ, ಉಮಾಶ್ರೀ, ಭಾರತಿ ಶೆಟ್ಟಿ ಪ್ರಸ್ತಾವಿಸಿದ ಭ್ರೂಣಹತ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಗಳನ್ನು ಬಿಗಿಗೊಳಿಸುವುದರ ಜತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲೂ ಸರಕಾರ ಕೆಲಸ ಮಾಡಲಿದೆ ಎಂದರು.

ಇತ್ತೀಚೆಗಿನ ಹೆಣ್ಣುಭ್ರೂಣ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸೆಕ್ಷನ್‌ 312 ಹಾಕಲಾಗಿದೆ. ಹಾಗಾಗಿ ನ್ಯಾಯಾಲಯ ಜಾಮೀನು ಕೊಟ್ಟಿದೆ. ಹುಟ್ಟುವುದನ್ನು ತಪ್ಪಿಸಿದರೆ ಸೆಕ್ಷನ್‌ 315 ಇದೆ. ಅದು ಜಾಮೀನುರಹಿತ ಸೆಕ್ಷನ್‌. ಈಗಿರುವ ಕಾಯ್ದೆಯಲ್ಲಿ ಹೆಣ್ಣುಭ್ರೂಣದ ಬಗ್ಗೆ ಪ್ರಸ್ತಾವ ಇಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಅಡ್ವೊಕೇಟ್‌ ಜನರಲ್‌ ಗಮನ ಹರಿಸುತ್ತಿದ್ದಾರೆ. ಭ್ರೂಣ ಹತ್ಯೆ ಎಂದು ಕಾಯ್ದೆಯಲ್ಲೇ ಇದೆ. ಹಾಗಾಗಿ ಅದು ಕೊಲೆಗೆ ಸಮಾನ ಎಂಬ ಅಭಿ ಪ್ರಾಯ ಸದನದಲ್ಲಿ ವ್ಯಕ್ತವಾಗಿದೆ.

ಏನೇನು ಕ್ರಮ?
– ಆರೋಗ್ಯ ಇಲಾಖೆ – ಪೊಲೀಸ್‌ ಇಲಾಖೆ ಸಮನ್ವಯದಲ್ಲಿ ಕಾರ್ಯಪಡೆ ರಚನೆ
– ಈಗಿರುವ ಐಪಿಸಿ ಕಾನೂನಿಗೆ ತಿದ್ದುಪಡಿ
– ಪಿಸಿಪಿಎನ್‌ಡಿಟಿ ಕಾಯ್ದೆಯನ್ನು ಮತ್ತಷ್ಟು ಬಿಗಿಯಾಗಿ ಜಾರಿಗೊಳಿಸುವುದು
– 2ನೇ ಬಾರಿ ಗರ್ಭವತಿ ಆಗುವ ತಾಯಂದಿರ ದತ್ತಾಂಶ ಸಂಗ್ರಹಿಸಿ, ಕೃತಕ ಬುದ್ಧಿಮತ್ತೆ ಬಳಸಿಕೊಂಡು ನಿಗಾ
– ಭ್ರೂಣಲಿಂಗ ಪತ್ತೆಗೆ ಒಳಗಾಗಿ, ಗರ್ಭಪಾತ ಮಾಡಿಸಿಕೊಳ್ಳುವವರ ವಿರುದ್ಧವೂ ಕ್ರಮ
– ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ಪಿಸಿಪಿ ಎನ್‌ಡಿಟಿ ಕಾಯ್ದೆ ಕಟ್ಟುನಿಟ್ಟಿನ ಜಾರಿಗೆ ಘಟಕ

Advertisement

ಸಚಿವರು ಹೇಳಿದ ಪ್ರಮುಖ ಅಂಶಗಳು
l ಸ್ಥಗಿತಗೊಂಡಿರುವ ಆರೋಗ್ಯ ಸಹಾಯವಾಣಿ- 104ಕ್ಕೆ ಮರುಚಾಲನೆ ನೀಡಿ, ಭ್ರೂಣ ಪತ್ತೆ ವಿಚಾರವನ್ನೂ ಅದಕ್ಕೆ ಸೇರಿಸಲಾಗುವುದು. ಅದುವರೆಗೆ ತಾತ್ಕಾಲಿಕ ಸಹಾಯವಾಣಿ ಸಂಖ್ಯೆ ಪ್ರಕಟಿಸಲಾಗುವುದು.
l ಸ್ಕಾನಿಂಗ್‌ಯಂತ್ರಗಳ ಪರವಾನಿಗೆ ನವೀಕರಣ ಪ್ರತೀ ಎರಡು ವರ್ಷಕ್ಕೊಮ್ಮೆ ಕಡ್ಡಾಯಗೊಳಿಸಲಾಗುವುದು.
l ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯ ಕುರಿತು ಮಾಹಿತಿ ನೀಡುವವರಿಗೆ ಪ್ರೋತ್ಸಾಹಧನವನ್ನು 50 ಸಾವಿರದಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.
l ರಾಜ್ಯದ ಎಲ್ಲ 56 ಉಪವಿಭಾಗಗಳಲ್ಲಿ ಮೇಲ್ವಿಚಾರಣ ತಂಡಗಳನ್ನು ರಚಿಸಲಾಗುವುದು.
l ಹೆಣ್ಣುಭ್ರೂಣ ಹತ್ಯೆ ತಡೆ ಕಾರ್ಯಾಚರಣೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆ ಯರು, ಸ್ತ್ರೀಶಕ್ತಿ ಸಂಘಗಳನ್ನು ಬಳಸಲಾಗುವುದು.

ಪಾಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿ
ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭ ಹೆಣ್ಣುಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗಾಗಿದ್ದು, ಅದರ ಮೂಲೋತ್ಪಾಟನೆಗೆ ಸರಕಾರ ಕಠಿನ ಕ್ರಮಗಳನ್ನು ಕೈಗೊಳ್ಳಬೇಕು. ಹೆಣ್ಣುಭ್ರೂಣ ಹತ್ಯೆಯನ್ನು ಕೊಲೆಗೆ ಸಮ ಎಂದು ಪರಿಗಣಿಸಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next