ಹೊಸದಿಲ್ಲಿ: ಈ ವರ್ಷ ಜೆಇಇ ಮೈನ್ಸ್ ಪರೀಕ್ಷೆಯ ಮೂಲಕ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಮತ್ತು ಕೇಂದ್ರದ ಅನುದಾನ ಆಧಾರಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ (ಸಿಎಫ್ಟಿಐ) ದಾಖಲಾಗುವ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದೆ.
ಜೆಇಇಯಲ್ಲಿ ಉತ್ತಮ ಸಾಧನೆ ಮಾಡಿದರೂ 12ನೇ ತರಗತಿಯಲ್ಲಿ ಶೇ. 75ರಷ್ಟು ಅಂಕ ಪಡೆದಿರಬೇಕೆಂಬ ನಿಯಮವನ್ನು ಈ ವರ್ಷ ಕೈಬಿಡುವುದಾಗಿ ತಿಳಿಸಿದೆ.
ಕೋವಿಡ್ 19 ಕಾರಣ ಸೆಂಟ್ರಲ್ ಸೀಟ್ ಅಲೋಕೇಶನ್ ಮಂಡಳಿ (ಸಿಎಸ್‌ಎಬಿ) ಈ ತೀರ್ಮಾನ ಕೈಗೊಂಡಿದೆ.
ಎನ್‌ಐಟಿ, ಸಿಎಫ್ಟಿಐಗಳಿಗೆ ದಾಖಲಾಗುವ ವಿದ್ಯಾರ್ಥಿಗಳು 12ನೇ ತರಗತಿ ಉತ್ತೀರ್ಣರಾದರೆ ಸಾಕು ಎಂದು ಎಚ್‌ಆರ್‌ಡಿ ಸಚಿವ ರಮೇಶ್ ಪೊಖ್ರಿಯಾಲ್ ಟ್ವೀಟ್ ಮಾಡಿದ್ದಾರೆ.