ಬೆಂಗಳೂರು: ಐಸಿಸ್ ಉಗ್ರರಿಗೆ ಮೆಡಿಕಲ್ ಅಪ್ಲಿಕೇಷನ್ ಸಿದ್ಧಪಡಿಸುತ್ತಿದ್ದ ಬೆಂಗಳೂರು ಮೂಲದ ನೇತ್ರ ತಜ್ಞ ವೈದ್ಯನೊಬ್ಬನನ್ನು ಇಂದು ರಾಷ್ಟ್ರೀಯ ತನಿಖಾ ದಳವು ಬಂಧಿಸಿದೆ.
ಬಂಧಿತನನ್ನು ಅಬ್ದುರ್ ರಹಮಾನ್ ಎಂದು ಗುರುತಿಸಲಾಗಿದ್ದು ಈತ ನಗರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನೇತ್ರ ತಜ್ಞ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಎಂದು ಹಿಂದೂಸ್ತಾನ್ ಟೈಮ್ಸ್ ವೆಬ್ ಸೈಟ್ ವರದಿ ಮಾಡಿದೆ.
ಹೋರಾಟದಲ್ಲಿ ಗಾಯಗೊಳ್ಳುವ ಐಸಿಸ್ ಉಗ್ರರಿಗೆ ನೆರವಾಗುವ ನಿಟ್ಟಿನಲ್ಲಿ ಅಬ್ದುರ್ ರಹಮಾನ್ ಒಂದು ಮೆಡಿಕಲ್ ಮೊಬೈಲ್ ಅಪ್ಲಿಕೇಷನ್ ತಯಾರಿಸುತ್ತಿದ್ದ ಮತ್ತು ಐಸಿಸ್ ಹೋರಾಟಗಾರರಿಗೆ ಉಪಯೋಗವಾಗುವಂತೆ ಶಸ್ತ್ರಾಸ್ತ್ರ ಸಂಬಂಧಿ ಅಪ್ಲಿಕೇಷನ್ ಒಂದನ್ನೂ ಸಹ ತಯಾರಿಸುತ್ತಿದ್ದ ಎಂದು ರಾಷ್ಟ್ರೀಯ ತನಿಖಾ ದಳ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇಷ್ಟು ಮಾತ್ರವಲ್ಲದೇ 28 ವರ್ಷ ಪ್ರಾಯದ ಅಬ್ದುರ್ ರಹಮಾನ್ 2014ರಲ್ಲಿ ಸಿರಿಯಾದಲ್ಲಿರುವ ಐಸಿಸ್ ವೈದ್ಯಕೀಯ ಶಿಬಿರಗಳಿಗೂ ಭೇಟಿ ನೀಡಿ ಬಂದಿದ್ದ ಎಂಬ ಆಘಾತಕಾರಿ ಮಾಹಿತಿಯನ್ನು ಎನ್.ಐ.ಎ. ಹೊರಹಾಕಿದೆ. ಇಲ್ಲಿ ಆತ ಐಸಿಸ್ ಉಗ್ರರೊಂದಿಗೆ ಸುಮಾರು 10 ದಿನಗಳ ಕಾಲ ಇದ್ದು ಬಳಿಕ ಭಾರತಕ್ಕೆ ವಾಪಾಸಾಗಿದ್ದ.
ಕಳೆದ ಮಾರ್ಚ್ ತಿಂಗಳಿನಲ್ಲಿ ದೆಹಲಿಯ ಜಾಮಿಯಾ ನಗರದಲ್ಲಿ ಎನ್.ಐ.ಎ. ಬಲೆಗೆ ಬಿದ್ದಿದ್ದ ಕಾಶ್ಮೀರಿ ದಂಪತಿಗಳಾದ ಜಹನ್ ಜೈಬ್ ಸಮಿ ಮತ್ತು ಹೀನಾ ಬಶೀರ್ ಬೇಗ್ ಅವರು ನೀಡಿರುವ ಮಾಹಿತಿಯನ್ನು ಆಧರಿಸಿ ತನಿಖಾ ದಳವು ಅಬ್ದುರ್ ರಹಮಾನ್ ನನ್ನು ಇಂದು ಬಂಧಿಸಿದೆ.
ಸಮಿ ಮತ್ತು ಬೇಗ್ ಬಂಧನದ ಬಳಿಕ ಈ ಪ್ರಕರಣ ಮೊದಲಿಗೆ ದೆಹಲಿ ಪೊಲೀಸರ ವಿಶೇಷ ಘಟಕದಲ್ಲಿ ದಾಖಲುಗೊಂಡಿತ್ತು, ಈ ದಂಪತಿ ISKP (ಇಸ್ಲಾಮಿಕ್ ಸ್ಟೇಟ್ ಆಫ್ ಖೋರಾಸನ್ ಪ್ರಾವಿನ್ಸ್) ಎಂಬ ನಿಷೇಧಿತ ಉಗ್ರಸಂಘಟನೆಯೊಂದಿಗೆ ಸಂಬಂಧ ಇರುವುದು ತನಿಖೆಯ ವೇಳೆ ಬಹಿರಂಗಗೊಂಡಿತ್ತು ಮತ್ತು ಇವರು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ತನಿಖಾ ಸಂದರ್ಭದಲ್ಲಿ ಸಾಬೀತುಗೊಂಡಿತ್ತು.
ಐಸಿಸ್ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಂಬಂಧ ಸಿರಿಯಾ ಮೂಲದ ಐಸಿಸ್ ಉಗ್ರಚಟುವಟಿಕೆ ನಡೆಸುವವರಿಗೆ ಮತ್ತು ಜಹನ್ ಝೈಬ್ ಸಮಿ ಅವರೊಂದಿಗೆ ಸಂಚು ರೂಪಿಸುತ್ತಿದ್ದ ಕುರಿತಾಗಿ ರಹಮಾನ್ ವಿಚಾರಣಾ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎನ್.ಐ.ಎ. ಅಧಿಕಾರಿಗಳು ತಿಳಿಸಿದ್ದಾರೆ.