Advertisement

ಮಾ.12ರಂದು ರಾಷ್ಟ್ರೀಯ ಲೋಕ ಅದಾಲತ್‌

03:27 PM Jan 29, 2022 | Team Udayavani |

ಬೀದರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಮಾ.12ರಂದು ರಾಷ್ಟ್ರೀಯ ಲೋಕ ಅದಾಲತ್‌ ನಡೆಸಲಾಗುವುದು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಶಂಕ್ರಪ್ಪ ಚೆಗರೆಡ್ಡಿ ತಿಳಿಸಿದರು.

Advertisement

ನಗರದ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಲೋಕ ಅದಾಲತ್‌ ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಿರುತ್ತಾರೆ. ಲೋಕ ಅದಾಲತ್‌ ಅಂದರೆ ಯಾವುದೇ ಒಂದು ಪ್ರಕರಣದ ಉಭಯ ಪಕ್ಷಗಾರರಲ್ಲಿ ರಾಜಿ ಸಂಧಾನ ಏರ್ಪಡಿಸುವ ಮೂಲಕ ಪ್ರಕರಣ ಇತ್ಯರ್ಥಗೊಳಿಸುವುದು ಆಗಿದೆ ಎಂದರು.

ವ್ಯಾಜ್ಯವನ್ನು ಲೋಕ ಅದಾಲತ್‌ ಮೂಲಕ ಅತ್ಯಂತ ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಮತ್ತು ಅಂತಿಮವಾಗಿ ಇತ್ಯರ್ಥ ಪಡಿಸಿಕೊಳ್ಳಬಹುದು. ಇಲ್ಲಿ ಯಾವುದೇ ಕೋರ್ಟ್‌ ಶುಲ್ಕ ಕೊಡಬೇಕಾಗಿಲ್ಲ. ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಭಾಗವಹಿಸಬಹುದು. ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ಸಿವಿಲ್‌ ಪ್ರಕರಣ ಇತ್ಯರ್ಥಗೊಂಡರೆ ಅವಾರ್ಡ್‌ ಮಾಡಲಾಗುವುದು. ಪ್ರಕರಣ ರಾಜಿ ಮಾಡಿಕೊಂಡಲ್ಲಿ ಶೇ.100ರಷ್ಟು ನ್ಯಾಯಾಲಯದ ಶುಲ್ಕ ವಾಪಸ್‌ ನೀಡಲಾಗುವುದು. ಲೋಕ ಅದಾಲತ್‌ ಅವಾರ್ಡ್‌ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎನ್ನುವುದು ಲೋಕ ಅದಾಲತ್‌ ನ ವೈಶಿಷ್ಟ್ಯಗಳಾಗಿವೆ ಎಂದರು.

ಈಗಾಗಲೇ ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳೆಂದರೆ ಕ್ರಿಮಿನಲ್‌ ರಾಜಿಯಾಗಬಹುದಾದ ಪ್ರಕರಣಗಳು, ಚೆಕ್‌ ಬೌನ್ಸ್‌ ಪ್ರಕರಣಗಳು, ಬ್ಯಾಂಕ್‌ ವಸೂಲಾತಿ ಪ್ರಕರಣಗಳು, ಕಾರ್ಮಿಕ ವಿವಾದ ಪ್ರಕರಣಗಳು, ಮೋಟಾರು ವಾಹನ ಅಪಘಾತಗಳಲ್ಲಿ ಗಾಯಗೊಂಡವರು ಅಥವಾ ಮೃತಪಟ್ಟವರ ವಾರಸುದಾರರು ಅಥವಾ ಅವಲಂಬಿತರು ಪರಿಹಾರಧನ ಕೋರಿ ಸಲ್ಲಿಸಲಾದ ಪ್ರಕರಣಗಳು, ವಿದ್ಯುತ್‌ ಹಾಗೂ ನೀರಿನ ಶುಲ್ಕಗಳ ಪ್ರಕರಣಗಳು (ರಾಜಿ ಮಾಡಿಕೊಳ್ಳಲು ಬರಲಾರದ ಪ್ರಕಣಗಳನ್ನು ಹೊರತುಪಡಿಸಿ) ವೈವಾಹಿಕ ವಿವಾದಗಳು ಮತ್ತು ಜೀವನಾಂಶದ ಪ್ರಕರಣಗಳು, ಭೂಸ್ವಾಧೀನ ಸಂಬಂಧ ಸರ್ಕಾರದಿಂದ ಪರಿಹಾರಧನ ಕೋರಿ ಸಲ್ಲಿಸಲಾದ ಪ್ರಕರಣಗಳು, ಕಂದಾಯ ಪ್ರಕರಣಗಳು (ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳು), ಇತರೆ ಸಿವಿಲ್‌ ಪ್ರಕರಣಗಳು (ಬಾಡಿಗೆ, ಇಜಮೆಂಟರಿ ರೈಟ್ಸ್‌, ನಿರ್ಬಂಧರಾಜ್‌ ದಾವೆಗಳು, ಸ್ಪೆಸಿಫಿಕ್‌ ಪರಫಾರಮನ್ಸ್‌ ದಾವೆಗಳು, ಆಸ್ತಿ ವಿಭಾಗದ ದಾವೆಗಳು, ಮಕ್ಕಳ ಕಸ್ಟಡಿ ಪ್ರಕರಣಗಳು) ಇತರೆ ಕ್ರಿಮಿನಲ್‌ ಪ್ರಕರಣಗಳು (ಡಿ.ವಿ ಆಕ್ಟ್ ಪ್ರಕರಣಗಳು, ಜೀವನಾಂಶ ಪ್ರಕರಣಗಳು) ಎಂದು ವಿವರಿಸಿದರು.

4476 ಪ್ರಕರಣಗಳ ರಾಜಿ ಸಂಧಾನ: ಕಳೆದ ಡಿಸೆಂಬರ್‌ 2021ರಲ್ಲಿ ನಡೆದ ಲೋಕ ಅದಾತಲ್‌ನಲ್ಲಿ 6543 ಪ್ರಕರಣಗಳನ್ನು ಗುರುತಿಸಲಾಗಿತ್ತು. ಅವುಗಳ ಪೈಕಿ 4476 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ರಾಜಿ ಮಾಡಲಾಗಿದೆ ಎಂದು ತಿಳಿಸಿದರು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಮಾನೂರೆ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next