Advertisement

ರಾ. ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ರಾಜ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!

04:01 PM Sep 25, 2020 | keerthan |

ಪುತ್ತೂರು: ಈ ಬಾರಿಯ ಭಾರತ ಕಬಡ್ಡಿ ತಂಡದ ಸೀನಿಯರ್‌ ವಿಭಾಗದ ಸಂಭಾವ್ಯ ಆಟಗಾರರ ಯಾದಿಯಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ಏಕೈಕ ಕಬಡ್ಡಿ ಪಟುವಿಗೆ ತರಬೇತಿ ಶಿಬಿರಕ್ಕೆ ಪಾಲ್ಗೊಳ್ಳಲು ಆಹ್ವಾನ ನೀಡದೆ ತಡೆ ಒಡ್ಡಿರುವ ವಿಚಾರ ಬೆಳಕಿಗೆ ಬಂದಿದೆ!

Advertisement

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಉಜಿರೆ ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಸಚಿನ್‌ ಪ್ರತಾಪ್‌ ಮೊದಲ ಹಂತದ ಆನ್‌ಲೈನ್‌ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದಿರುವ ಕ್ರೀಡಾಪಟು. ನಿಮ್ಮ ಆಯ್ಕೆ ಪ್ರಕ್ರಿಯೆಗೆ ತಡೆ ನೀಡಲಾಗಿದೆ ಎನ್ನುವ ಉತ್ತರ ದೆಹಲಿ ರಾಷ್ಟ್ರೀಯ ಅಮೆಚೂರ್‌ ಅಸೋಸಿಯೇಶನ್‌ನಿಂದ ಬಂದಿದ್ದು ಹಳ್ಳಿಗಾಡಿನ ಪ್ರತಿಭೆಗೆ ಅವಕಾಶ ಕೈ ತಪ್ಪುವ ಆತಂಕ ಕಾಡಿದೆ.

28 ಸಂಭಾವ್ಯ ಆಟಗಾರರು
ಸೀನಿಯರ್‌ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ತೋರಿದ ಅಮೋಘ ಪ್ರದರ್ಶನದಿಂದಾಗಿ ಸಚಿನ್‌ ಪ್ರತಾಪ್‌ ಅವರು ಆರು ತಿಂಗಳ ಹಿಂದೆ ಭಾರತ ಕಬಡ್ಡಿ ತಂಡದ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ದೇಶದ ನಾನಾ ರಾಜ್ಯಗಳಿಂದ ಆಯ್ಕೆಗೊಂಡ 28 ಸ್ಪರ್ಧಿಗಳ ಪೈಕಿ ಕರ್ನಾಟಕದಿಂದ ಆಯ್ಕೆಗೊಂಡ ಏಕೈಕ ಆಟಗಾರ ಎಂಬುದು ಇವರ ಹೆಗ್ಗಳಿಕೆ ಆಗಿತ್ತು. ಈ 28 ಮಂದಿ ತರಬೇತಿ ಶಿಬಿರಕ್ಕೆ ಆಯ್ಕೆಗೊಂಡಿದ್ದರು. ಅಲ್ಲಿ 12 ಮಂದಿಯನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವುದು ನಿಯಮ.

ಪಟ್ಟಿಯಿಂದ ಕೈ ಬಿಟ್ಟರು!
ಕೋವಿಡ್ ಕಾರಣದಿಂದ ಮುಂದೂಡಿದ್ದ ತರಬೇತಿ ಶಿಬಿರದ ಪ್ರಥಮ ಅವಧಿ ಆನ್‌ಲೈನ್‌ ಕ್ಲಾಸ್‌ ತರಗತಿಗಳು ಕೆಲ ದಿನಗಳ ಹಿಂದೆ ಮುಗಿದಿದೆ. ತರಬೇತಿಗೆ ಪಾಲ್ಗೊಳ್ಳಲು ದೆಹಲಿಯಲ್ಲಿರುವ ರಾಷ್ಟ್ರೀಯ ಕಬಡ್ಡಿ ಅಸೋಸಿಯೇಶನ್‌ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಪ್ರತಾಪ್‌ ಅವರ ಹೆಸರು ಕೈ ಬಿಡಲಾಗಿತ್ತು. ಉಳಿದ ಎಲ್ಲ ರಾಜ್ಯಗಳಿಂದ ಆಯ್ಕೆಗೊಂಡ 27 ಆಟಗಾರರ ಹೆಸರು ಇದೆ. ಈ ಬಗ್ಗೆ ಅಸೋಶಿಯೇಷನ್‌ ಬಳಿ ವಿಚಾರಿಸಿದರೆ ಆಯ್ಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂಬ ಉತ್ತರ ಬಂದಿದೆ. ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ ವಿಚಾರ ನ್ಯಾಯಾಲಯದಲ್ಲಿ ಇರುವ ಕಾರಣಕ್ಕೆ ಆಯ್ಕೆಗೆ ಅಡ್ಡಿ ಉಂಟಾಗಿದೆ ಎನ್ನಲಾಗಿದೆ. ಈ ಬಗ್ಗೆ ಆಯ್ಕೆ ಸಮಿತಿ ಪರವಾಗಿಯು ಯಾರೂ ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದ ಪ್ರತಿಭೆಗೆ ತೀವ್ರ ನಿರಾಸೆ ಉಂಟಾಗಿದೆ.

