Advertisement

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ: ಮುಗಿಯದ ಸಮಸ್ಯೆಗಳು

05:48 PM Jan 25, 2022 | Team Udayavani |

ಕೋಟ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆ, ಬಳಕೆದಾರರಿಗೆ ನೀಡಬೇಕಾದ ಸೌಲಭ್ಯಗಳನ್ನು ಸರಿಯಾಗಿ ನವಯುಗ ಕಂಪೆನಿ ನೀಡುತ್ತಿಲ್ಲ ಎನ್ನುವ ದೂರುಗಳು ಪದೇ-ಪದೆ ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸಾಲಿಗ್ರಾಮದ ಸರ್ವಿಸ್‌ ರಸ್ತೆ ಕಾಮಗಾರಿ ವರ್ಷದಿಂದ ಸ್ಥಗಿತಗೊಂಡಿ ರುವುದು, ಟೋಲ್‌ನಲ್ಲಿ ಆ್ಯಂಬುಲೆನ್ಸ್‌ ಯಾವಾಗಲು ಕೆಟ್ಟು ನಿಂತು ಗ್ರಾಹಕರಿಗೆ ಸೇವೆ ನೀಡದಿರುವುದು. ಹಾಳಾದ ಬೀದಿ ದೀಪಗಳನ್ನು ಸರಿಪಡಿಸದಿರುವುದು ಹೀಗೆ ಸಾಲು-ಸಾಲು ಸಮಸ್ಯೆಗಳು ಇಲ್ಲಿ ಹಾಸುಹೊಕ್ಕಾಗಿವೆ.

Advertisement

ಸಾಲಿಗ್ರಾಮದಲ್ಲಿ ಸರ್ವಿಸ್‌ ರಸ್ತೆ ಕಾಮಗಾರಿ ಪ್ರಥಮ ಹಂತದಲ್ಲೇ ಮುಗಿಯಬೇಕಿತ್ತು. ಆದರೆ 10 ವರ್ಷ ತಡವಾಗಿ 2021 ಜನವರಿಯಲ್ಲಿ ಕೆಲಸ ಆರಂಭಗೊಂಡಿತ್ತು. ಯೋಜನೆಯಂತೆ ಸಾಲಿಗ್ರಾಮ ಮೀನು ಮಾರುಕಟ್ಟೆಯಿಂದ ಬಸ್‌ ನಿಲ್ದಾಣದ ವರೆಗೆ ಮತ್ತು ಕಾರ್ಕಡ ರಸ್ತೆಯಿಂದ ಮೀನು ಮಾರುಕಟ್ಟೆ ಎದುರಿಗೆ ಎರಡು ಕಡೆಗಳಲ್ಲಿ ಸರ್ವಿಸ್‌ ರಸ್ತೆ, ಚರಂಡಿ ನಿರ್ಮಾಣಗೊಳ್ಳಬೇಕಿತ್ತು. ಇದಕ್ಕಾಗಿ ಒತ್ತುವರಿ ಕಟ್ಟಡಗಳನ್ನು ತೆರವುಗೊಳಿಸಿ ಒಳಚರಂಡಿ, ರಸ್ತೆ ನಿರ್ಮಾಣ ಕೆಲಸ ಪ್ರಾರಂಭಿಸಲಾಗಿತ್ತು. ಅದರೆ ಸಕಾರಣವಿಲ್ಲದೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಮತ್ತೆ ಮುಂದುವರಿಯಲಿಲ್ಲ.

