ಕೋಲಾರ: ಜಿಲ್ಲೆಯ ಎಲ್ಲಾ ಕೋರ್ಟ್‌ಗಳಲ್ಲಿ ಡಿ.18ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಂಡಿದ್ದು, ನ.17ರಿಂದ ಜಿಲ್ಲೆಯ ಎಲ್ಲಾ ಕೋರ್ಟ್ ಗಳಲ್ಲಿ ಪೂರ್ವ ಸಂಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ನಾಗರಾಜ ತಿಳಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಸುವ್ಯವಸ್ಥೆಯಾಗಿರಬೇಕಾದರೆ ವ್ಯಾಜ್ಯಗಳು ಕಡಿಮೆಯಾಗಬೇಕು, ಸಾರ್ವಜನಿಕರು ನೆಮ್ಮದಿಯಾಗಿ ಜೀವನ ನಡೆಸಬೇಕು, ಪ್ರಜಾಪ್ರಭುತ್ವ ಸುಭದ್ರವಾಗಿರಬೇಕೆಂದರೆ ಪ್ರಜೆಗಳು ಪ್ರಜ್ಞಾವಂತರಾಗಬೇಕು. ಪ್ರತಿಯೊಬ್ಬ ನಾಗರಿಕ ಕಾನೂನಿನ ಅರಿವು ಪಡೆದುಕೊಂಡರೆ ಕಾನೂನು ವ್ಯವಸ್ಥೆ ಸುಸ್ಥಿರವಾಗಿರುತ್ತದೆ ಎಂದು ಹೇಳಿದರು.
ರಾಜಿ ಸಂಧಾನದ ಮೂಲಕ ಇತ್ಯರ್ಥ: ಲೋಕ್ ಅದಾಲತ್‌ನಲ್ಲಿ ಕ್ರಿಮಿನಲ್, ರಾಜಿ ಆಗಬಹುದಾದ ಕೇಸು, ಚೆಕ್ ಅಮಾನ್ಯ, ಬ್ಯಾಂಕ್ ಸಾಲ ವಸೂಲಾತಿ ಕೇಸು, ಮೋಟರ್ ವಾಹನ ಅಪಘಾತ, ಕಾರ್ಮಿಕರ ಪ್ರಕರಣಗಳು, ವಿದ್ಯುತ್ ಕಳ್ಳತನ, ಮರಳು ಕಳ್ಳತನ, ವೈವಾಹಿಕ ಪ್ರಕರಣ, ಸಿವಿಲ್ ದಾವೆ, ಜನನ ಮತ್ತು ಮರಣ ನೋಂದಣಿ ಪ್ರಕರಣಗಳು, ವ್ಯಾಜ್ಯ ಪೂರ್ವ ಪ್ರಕರಣಗಳಾದ ವಿದ್ಯುತ್, ನೀರು, ಬಿಎಸ್‌ಎನ್‌ಎಲ್ ಬಿಲ್ ಪಾವತಿ ಪ್ರಕರಣಗಳನ್ನು ರಾಜಿ ಮಾಡಲಾಗುವುದು ಎಂದು ತಿಳಿಸಿದರು.
ರಾಜಿ ಆಗಬಹುದಾದ 6320 ಕೇಸು: ಕೋಲಾರ ಜಿಲ್ಲೆಯಲ್ಲಿ 30 ನ್ಯಾಯಾಲಯಗಳಿದ್ದು ಒಟ್ಟು 40,106 ಪ್ರಕರಣಗಳಿವೆ. ಅವುಗಳಲ್ಲಿ ಸಿವಿಲ್ 23,405, ಕ್ರಿಮಿನಲ್ 16,701 ಪ್ರಕರಣಗಳಿವೆ. ಕ್ರಿಮಿನಲ್ ಪ್ರಕರಣಗಳಲ್ಲಿ ರಾಜಿಯಾಗಬಹುದಾದ ಒಟ್ಟು 685 ಪ್ರಕರಣಗಳು, 5160 ಚೆಕ್ ಅಮಾನ್ಯ, 637 ಮೋಟರ್ ವಾಹನ ಅಪಘಾತ ಮತ್ತು 5037 ವಿಭಾಗದ ದಾವೆ ಪ್ರಕರಣಗಳಿವೆ. ಅವುಗಳಲ್ಲಿ 6320 ಪ್ರಕರಣಗಳು ರಾಜಿಯಾಗಬಹುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ:- ಅಹಿಂಸೆಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ;ಕಂಗನಾ ಟೀಕೆಗೆ ನೇತಾಜಿ ಪುತ್ರಿ ಹೇಳಿದ್ದೇನು
ಅದಾಲತ್‌ನ ಉಪಯೋಗ ಪಡೆಯಿರಿ: ಲೋಕ್ ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಎರಡು ಪಕ್ಷಗಾರರು ನೆಮ್ಮದಿಯಿಂದ ಜೀವನ ಮಾಡಬಹುದು. ನ್ಯಾಯಾಲಯದ ಶುಲ್ಕವನ್ನೂ ಪಕ್ಷಗಾರರಿಗೆ ವಾಪಸ್ ನೀಡಲಾಗುವುದು. ಆದ್ದರಿಂದ ಜಿಲ್ಲೆಯ ಎಲ್ಲಾ ಕೋರ್ಟ್ ಗಳಲ್ಲಿ ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ ಉಪಸ್ಥಿತರಿದ್ದರು.