ಇದನ್ನೂ ಓದಿ: ಸೋಲಿನ ಆಘಾತದಲ್ಲೂ ಕೊಹ್ಲಿಗೆ 12 ಲಕ್ಷ ರೂ. ದಂಡ: ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?

Advertisement

ಟಾಪರ್‌ ಆಗಿದ್ದರು!
ರಾಷ್ಟ್ರೀಯ ಸಂಭಾವ್ಯ ತಂಡಕ್ಕೆ ಕರ್ನಾಟಕ ಕಬಡ್ಡಿ ಅಸೋಷಿಯನ್‌ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದಿಂದ ಸೀನಿಯರ್‌ ವಿಭಾಗದಲ್ಲಿ ಪ್ರತಾಪ್‌ ಹಾಗೂ ಜೂನಿಯರ್‌ ವಿಭಾಗದಲ್ಲಿ ದ.ಕ.ಜಿಲ್ಲೆಯ ವಿನೋದ್‌ ಅವರು ಆಯ್ಕೆ ಆಗಿದ್ದರು. ಪ್ರತಾಪ್‌ ಮಾತ್ರವಲ್ಲದೆ ವಿನೋದ್‌ ಈ ಇಬ್ಬರಿಗೂ ತರಬೇತಿ ಶಿಬಿರಕ್ಕೆ ಆಹ್ವಾನ ನೀಡಿಲ್ಲ ಎನ್ನಲಾಗಿದೆ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸಂಭ್ಯಾವ ಆಯ್ಕೆ ಪ್ರಕ್ರಿಯೆಲ್ಲಿ ಪ್ರತಾಪ್‌ ಪ್ರಥಮ ಸ್ಥಾನ ಪಡೆದು ರಾಜ್ಯದಿಂದ ಆಯ್ಕೆಗೊಂಡಿದ್ದರು. ಪ್ರೋ ಕಬ್ಬಡಿ ಆಟಗಾರರಾದ ಸುಖೇಶ್‌ ಹೆಗ್ಡೆ, ಪ್ರಶಾಂತ ರೈ ಮೊದಲಾದ ಆಟಗಾರರನ್ನು ಮೀರಿ ಸಾಧನೆ ತೋರುವ ಮೂಲಕ ಭರವಸೆ ಮೂಡಿಸಿದ್ದರು.

 

ಉತ್ತರದ ರಾಜಕೀಯ ಪ್ರಭಾವ ದಕ್ಷಿಣದ ಅರ್ಹರಿಗೆ ಅನ್ಯಾಯ
ಆಯ್ಕೆ ಪ್ರಕ್ರಿಯೆಲ್ಲಿನ ರಾಜಕೀಯ ಪ್ರಭಾವವೇ ಅರ್ಹ ಪ್ರತಿಭೆಗಳ ಕಡೆಗಣೆನೆಗೆ ಕಾರಣ ಎನ್ನುವ ಆರೋಪ ದಶಕಗಳಿಂದಲೂ ಕೇಳಿ ಬರುತ್ತಿದೆ. ಉತ್ತರ ಭಾರತ ರಾಜ್ಯಗಳಲ್ಲಿ ರಾಜಕೀಯ ಪ್ರಭಾವ ಬಳಸಿ ಆಟಗಾರರಿಗೆ ಚಾನ್ಸ್‌ ನೀಡಲಾಗುತ್ತಿದ್ದು, ಇದರಿಂದ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಭಾಗದ ಪ್ರತಿಭೆಗಳಿಗೆ ಅನ್ಯಾಯ ಆಗುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತದಿರುವುದು ಕೂಡ ಇದಕ್ಕೆ ಕಾರಣ. ಕಬಡ್ಡಿಯಲ್ಲಿ ಕಡಗಣನೆ ಕುರಿತು ಹರೀಶ್‌ ಪೂಂಜ, ಸಿ.ಟಿ.ರವಿ ಅವರ ಗಮನಕ್ಕೆ ತರಲಾಗಿದ್ದು, ಅವರು ರಾಷ್ಟ್ರೀಯ ಆಯ್ಕೆ ಸಮಿತಿ ಕಾರ್ಯನಿರ್ವಾಹಣಾಧಿಕಾರಿ ಅವರನ್ನು ಸಂಪರ್ಕಿಸುವ ಭರವಸೆ ನೀಡಿದ್ದಾರೆ. ಸಂಸದ ನಳಿನ್‌, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಮಾಡಿ ಸ್ಪಂದನೆಗೆ ಆಗ್ರಹಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಸಚಿನ್‌ ಪುತ್ರಿ ಸಾರಾ-ಶುಬ್ಮನ್‌ ನಡುವೆ ಪ್ರಣಯ ಪ್ರಸಂಗ? ಸಚಿನ್ ಅಳಿಯನಾಗುತ್ತಾನಾ ಗಿಲ್