ಮಳೆಗಾಲದಲ್ಲಿ ಆಯೋಮಯ
ಮಳೆಗಾಲದಲ್ಲಿ ಪೇಟೆಯ ನೀರು ಸಾಲಿಗ್ರಾಮ ಹಾಲು ಡೇರಿಯಿಂದ ದೇವಾಡಿಗರಬೆಟ್ಟು ಮೂಲಕ ಕಲ್ಸಂಕ ತೋಡು ಮತ್ತು ಗುರುನರಸಿಂಹ ಕಲ್ಯಾಣ ಮಂಟಪ ಬಳಿಯಿಂದ ಕೆಳಭಾಗದಲ್ಲಿನ ತೋಡು ಸೇರುತ್ತದೆ. ಆದರೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದರಿಂದ ಚರಂಡಿಯಿಂದ ಮುಖ್ಯ ಕಾಲುವೆಗೆ ಸಂಪರ್ಕವಿಲ್ಲದೆ ರಸ್ತೆಯ ಮೇಲೆ ನೀರು ನಿಲ್ಲುತ್ತಿತ್ತು. ಸರ್ವಿಸ್‌ ರಸ್ತೆ ಇಲ್ಲದೆ ಕಾರ್ಕಡದಿಂದ ಮುಖ್ಯ ಪೇಟೆಗೆ ಆಗಮಿಸುವ ವಾಹನ ಸವಾರರಿಗೆ ಪ್ರತಿ ನಿತ್ಯ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಉಪ ಆಯುಕ್ತರ ಆದೇಶಕ್ಕೂ ಕಿಮ್ಮತ್ತಿಲ್ಲ
ಕಾಮಗಾರಿ ಸ್ಥಗಿತಗೊಂಡಿರುವ ಕುರಿತು ಕುಂದಾಪುರ ಸಹಾಯಕ ಕಮಿಷನರ್‌ರಿಗೆ ಎ.14 ರಂದು ಹೆದ್ದಾರಿ ಜಾಗೃತಿ ಸಮಿತಿ ಮನವಿ ಸಲ್ಲಿಸಿ ತ್ವರಿತ ಕ್ರಮಕೈಗೊಳ್ಳುವಂತೆ ಬೇಡಿಕೆ ಸಲ್ಲಿಸಿತ್ತು ಹಾಗೂ ಪರಿಶೀಲಿಸಿದ ಸಹಾಯಕ ಕಮಿಷನರ್‌ ಅವರು ಕಾಮಗಾರಿ ತತ್‌ಕ್ಷಣ ಪುನಃ ಆರಂಭಿಸುವಂತೆ ಎ. 17ರಂದು ಹೆದ್ದಾರಿ ಪ್ರಾಧಿಕಾರದ ಯೋಜನ ನಿರ್ದೇ ಶಕರಿಗೆ ಸೂಚನೆ ನೀಡಿದ್ದರು. ಆದರೆ ಹಲವು ತಿಂಗಳು ಕಳೆದರೂ ಕಾಮಗಾರಿ ಪುನರಾರಂಭಗೊಂಡಿಲ್ಲ.

ಹಬ್ಬದ ದಿನವೇ ಕತ್ತಲು
ದಾರಿ ದೀಪದ ನಿರ್ವಹಣೆಯ ಬಗ್ಗೆ ಕೂಡ ನವಯುಗ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಾರಿ ಸಾಲಿಗ್ರಾಮ ಜಾತ್ರೆಗೆ 15 ದಿನಗಳಿರುವಾಗ ಹಾಳಾದ ಬೀದಿ ದೀಪ ದುರಸ್ತಿಪಡಿಸುವಂತೆ ಸ್ಥಳೀಯ ಪ.ಪಂ. ಮನವಿ ಮಾಡಿತ್ತು.

Advertisement

ಆದರೆ ಮೇಲ್ನೋಟಕ್ಕೆ ಕೆಲಸ ಮಾಡಿದಂತೆ ತೋರಿಸುವ ಸಲುವಾಗಿ ಐದಾರು ಟ್ಯೂಬ್‌ಗಳನ್ನು ಮಾತ್ರ ಸರಿಪಡಿಸಿ ಕೈ ತೊಳೆದುಕೊಳ್ಳಲಾಯಿತು. ಹೀಗಾಗಿ ಜಾತ್ರೆಯಂದೇ ಪ್ರಮುಖ ಸ್ಥಳಗಳಲ್ಲಿ ಬೀದಿ ದೀಪವಿಲ್ಲದೆ ಕತ್ತಲು ಆವರಿಸಿತ್ತು.

ಪ್ರತಿಭಟನ ಮನಃ ಸ್ಥಿತಿ ಕ್ಷೀಣ
ನವಯುಗ ಕಂಪೆನಿಯ ಕಾಮ ಗಾರಿ ಲೋಪ ದೋಷವನ್ನು ಪುನಃ-ಪುನಃ ನೋಡಿ-ನೋಡಿ ಬೇಸತ್ತಿರುವ ಜನರು ಪ್ರತಿಭಟಿಸಲು ಮಾತ್ರ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಸಮಸ್ಯೆಗಳು ಸಮಸ್ಯೆಯಾಗಿಯೇ ಮುಂದುವರಿದೆ.

