ಮುಂಬಯಿ: ಮೇ 15ರಂದು ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿಣ್ಣರ ಬಿಂಬದ ವಿದ್ಯಾರ್ಥಿ ವಿಕ್ರಮ್ ಸದಾನಂದ್ ಪಾಟ್ಕರ್ ಅವರು ಪ್ರಥಮ ಬಹುಮಾನವನ್ನು ಪಡೆದಿದ್ದಾರೆ.
ವಿಕ್ರಮ್ ಅವರು ಮಲಾಡ್ ಶಿಬಿರದ ವಿದ್ಯಾರ್ಥಿಯಾಗಿದ್ದು ಶಿಬಿರ, ವಲಯ, ವಿಭಾಗ ಹಾಗೂ ಅಂತಿಮ ಹಂತದ ಚಿಣ್ಣರ ಬಿಂಬದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಓರ್ವ ಬಹುಮುಖ ಪ್ರತಿಭೆ.
ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುವುದರ ಜತೆಗೆ ಒಂದು ಲಕ್ಷ ರೂ. ನಗದು ಪುರಸ್ಕಾರ, ಎರಡು ವರ್ಷಗಳ ವಿದ್ಯಾರ್ಥಿವೇತನ, ಉಚಿತ ಸಿಂಗಾಪುರ ಪ್ರವಾಸ, ಲೆನೋವೊ ಟ್ಯಾಬ್ ಇತ್ಯಾದಿ ಅನೇಕ ವಸ್ತುಗಳನ್ನು ಬಹುಮಾನ ರೂಪದಲ್ಲಿ ಪಡೆದಿದ್ದಾರೆ. ವಿಕ್ರಮ್ ಪಾಟ್ಕರ್ ಇವರು ಸದಾನಂದ್ ಪಾಟ್ಕರ್ ಹೆರ್ಮುಂಡೆ ಹಾಗೂ ಸರಿತಾ ಸದಾನಂದ ಪಾಟ್ಕರ್ ತೀರ್ಥಹಳ್ಳಿ ದಂಪತಿಯ ಸುಪುತ್ರನಾಗಿದ್ದು, ಮಲಾಡ್ ಕುರಾರ್ ವಿಲೇಜ್‌ನ ಸೈಂಟ್ ಜಾರ್ಜ್ ಹೈಸ್ಕೂಲ್‌ನಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.ಚಿಣ್ಣರ ಬಿಂಬದ ನೆಚ್ಚಿನ ವಿದ್ಯಾರ್ಥಿಗೆ ಸಂಸ್ಥೆಯ ರೂವಾರಿ ಪ್ರಕಾಶ್ ಭಂಡಾರಿ ಹಾಗೂ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.