ಕಬಡ್ಡಿಯೇ ಜೀವಾಳ
ಕೆಎಫಿಡಿಸಿ ನೌಕರರಾದ ಸುಂದರಲಿಂಗಂ ಮತ್ತು ವಲ್ಲಿ ದಂಪತಿಯ ಪುತ್ರನಾಗಿರುವ ಸಚಿನ್‌ ಪ್ರತಾಪ್‌ ಈಗಾಗಲೇ 50 ಕ್ಕೂ ಅಧಿಕ ರಾಜ್ಯ ಮಟ್ಟದ ಕ್ರೀಡಾಕೂಟ, ದಕ್ಷಿಣ ವಲಯ ಕಬಡ್ಡಿ ಕೂಟದಲ್ಲಿ ಭಾಗವಹಿಸಿದ್ದಾರೆ. ಜೈಪುರದಲ್ಲಿ ನಡೆದ ಸೀನಿಯರ್‌ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯಾವಳಿಯಲ್ಲಿ ರಾಜ್ಯ ತಂಡ ಕ್ವಾರ್ಟರ್‌ ಪೈನಲ್‌ನಲ್ಲಿ ಪರಾಭವಗೊಂಡರೂ, ಪ್ರತಾಪ್‌ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ರೈಡರ್‌ ಎನಿಸಿಕೊಂಡಿದ್ದರು.

ರಾಷ್ಟ್ರೀಯ ಸಂಭ್ಯಾವ ತಂಡದ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ರಾಜ್ಯದಿಂದ ಆಯ್ಕೆಯಾಗಿದ್ದೆ. ಮೊದಲ ಹಂತದಲ್ಲಿ ಆನ್‌ಲೈನ್‌ ಮೂಲಕ ತರಬೇತಿ ಹಾಗೂ ಎರಡನೆ ಹಂತದಲ್ಲಿ ಶಿಬಿರದ ತರಬೇತಿ ನಿಗದಿ ಆಗಿತ್ತು. ಆನ್‌ಲೈನ್‌ ತರಬೇತಿಯು ಮುಗಿದಿದೆ. ಆದರೆ ನನಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ವಿಚಾರಿಸಿದರೆ ಆಯ್ಕೆಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎನ್ನುವ ಉತ್ತರವಷ್ಟೇ ಬಂದಿದೆ ಎನ್ನುತ್ತಾರೆ ಸಚಿನ್‌ ಪ್ರತಾಪ್‌.

ಸಚಿನ್‌ ಪ್ರತಾಪ್‌ ಬಡತನದಲ್ಲಿ ಬೆಳೆದು ಸಾಧನೆ ತೋರಿದ ಯುವಕ. ಆತ ಭಾರತ ಕಬಡ್ಡಿ ತಂಡದ ಸೀನಿಯರ್‌ ವಿಭಾಗದ ಸಂಭಾವ್ಯ ಆಟಗಾರರ ಶಿಬಿರಕ್ಕೆ ಆಯ್ಕೆಗೊಂಡಾಗ ಇಡೀ ಊರು ಸಂಭ್ರಮ ಪಟ್ಟಿತ್ತು. ಆದರೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿರುವುದು ಪ್ರತಿಭೆಗೆ ಮಾಡಿದ ಅನ್ಯಾಯ. ಈ ಬಗ್ಗೆ ಸೆ.24 ರಂದು ಸಚಿವ ಸಿ.ಟಿ.ರವಿ., ಶಾಸಕ ಹರೀಶ್‌ ಪೂಂಜ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎನ್ನುತ್ತಾರೆ ಜಿ.ಪಂ.ಸದಸ್ಯ ಎಸ್‌.ಎನ್‌.ಮನ್ಮಥ.

 

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next