ಪದೇ-ಪದೆ ಕೆಟ್ಟು ನಿಲ್ಲುವ ಆ್ಯಂಬುಲೆನ್ಸ್‌
ಸಾಸ್ತಾನ ಟೋಲ್‌ನ ಆ್ಯಂಬುಲೆನ್ಸ್‌ ಸೇವೆ ನೀಡುವುದಕ್ಕಿಂತ ಗ್ಯಾರೇಜ್‌ನಲ್ಲಿ ದುರ ಸ್ತಿಗೆ ನಿಲ್ಲುವುದೇ ಹೆಚ್ಚಾಗಿದೆ ಹಾಗೂ ಒಮ್ಮೆ ದುರಸ್ತಿಗೆ ತೆರಳಿದರೆ ಹಿಂದಿರುಗಲು ಕನಿಷ್ಠ ಮೂರು ತಿಂಗಳು ಬೇಕು. ಟೋಲ್‌ನ ನಿಯಮದ ಪ್ರಕಾರ ತುರ್ತು ಸೇವೆಗಾಗಿ ನಿಯೋಜನೆಗೊಂಡ ಯಾವುದೇ ವಾಹನ ಕೆಟ್ಟಾಗ ಬದಲಿ ವ್ಯವಸ್ಥೆಯನ್ನು ಮಾಡಬೇಕು. ಆದರೆ ಇಲ್ಲಿ ಬದಲಿ ವ್ಯವಸ್ಥೆ ಮಾಡುತ್ತಿಲ್ಲ. ಹೀಗಾಗಿ ಅಪಘಾತಗಳು ನಡೆದಾಗ 108 ವಾಹನ ಅಥವಾ ಖಾಸಗಿ ವಾಹನಗಳನ್ನು ಅವಲಂಬಿಸಬೇಕಿದೆ. ಟೋಲ್‌ನ ಪಕ್ಕದಲ್ಲೇ ಅಪಘಾತ ನಡೆದಾಗ ಆ್ಯಂಬುಲೆನ್ಸ್‌ ಸಿಗದೆ ಆಸ್ಪತ್ರೆಗೆ ದಾಖಲಿಸುವುದು ತಡವಾಗಿ ಗಾಯಾಳು ಮೃತಪಟ್ಟ ಮೂರು ಪ್ರತ್ಯೇಕ ಪ್ರಕರಣಗಳು ವರದಿಯಾಗಿದೆ. ಇದೇ ರೀತಿ ಘಟನೆ ಸಾಲಿಗ್ರಾಮ, ಮಾಬುಕಳದಲ್ಲಿ ಕೂಡ ಸಂಭ ವಿ ಸಿದೆ. ಆದ್ದರಿಂದ ಹಳೆಯ ಅÂಂಬುಲೆನ್ಸ್‌ ಬದಲಿಗೆ ಸಾಸ್ತಾನ ಟೋಲ್‌ಗೆ ಹೊಸ ಆ್ಯಂಬುಲೆನ್ಸ್‌ ನೀಡಬೇಕು ಎನ್ನುವ ಬೇಡಿಕೆ ಇದೆ.

ಪ್ರತಿಭಟನೆ ಕುರಿತು ಚರ್ಚೆ
ಸರ್ವಿಸ್‌ ರಸ್ತೆ ಕಾಮಗಾರಿ ವರ್ಷದಿಂದ ಸ್ಥಗಿತಗೊಂಡಿರುವುದರಿಂದ ಹಾಗೂ ಆ್ಯಂಬುಲೆನ್ಸ್‌ ಪದೇ-ಪದೆ ಕೆಟ್ಟು ನಿಲ್ಲುವುದರಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದನ್ನು ಶೀಘ್ರ ಪೂರ್ಣಗೊಳಿಸುವಂತೆ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಹೀಗಾಗಿ ಸಾಲಿಗ್ರಾಮ ಭಾಗದಲ್ಲಿ ಸ್ಥಳೀಯ ವಾರ್ಡ್‌ ಸದಸ್ಯರು, ಪ.ಪಂ. ಸದಸ್ಯರ ಜತೆ ಸೇರಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದೇವೆ.
-ಶ್ಯಾಮ್‌ ಸುಂದರ್‌ ನಾೖರಿ,
ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ

ಹಂತ-ಹಂತವಾಗಿ ಪೂರ್ಣ
ಸಾಲಿಗ್ರಾಮ ಸರ್ವಿಸ್‌ ರಸ್ತೆ ಕಾಮಗಾರಿ ಅರ್ಥಿಕ ಅಡಚಣೆಯಿಂದ ಸ್ಥಗಿತಗೊಂಡಿದ್ದು ಹಂತ-ಹಂತವಾಗಿ ಪೂರ್ಣಗೊಳಿಸಲಾಗುವುದು.
-ಕಾಶಿ, ನವಯುಗ ಸಂಸ್ಥೆಯ
ಕಾಮಗಾರಿ ಉಸ್ತುವಾರಿ

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next