Advertisement

ಕೈದಿಗಳ ಮೇಲೆ ಹಲ್ಲೆ ಪ್ರಕರಣ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್

05:45 AM Jul 19, 2017 | Karthik A |

ಬೆಂಗಳೂರು: ಡಿಐಜಿ ರೂಪಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ 32 ಮಂದಿ ಕೈದಿಗಳನ್ನು ಸ್ಥಳಾಂತರಿಸುವ ವೇಳೆ ಜೈಲಿನ ಸಿಬಂದಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕಾರಾ ಗೃಹ ಇಲಾಖೆಯ ಪೊಲೀಸ್‌ ಮಹಾನಿರ್ದೇಶಕರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದು, 4 ವಾರಗಳಲ್ಲಿ ಉತ್ತರಿಸುವಂತೆ ಗಡುವು ನೀಡಿದೆ.

Advertisement

ಅಕ್ರಮದ ಬಗ್ಗೆ ರಾಜ್ಯ ಸರಕಾರ ತನಿಖೆಗೆ ಆದೇಶಿಸುತ್ತಿದ್ದಂತೆ 32 ಮಂದಿ ಕೈದಿಗಳನ್ನು ತಡರಾತ್ರಿ ವೇಳೆ ಮೈಸೂರು, ಬಳ್ಳಾರಿ, ಬೆಳಗಾವಿ ಮತ್ತು ದಾವಣಗೆರೆ ಜಿಲ್ಲಾ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ಈ ವೇಳೆ ಜೈಲಿನ ಸಿಬಂದಿ ಅಮಾನುಷವಾಗಿ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಬಗ್ಗೆ ಆಯೋಗಕ್ಕೆ ಮಾಹಿತಿಯಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.

ಶಶಿಕಲಾ ನಟರಾಜನ್‌ ಮತ್ತು ತೆಲಗಿ ಅವರಿಗೆ ನೀಡಿರುವ ಐಷಾರಾಮಿ ಸೌಲಭ್ಯಗಳ ಬಗ್ಗೆ ಡಿಐಜಿ ರೂಪಾ ವರದಿಯಲ್ಲಿ ಬಹಿರಂಗ ಪಡಿಸಿದ್ದರು. ಇದೇ ವೇಳೆ ಜೈಲಿಗೆ ಹೋಗಿದ್ದ ರೂಪಾ ಅವರೊಂದಿಗೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕೆಲ ಕೈದಿಗಳು ಧರಣಿ ನಡೆಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಜೈಲಿನ ಸಿಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ತನಿಖೆಗೆ ಅಡ್ಡಿಪಡಿಸುವ ಉದ್ದೇಶ
ಮತ್ತೂಂದೆಡೆ ಅಕ್ರಮದ ತನಿಖೆಗೆ ಸರಕಾರ ನೇಮಿಸಿರುವ ತನಿಖಾ ಸಮಿತಿ ಜೈಲಿಗೆ ಭೇಟಿ ನೀಡುವ ಮುನ್ನವೇ ಕೈದಿಗಳನ್ನು ಸ್ಥಳಾಂತರಿಸಿ ಹಲ್ಲೆ ನಡೆಸಿರುವುದು ತನಿಖೆಗೆ ಅಡ್ಡಿ ಪಡಿಸುವ ಉದ್ದೇಶ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ 4 ವಾರಗಳಲ್ಲಿ ಸಮಗ್ರ ವರದಿ ನೀಡುವಂತೆ ಆಯೋಗ ನೋಟಿಸ್‌ ಜಾರಿ ಮಾಡಿದೆ. ಜುಲೈ 17ರಂದು ಜೈಲಿನ ಕೈದಿಗಳನ್ನು ಅಕ್ರಮವಾಗಿ ಬೇರೆ ಕಾರಾಗೃಹಕ್ಕೆ ಸ್ಥಳಾಂತರಿಸುವ ವೇಳೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಂಸದೆ ಶೋಭಾ ಕರಂದ್ಲಾಜೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next